Connect with us

Districts

ಅಕ್ರಮ ಕಲ್ಲುಗಣಿಗಾರಿಕೆಗೆ ನೆರವಾದ ಆರೋಪ – ಮಂಡ್ಯದಲ್ಲಿ ಸಿಎಂ ವಿರುದ್ಧ ದೂರು ದಾಖಲು!

Published

on

Share this

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಂಡ್ಯದಲ್ಲಿ ದೂರು ದಾಖಲಾಗಿದೆ.

ಜಿಲ್ಲೆಯ ಪಾಂಡವಪುರ ತಾಲೂಕು ಬೇಬಿ ಬೆಟ್ಟದ ಕಾವಲ್ ಸರ್ವೆ ನಂ. 1ರ ಮೈಸೂರು ಮಹಾರಾಜರ ಖಾಸಗಿ ಸ್ವತ್ತನ್ನು ಕಬಳಿಸಿರುವ ಮತ್ತು ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ವ್ಯಕ್ತಿಗಳಿಗೆ ನೆರವಾಗ್ತಿದ್ದಾರೆ ಅಂತ ಆರ್‍ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಅವರು ರಾಜ್ಯಪಾಲರು ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ?: 1950ರಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿ ವಿ.ಪಿ.ಮೋಹನ್, ಮೈಸೂರು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ಶ್ರೀನಿವಾಸನ್ ಬೇಬಿ ಬೆಟ್ಟದ ಕಾವಲು ಸರ್ವೆ ನಂ. 1ರ 1623-07 ಎಕರೆ ಜಮೀನು ಮೈಸೂರು ಮಹಾರಾಜರಿಗೆ ಸೇರಿದ ಸ್ವತ್ತು ಅಂತಾ ಗುರುತಿಸಿದ್ರು. ಆದ್ರೆ 1968-69ರಲ್ಲಿ ಅಧಿಕಾರಿಗಳು ಆರ್‍ಟಿಸಿ ದಾಖಲೆಯನ್ನು ತಿದ್ದುಪಡಿ ಮಾಡಿ ಸರ್ಕಾರಿ ಜಾಗ ಅಂತಾ ಬದಲಾಯಿಸಿದ್ದಾರೆ. ನಂತರ 1988-89ರಿಂದ 1994-95ನೇ ಸಾಲಿನ ಆರ್‍ಟಿಸಿಯಲ್ಲಿ ಮೈಸೂರು ಮಹಾರಾಜರ ಖಾಸಗಿ ಸ್ವತ್ತನ್ನು ಸರ್ಕಾರಿ ಜಮೀನು ಅಂತಾ ಬದಲಾಯಿಸಿಕೊಂಡು ಕೆಲ ವ್ಯಕ್ತಿಗಳಿಗೆ ಕ್ವಾರಿಗೆ ಲೀಸ್ ನೀಡಿದ್ದಾರೆ ಅಂತಾ ಆರೋಪಿಸಿದ್ದಾರೆ.

ಇದನ್ನು ದುರುಪಯೋಗಪಡಿಸಿಕೊಂಡಿರುವ ಕೆಲವರು ಇಂದು ಅಕ್ರಮ ಕಲ್ಲುಗಣಿಗಾರಿಕೆ ಮಾಡುತ್ತಿದ್ದಾರೆ. ಇದ್ರಲ್ಲಿ ಸಿದ್ದರಾಮಯ್ಯ ಅವರ ದೂರದ ಸಂಬಂಧಿ, ಮೈಸೂರು ಮಹಾನಗರ ಪಾಲಿಕೆ ಸದಸ್ಯ ನಟರಾಜು ಕೂಡ ಸೇರಿದ್ದಾರೆ. ಇದು ಮಹಾರಾಜರಿಗೆ ಸೇರಿದ ಸ್ವತ್ತು ಅಂತಾ ಗೊತ್ತಿದ್ರೂ 2010ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ತಮ್ಮ ಸಂಬಂಧಿ ಬಿ.ಎಂ.ನಟರಾಜು ಒಡೆತನದ ಯತಿನ್ ಸ್ಟೋನ್ ಕ್ರಷರ್ಸ್ ಹಾಗೂ ಕಲ್ಲು ಗಣಿಗಾರಿಕೆ ಸಮಾರಂಭದ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡಿದ್ದರು ಎಂದು ಆರೋಪ ಮಾಡಿದ್ದಾರೆ.

ಈ ಅಕ್ರಮ ಕಲ್ಲುಗಣಿಗಾರಿಕೆ ಮಾಡುತ್ತಿದ್ದವರಿಗೆ ನೋಟೀಸ್ ಕೂಡ ನೀಡಲಾಗಿತ್ತು. ಆದ್ರೆ 2014ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ 24-02-2014ರಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಂಡ್ಯ ಮತ್ತು ಮೈಸೂರು ಅಧಿಕಾರಿಗಳ ಸಭೆ ನಡೆಸಿ ಕಲ್ಲು ಪುಡಿ ಮಾಡುವ ಘಟಕಗಳಿಗೆ ಬೇಕಾಗಿರುವ ಕಚ್ಛಾ ಮಾಲಿನ ಸಮಸ್ಯೆ ಬಗೆಹರಿಸಿಕೊಡಲು ನಿರ್ದೇಶನ ನೀಡೋ ಮೂಲಕ ಅಕ್ರಮ ಕಲ್ಲುಗಣಿಗಾರಿಕೆಗೆ ನೆರವು ನೀಡಿದ್ದಾರೆ. ಮಹಾರಾಜರ ಸ್ವತ್ತಿನಲ್ಲಿ ಗಣಿಗಾರಿಕೆ ನಡೆಸಲು ಸಿದ್ದರಾಮಯ್ಯ ಅವರೇ ಅಧಿಕಾರಗಳ ಮೇಲೆ ಒತ್ತಡ ತಂದಿರುವುದು ಕಂಡುಬಂದಿದೆ. ಆದ್ದರಿಂದ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಮತ್ತು ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement