– ಫಾರಂ ನೆಪ ಮಾಡಿಕೊಂಡು ಚುನಾವಣಾ ಆಯೋಗದ ಮೇಲೆ ಪ್ರತಿಭಟನೆ
ತುಮಕೂರು: ಸಿಎಂ ಡಿಕೆ ಶಿವಕುಮಾರ್ (DK Shivakumar) ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಿಡಿಕಾರಿದ್ದಾರೆ.
ತುಮಕೂರು (Tumakuru) ಜಿಲ್ಲೆ ಗುಬ್ಬಿ ತಾಲೂಕಿನ ಹಾಗಲವಾಡಿ ಜುಂಜಪ್ಪನ ಹಟ್ಟಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೈಸ್ ಪ್ರಾಜೆಕ್ಟ್ ಟೇಕ್ ಓವರ್ ಮಾಡುತ್ತಿದ್ದಾರೆ. ಅತ್ತ ಜನರ ವಿರೋಧದ ನಡುವೆಯೇ ಬಿಡದಿ ಟೌನ್ಶಿಪ್ ಮಾಡಲು ಹೊರಟಿದ್ದಾರೆ. ಫಾರಂ ನಂ-7 ಚುನಾವಣಾ ಆಯೋಗ ಕೊಟ್ಟಿರುವ ಹಕ್ಕು. ಈ ಫಾರಂ ಆಧರಿಸಿ ಅನುಮಾನ ಇದ್ದ ಮತದಾರರ ಬಗ್ಗೆ ದೂರು ಕೊಡಬಹುದು. ಫಾರಂ ನೆಪ ಮಾಡಿಕೊಂಡು ಚುನಾವಣಾ ಆಯೋಗದ ಮೇಲೆ ಪ್ರತಿಭಟನೆ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಎಫ್ಐಆರ್ ಮಾಡಿದ್ದಾರೆ. ನಾವು ಕೊಟ್ಟ ಅರ್ಜಿ ಸರಿ ಇಲ್ಲದೆ ಸಂಬಂಧಪಟ್ಟ ಅಧಿಕಾರಿಗಳನ್ನು ವಜಾ ಮಾಡುತ್ತಾರೆ. ಅದನ್ನು ದೊಡ್ಡ ಕ್ರಿಮಿನಲ್ ಎಂದು ಕೇಸ್ ಹಾಕಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್ಗೆ ಅಧಿಕಾರದ ಮದ ನೆತ್ತಿಗೆ ಏರಿದೆ. ಮದ ಏರಿದರೆ ಏನಾಗುತ್ತದೆ ಅನ್ನೋದು ಡಿಕೆಶಿ ನೋಡಿ ಕಲಿಬೇಕು. ವೀರಶೈವ ಲಿಂಗಾಯತ ಸ್ವಾಮಿಜಿಗಳ ಸಭೆಯಲ್ಲಿ ಅವಮಾನ ಮಾಡಿದ್ದಾರೆ. ಮೂರು ಸಾವಿರನೋ ಆರು ಸಾವಿರನೋ ಮಠ ಎಂದಿದ್ದಾರೆ. ಅವರ ಮದ ಇಳಿಸಲು ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: CEC ಜ್ಞಾನೇಶ್ ಕುಮಾರ್ ವಿರುದ್ಧ ʻಕೈʼ ಸರ್ಕಾರದ ತನಿಖೆ – 20 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ..!
ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಯಲ್ಲಿ ನೈಸ್ಗೆ ಕೈ ಹಾಕಿದರು. ನೈಸ್ ಪ್ರಾಜೆಕ್ಟ್ ಟೇಕ್ ಓವರ್ ಮಾಡುತ್ತಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಬಿಡಿದಿಯಲ್ಲಿ ರೈತರನ್ನು ಬೀದಿಗೆ ತರುತ್ತಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆದಾಗಿನಿಂದ ಚುನಾಯಿತ ಸರ್ಕಾರ ಇದೆ ಎಂದು ಯಾರಿಗೂ ಅನಿಸೋದಿಲ್ಲ. ಭೀಕರ ಬರ ಇದ್ದಾಗಲೂ ಕೇಂದ್ರದ ಅನುದಾನಕ್ಕೆ ಕಾದು ಕುಳಿತಿದ್ದಾರೆ. ಒಂದು ಹೆಕ್ಟೇರ್ಗೆ 2,5000 ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅವರು ಲಜ್ಜೆ ಗೆಟ್ಟು ಅಷ್ಟೊಂದು ಕಡಿಮೆ ದುಡ್ಡು ಘೋಷಣೆ ಮಾಡಿದ್ದಾರೆ. ನಾವು ಎಕರೆಗೆ 50 ಸಾವಿರ ರೂ. ಕೊಡುವಂತೆ ಆಗ್ರಹ ಮಾಡಿದ್ದೇವೆ. ಸಿಎಂ ರಿಯಲ್ ಎಸ್ಟೇಟ್ ಮಾಡಲು ಲಾಯಕ್ ಎಂದು ಜನ ಹೇಳುತ್ತಿದ್ದಾರೆ. ಅವರ ಪಕ್ಷದ ಶಾಸಕರೇ ಬರ ಪರಿಹಾರಕ್ಕಾಗಿ ರಾಜೀನಾಮೆ ಕೊಡಲು ಮುಂದಾಗಿದ್ದಾರೆ. ಗ್ಯಾರಂಟಿ ಕೊಟ್ಟು ಖಜಾನೆ ಖಾಲಿಯಾಗಿದೆ, ಸಂಬಳ ಕೊಡಲು ಹಣ ಇಲ್ಲ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹಣಕಾಸು ಪರಿಸ್ಥಿತಿ ಬಗ್ಗೆ ಸಿಎಂ ಶ್ವೇತಪತ್ರ ಹೊರಡಿಸಲಿ. ಪೊಲೀಸರಿಗೆ, ನೀರಾವರಿ ಇಲಾಖೆಯವರಿಗೆ ಸಂಬಳ ಕೊಡಲೂ ಹಣ ಇಲ್ಲ. ಇಂಥ ಬಡವರ, ರೈತ ವಿರೋಧಿ ಸರ್ಕಾರ ಕಿತ್ತು ಒಗೆಯಲು ನಾವು, ಜನ, ಸಂಕಲ್ಪ ಮಾಡಿದ್ದಾರೆ. ಮುಂದಿನ ದಿನದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹರಿಹಾಯ್ದರು. ಇದನ್ನೂ ಓದಿ: 2 ಚಿರತೆ, 1 ಸಿಂಹ ದತ್ತು ಪಡೆದ ಸತೀಶ್ ಜಾರಕಿಹೊಳಿ ಪುತ್ರ
ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಪಕ್ಷದ ರಾಷ್ಟ್ರೀಯ ನಾಯಕರ ಅಪೇಕ್ಷೆ ಕೂಡ ಬಿಜೆಪಿ ಜೆಡಿಎಸ್ ಒಟ್ಟಿಗೆ ಹೋಗೋದಾಗಿದೆ. ಈ ಕುರಿತು ನಾನು ಕುಮಾರಸ್ವಾಮಿ ಅವರ ಬಳಿ ಮಾತನಾಡಿದ್ದೇನೆ. ಮೈತ್ರಿ ಮುಂದುವರಿಯಬೇಕು ಅಂದರೆ ಈಗಲೇ ಕುಳಿತು ಚರ್ಚೆ ಮಾಡಬೇಕು. ಯಾವ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ, ಯಾವ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಮಾಡಬೇಕು ಎಂದು ಈಗಲೇ ಇತ್ಯರ್ಥ ಆದರೆ ನಮ್ಮ ಕಾರ್ಯಕರ್ತರಿಗೆ ಜಿ.ಪಂ, ತಾ.ಪಂಗೆ ಅನುಕೂಲ ಆಗುತ್ತದೆ. ಅದಕ್ಕೆ ಕುಮಾರಸ್ವಾಮಿ ಅವರು ಒಳ್ಳೆ ಸಲಹೆ ಎಂದು ಭರವಸೆ ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ಫ್ಲೈದುಬೈ ಘಟನೆ ಶ್ಲಾಘಿಸಿದ ಅಲ್ ಖೈದಾ; ದುಷ್ಟ ಅಮೆರಿಕ ಅಂತ್ಯವಾಗಲಿದೆ ಎಂದು ಸಂದೇಶ

