BelgaumDistrictsKarnatakaLatestMain Post

ಹಾಸ್ಟೆಲ್‌ನಲ್ಲಿ ನುಸಿ, ಜಿರಳೆ ಮಿಶ್ರಿತ ಆಹಾರ- ರೊಚ್ಚಿಗೆದ್ದ ವಿದ್ಯಾರ್ಥಿಗಳು ಮಾಡಿದ್ದೇನು?

ಬೆಳಗಾವಿ: ವಸತಿ ನಿಲಯದ ವಿದ್ಯಾರ್ಥಿಗಳಿಗೆ ನುಸಿ, ಜಿರಳೆ ಮಿಶ್ರಿತ ಆಹಾರ ಪೂರೈಕೆ ಹಿನ್ನೆಲೆಯಲ್ಲಿ ಗಣೇಶ ಹಬ್ಬದ ದಿನವೇ ವಸತಿ ನಿಲಯದ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಸರ್ಕಾರಿ ಹಾಸ್ಟೆಲ್ ಅವ್ಯವಸ್ಥೆಗೆ ಬೇಸತ್ತ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳು ನುಸಿ, ಜಿರಳೆ ಮಿಶ್ರಿತ ಆಹಾರ ಪೂರೈಸುತ್ತಿರುವುದನ್ನು ಆರೋಪಿಸಿ ಊಟವನ್ನು ಬಿಟ್ಟು ತಟ್ಟೆ ಬಾರಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಬೆಳಗಾವಿಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ನುಸಿ, ಜಿರಲೆ ಮಿಶ್ರಿತ ಇಡ್ಲಿ, ಸಾಂಬಾರು, ಚಪಾತಿ, ಪಲ್ಯದ ಪಾತ್ರೆಗಳನ್ನಿಟ್ಟು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ನಮಗೆ ಆಹಾರ ಬೇಡ ವಿಷಬೇಕು ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. 300ಕ್ಕೂ ಹೆಚ್ಚು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿರುವ ವಸತಿ ನಿಲಯದಲ್ಲಿ ಅಡುಗೆ ಕೋಣೆಯಲ್ಲಿರುವ ಗೋದಾಮಿನ ತುಂಬಾ ನುಸಿಗಳು, ಜಿರಳೆಗಳು ಇವೆ. ಇಂತಹ ಆಹಾರ ಕೊಡಬೇಡಿ ವಿಷ ಕೊಡಿ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಮಾಹಿತಿ ತಿಳಿದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ಹಾಸ್ಟೆಲ್‌ಗೆ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಸ್ಟೆಲ್ ಗೋದಾಮಿನಲ್ಲಿದ್ದ ನುಸಿಗಳನ್ನು ನೋಡಿ ದಂಗಾದ ಶಾಸಕ ಅನಿಲ್ ಬೆನಕೆ ಸ್ಥಳದಲ್ಲೇ ಇದ್ದ ಸಮಾಜ ಕಲ್ಯಾಣ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ, ವಾರ್ಡನ್‌ಗಳಾದ ಶ್ರೀಧರ್ ದೊಡ್ಡಮನಿ, ಕೋಲಕಾರ್‌ಗೆ ತೀವ್ರ ಆಕ್ರೋಶ ಹೊರಹಾಕಿ, ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸುವುದಾಗಿ ಶಾಸಕ ಅನಿಲ್ ಬೆನಕೆ ಭರವಸೆ ನೀಡಿದ್ದಾರೆ.

ಇನ್ನೂ ಗಣೇಶ ಹಬ್ಬದ ದಿನವೇ ವಸತಿ ನಿಲಯ ವಿದ್ಯಾರ್ಥಿಗಳಿಗೆ ನುಸಿ, ಜಿರಳೆ ಮಿಶ್ರಿತ ಆಹಾರ ಪೂರೈಕೆ ಬಗ್ಗೆ ಡಿಸಿಗೆ ಮಾಹಿತಿ ಸಿಗುತ್ತಿದ್ದಂತೆ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಡಿಸಿ ನಿತೇಶಾ ಪಾಟೀಲ್ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಅಡುಗೆ ಕೋಣೆ, ಗೋದಾಮು ಸೇರಿದಂತೆ ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಲಕ್ಷ್ಮೀನಾರಾಯಣ ಕಾಂಗ್ರೆಸ್‌ಗೆ ರಾಜೀನಾಮೆ- ಬಿಜೆಪಿ ಸೇರಲು ಸಿದ್ಧ

ಬಳಿಕ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕೇಳಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮನವೊಲಿಸಿ ಶಾಸಕ ಅನಿಲ್ ಬೆನಕೆ, ಡಿಸಿ ನಿತೇಶ್ ಪಾಟೀಲ್ ವಿದ್ಯಾರ್ಥಿಗಳೊಂದಿಗೆ ಊಟ ಸೇವಿಸಿದರು. ಇನ್ನು ಮುಂದೆ ಮಕ್ಕಳಿಗೆ ನಿತ್ಯ ಗುಣಮಟ್ಟದ ಆಹಾರ ಪೂರೈಸುವಂತೆ ವಸತಿ ನಿಲಯ ಅಧಿಕಾರಿಗಳಿಗೆ ಡಿಸಿ ನಿತೇಶ ಪಾಟೀಲ್ ಸೂಚನೆ ನೀಡಿದರು. ಒಟ್ಟಿನಲ್ಲಿ ಸರ್ಕಾರಿ ಹಾಸ್ಟೆಲ್‌ನಲ್ಲಿ ಬಡ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ಪೂರೈಕೆ ಮಾಡುತ್ತಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಕನ್ನಡಿ ಆಗಿದೆ. ಇದನ್ನೂ ಓದಿ: AAP ನಾಯಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ದೆಹಲಿ ಲೆಫ್ಟಿನೆಂಟ್ ಗವರ್ನರ್

Live Tv

Leave a Reply

Your email address will not be published.

Back to top button