ಬೆಂಗಳೂರು: ಧ್ವಜ ವಿವಾದ ಸಂಬಂಧ ಸಚಿವ ಈಶ್ವರಪ್ಪ ತಲೆದಂಡಕ್ಕೆ ಪಟ್ಟು ಹಿಡಿದು ಕಾಂಗ್ರೆಸ್ ಹೋರಾಟ ಮುಂದುವರಿಸಿದೆ. ಉಭಯ ಸದನಗಳಲ್ಲಿ ಕಾಂಗ್ರೆಸ್ ಸದಸ್ಯರ ಅಹೋರಾತ್ರಿ ಧರಣಿ ನಾಲ್ಕನೇ ದಿನವೂ ಮುಂದುವರಿದಿದೆ. ನಾಳೆ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯೂ ತಲೆ ಕೆಡಿಸಿಕೊಂಡಿದೆ.
ಈಶ್ವರಪ್ಪ ಪ್ರಕರಣದಲ್ಲಿ ಕಾಂಗ್ರೆಸ್ ಎದುರಿಸುವ ಸಂಬಂಧ ನಾಳೆ ಬೆಳಗ್ಗೆ ಏಳು ಗಂಟೆಗೆ ಪಕ್ಷದ ಕಚೇರಿಯಲ್ಲಿ ತುರ್ತು ಸಭೆಯನ್ನು ಬಿಜೆಪಿ ಕರೆದಿದೆ. ಹೈಕಮಾಂಡ್ ಸೂಚನೆ ಮೇರೆಗೆ ಬಿಜೆಪಿ ಈ ಸಭೆ ನಡೆಸ್ತಿದೆ. ನಾಳೆ ಸಂಜೆ ಶಾಸಕರ ಜೊತೆ ಸಭೆ ನಡೆಸಲು ಸಿಎಂ ನಿರ್ಧರಿಸಿದ್ದಾರೆ. ಇತ್ತ ಉಭಯ ಪಕ್ಷಗಳ ನಾಯಕರ ನಡ್ವೆ ವಾಗ್ಯುದ್ಧ ಇವತ್ತು ಕೂಡ ಮುಂದುವರಿದಿತ್ತು. ರಾಷ್ಟ್ರಧ್ವಜಕ್ಕೆ ಅವಮಾನವಾದ್ರೂ ಸುಮ್ನೆ ಕೂರ್ಬೇಕಾ.. ಅಂಥವರು ಸಚಿವರಾಗಿ ಇರ್ಬೇಕಾ ಅಂತ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಿಎಂಗೆ ಸ್ವಾಭಿಮಾನ ಇದ್ದಿದ್ರೆ ಹರಕಲು ಬಾಯಿ ಈಶ್ವರಪ್ಪರನ್ನು, ನಿರಾಣಿ ಸಿಎಂ ಆಗ್ತಾರೆ ಅಂದಾಗಲೇ ವಜಾ ಮಾಡಬೇಕಿತ್ತು ಅಂತ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಆದರೆ ಇದಕ್ಕೆಲ್ಲಾ ಜಗ್ಗೋ ಮಾತೇ ಇಲ್ಲ ಎಂದು ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಈಶ್ವರಪ್ಪರನ್ನ ಕಾಂಗ್ರೆಸ್ ನೇಮಕ ಮಾಡಿದ್ಯಾ ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್‍ನ ಎಲ್ರೂ ಬಿಜೆಪಿ ಸೇರಿ ಆಮೇಲೆ ಸಲಹೆ ಕೊಡಿ ಅಂತಾ ಕುಟುಕಿದ್ದಾರೆ. ರಾಷ್ಟ್ರಭಕ್ತ ಈಶ್ವರಪ್ಪ ಕ್ಷಮೆ ಯಾಕೆ ಕೇಳ್ಬೇಕು ಅಂತಾ ರೇಣುಕಾಚಾರ್ಯ ಕೇಳಿದ್ದಾರೆ. ಇದನ್ನೂ ಓದಿ: ಅನಿವಾರ್ಯವಾಗಿ ಕೆಲವು ಹೆಣ್ಣುಮಕ್ಕಳು ಸಿಂಧೂರ ವಿಷಯ ಎತ್ತಿದ್ದಾರೆ: ಬಿ.ಸಿ.ನಾಗೇಶ್
ಅಲರ್ಟ್ ಆದ ಕೈ ಹೈಕಮಾಂಡ್:
ರಾಜ್ಯ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಕಾಂಗ್ರೆಸ್ ಹೈಕಮಾಂಡ್ ಅಲರ್ಟ್ ಆದಂತಿದೆ. ಚುನಾವಣಾ ತಂತ್ರಗಾರಿಕೆ, ಕಾಂಗ್ರೆಸ್ ಒಳಗಿನ ಕಚ್ಚಾಟ, ಪ್ರಸಕ್ತ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ರಾಜ್ಯ ನಾಯಕರಿಗೆ ಬುಲಾವ್ ನೀಡಿದೆ. ಫೆಬ್ರವರಿ 25ರಂದು ದೆಹಲಿಗೆ ಬರುವಂತೆ ಆಯ್ದ 15 ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಿದೆ. ಖುದ್ದು ರಾಹುಲ್ ಗಾಂಧಿ ಸಭೆ ನಡೆಸಲಿದ್ದಾರೆ. ರಾಜ್ಯ ನಾಯಕರ ನಡುವೆ ಸಮನ್ವಯತೆ, ಬಿಜೆಪಿ ಸರ್ಕಾರದ ವಿರುದ್ಧ ಹೋರಾಟದ ರೂಪುರೇಷೆ ಹಾಗೂ ಪಕ್ಷ ಸಂಘಟನೆ ಬಗ್ಗೆ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗ್ತಿದೆ.