ಚಿಕ್ಕಮಗಳೂರು: ಬೊಮ್ಮಣ್ಣ (ಬಸವರಾಜ ಬೊಮ್ಮಾಯಿ) ನಮ್ಮ ಕೆ.ಎಂ.ಎಫ್ (KMF) ಅನ್ನು ಗುಜರಾತಿನ ಅಮೂಲ್ (Amul) ಗೆ ಸೇರಿಸಲು ಹೊರಟಿದ್ದೀರಾ, ಇದಕ್ಕೆ ಕೈ ಹಾಕಿದರೆ ಕರ್ನಾಟಕದಲ್ಲಿ ಹಾಲಿನ ಕ್ರಾಂತಿ ಆಗಲ್ಲ, ರಕ್ತ ಕ್ರಾಂತಿ ಮಾಡಬೇಕಾಗುತ್ತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲೆಯ ಕಡೂರಿನಲ್ಲಿ ನಡೆದ ಪಂಚರತ್ನ ಯಾತ್ರೆ (Pancharatna Yatre) ಯಲ್ಲಿ ಮಾತನಾಡಿದ ಅವರು, ನಂದಿನಿ ನಮ್ಮ ಕರ್ನಾಟಕದ ಕನ್ನಡಿಗರ ಸ್ವತ್ತು. ಗುಜರಾತ್ (Gujrat) ಮಾರ್ವಾಡಿಗಳಿಗೆ ಮಾರಾಟ ಮಾಡಲು ನಾವು ತಯಾರಿಲ್ಲ. ಬೊಮ್ಮಾಯಿ (Basavaraj Bommai) ಹಾಗೂ ಅಮಿತ್ ಶಾ (AmitShah) ಏನಾದರೂ ಮಾಡಿ ಗುಜರಾತ್ ಗೆ ಸೇರಿಸಲು ಹೊರಟಿದ್ದಾರೆ. ಆದರೆ ಆಗಲ್ಲ, ಆಗೋಕೆ ನಾವು ಬಿಡೋದಿಲ್ಲಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಮಾರುಕಟ್ಟೆಗೆ ಅಮುಲ್ – ನಂದಿನಿ ಉಳಿಸಲು ಕನ್ನಡಿಗರಿಂದ #SaveNandini ಅಭಿಯಾನ
ಅದಾನಿ, ಅಂಬಾನಿ, ಲೋಪಾನಿ, ಕಲ್ಯಾಣಿ, ಚುಂಚಾಣಿ ಯಾವ ಸುಡುಗಾಡಿದಾವೋ ಗೊತ್ತಿಲ್ಲ. ಮೋದಿ ಹೇಳುತ್ತಾರೆ ಗುಜರಾತ್ ಮಾಡೆಲ್ ಅಂತ. ಸ್ವಾಮಿ.. ನಮ್ಮೂರಲ್ಲಿ ಪಾನಿಪುರಿ ಮಾರೋನು ಗುಜರಾತ್ ಅವನೇ ಎಂದು ಪ್ರಧಾನಿ ಮೋದಿ ವಿರುದ್ಧ ಲೇವಡಿ ಮಾಡಿದ್ದಾರೆ. ನಿಮ್ಮ ಭಾಗ ನಮಗೆ ಬೇಕಾಗಿಲ್ಲ, ಕನ್ನಡಿಗರು ಕೊಡುವವರು, ಬೇಡುವವರಲ್ಲ. ನಿಮ್ಮ ಯೋಚನೆಯನ್ನ ಕೈಬಿಡಿ ಇಲ್ಲವಾದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬಿಜೆಪಿ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ಜೆಡಿಎಸ್ ಬಿಟ್ಟು ಕಾಂಗ್ರೆಸ್ (Congress) ಸೇರಿರುವ ವೈ.ಎಸ್.ವಿ.ದತ್ತ (YSV Datta) ಬಗ್ಗೆ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ. ಕಡೂರಿನಲ್ಲಿ ಒಬ್ಬ ಪುಣ್ಯಾತ್ಮ ಇದ್ದರು. ನಾವು ಕೊಡೋ ಜಾಗದಲ್ಲಿ ಇಟ್ಟಿದ್ವಿ, ಬೇಡೋ ಜಾಗಕ್ಕೆ ಹೋಗಿದ್ದಾರೆ. ಕಾರ್ಯಕರ್ತರೇ, ಇದು ನಿಮ್ಮ ಮನೆ, ಕೈಮುಗಿಯುತ್ತೇನೆ. ನೀವೆಲ್ಲಾ ವಾಪಸ್ ಬನ್ನಿ ದತ್ತ ಜೊತೆ ಕಾಂಗ್ರೆಸ್ ಸೇರಿರೋ ಕಾರ್ಯಕರ್ತರಿಗೆ ಮನವಿ ಮಾಡಿದರು.
ಸಿದ್ದರಾಮಯ್ಯ (Siddaramaiah) ವಿರುದ್ಧವೂ ಅಸಮಾಧಾನ ಹೊರಹಾಕಿರುವ ಇಬ್ರಾಹಿಂ, ಸಿದ್ದರಾಮಯ್ಯ, 2 ಸಾವಿರ ಯಾರಿಗೆ ಕೊಡ್ತೀಯಾ. ಅತ್ತೆ ನಾನು ಮನೆ ಯಜಮಾನಿ ಅಂತ, ಸೊಸೆ ನಾನು ನಿನ್ನ ಮಗನ ಹೆಂಡತಿ ಅಂತ. ಅತ್ತೆ-ಸೊಸೆ ಜಗಳ ಮಧ್ಯೆ ಜಗಳ ಶುರುವಾಗುತ್ತೆ. ಕಾಂಗ್ರೆಸ್ 2 ಸಾವಿರ ನೀಡಿ ಮನೆ-ಮನೆಗಳಲ್ಲಿ ಜಗಳ ಮಾಡಿಸಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧವೂ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.