– ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಸರ್ಕಾರ ಪತನ
ತುಮಕೂರು: ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಕರ್ನಾಟಕದಲ್ಲಿ (Karnataka) ರಾಜಕೀಯ ಬದಲಾವಣೆಗಳು ವೇಗ ಪಡೆಯಲಿವೆ. ಕಾಂಗ್ರೆಸ್ ಸರ್ಕಾರದ ಆಂತರಿಕ ಕಚ್ಚಾಟದಿಂದಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾದರೂ ಅಚ್ಚರಿಯಿಲ್ಲ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ ಸುರೇಶ್ ಗೌಡ (B Suresh Gowda) ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ನಾಯಕರ ನಡುವಿನ ಶೀತಲ ಸಮರವನ್ನು ಉಲ್ಲೇಖಿಸಿದ ಅವರು, ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ. ಶಿವಕುಮಾರ್ (DK Shivakumar) ನಡುವಿನ ನಡೆಗಳು ಸರ್ಕಾರವನ್ನು ಪತನದ ಅಂಚಿಗೆ ತಳ್ಳುತ್ತಿವೆ ಎಂದು ಆರೋಪಿಸಿದರು.
ಸಿಎಂ ರೇಸ್‌ನಲ್ಲಿ ಕೈ ನಾಯಕರ ಮಧ್ಯೆ ಸ್ಪರ್ಧೆ ನಡೆಯುತ್ತಿದೆ. ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಮತ್ತು ಎಂ.ಬಿ. ಪಾಟೀಲ್ ಅವರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಮುಖ್ಯಮಂತ್ರಿಯಾಗಲು ತಯಾರಿ ನಡೆಸಿದ್ದಾರೆ. ಮೇ 10ರಂದು ಮುಹೂರ್ತ ಕೂಡ ನಿಗದಿಯಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ಗೌಡರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿ ಅಂಗಳದಲ್ಲಿ ಡಿಸಿಎಂ ಡಿಕೆಶಿ ಪವರ್ ಕ್ಲೈಮ್!
ಒಂದು ವೇಳೆ ಈಗ ರಾಜ್ಯದಲ್ಲಿ ಚುನಾವಣೆ ನಡೆದರೆ, ಬಿಜೆಪಿ-ಜೆಡಿಎಸ್ ಮೈತ್ರಿಯು ಭರ್ಜರಿ ಜಯಭೇರಿ ಬಾರಿಸಲಿದೆ. 175ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಅವರು ವಿಶ್ವಾಸ ವ್ಯಕ್ತಪಡಿಸಿದರು.



