– ಇಸ್ರೇಲ್, ಅಮೆರಿಕನ್ನರು ಸಂಚರಿಸುವ ವಿಮಾನಗಳ ಮೇಲೆ ಇದೇ ರೀತಿಯ ದಾಳಿಗೆ ಅಲ್ ಖೈದಾ ಕರೆ
ದುಬೈ: ಫ್ಲೈದುಬೈ ವಿಮಾನ ಹೈಜಾಕ್ ಮಾಡಿ ಪತನಗೊಳಿಸಲು ಯತ್ನಿಸಿದ ಘಟನೆಯನ್ನು ಉಗ್ರ ಸಂಘಟನೆ ಅಲ್ ಖೈದಾ ಶ್ಲಾಘಿಸಿದೆ. ಇಸ್ರೇಲ್, ಅಮೆರಿಕನ್ನರು ಸಂಚರಿಸುವ ವಿಮಾನಗಳ ಮೇಲೆ ಇದೇ ರೀತಿಯ ದಾಳಿಗೆ ಅಲ್ ಖೈದಾ ಕರೆ ನೀಡಿದೆ.
ದುಷ್ಟ ಅಮೆರಿಕ ಅಂತ್ಯವಾಗಲಿದೆ ಎಂದು ಸಂದೇಶ ರವಾನಿಸಲಾಗಿದೆ. ಅರೇಬಿಕ್ ಭಾಷೆಯ ಲೇಖನದಲ್ಲಿ ದಾಳಿಗೆ ಕರೆ ನೀಡಲಾಗಿದೆ. ಅಲ್ ಖೈದಾ ನಂಟಿರುವ ಟೆಲಿಗ್ರಾಂ ಚಾನೆಲ್ಗಳಲ್ಲಿ ಈ ಸಂದೇಶ ಹರಡಿದ ಬಳಿಕ ಡಿಲೀಟ್ ಮಾಡಿದ್ದಾರೆ ಎಂದು ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಯುದ್ಧ ಇನ್ನೂ ಮುಗಿದಿಲ್ಲ. ಇಸ್ಲಾಂ ವಿರುದ್ಧ ಹೋರಾಡುತ್ತಿರುವ ಯಹೂದಿಗಳು, ಅಮೆರಿಕನ್ನರನ್ನು ಹೊತ್ತ ವಿಮಾನಗಳು ಆಕಾಶದಲ್ಲಿ ಹಾರಾಡುತ್ತಿರುತ್ತವೆ. 9/11, ಸೆ.30ರ ಮಾದರಿ ಆ ವಿಮಾನಗಳನ್ನು ಗುರಿಯಾಗಿಸಬಹುದು. ಅಮೆರಿಕ, ಯಹೂದಿಗಳು ಈಗ ಮೊದಲಿಗಿಂತ ಹೆಚ್ಚು ಶತ್ರುಗಳನ್ನು ಹೊಂದಿದ್ದಾರೆ. ದೇವರಲ್ಲಿ ನಂಬಿಕೆಯಿಲ್ಲದ ವ್ಯಕ್ತಿಯೊಬ್ಬ ಅವರನ್ನು ಗುರಿಯಾಗಿಸಬಹುದು. ಇಂತಹ ಕಾರ್ಯಾಚರಣೆಯಿಂದ ಅಂತಿಮವಾಗಿ ಇಸ್ಲಾಂಗೆ ಪ್ರಯೋಜನವಾಗಬಹುದು. ದುಷ್ಟ ಅಮೆರಿಕ ಸಾಮ್ರಾಜ್ಯ ಅಂತ್ಯಗೊಳ್ಳುವ ದಿನ ಬಂದೇ ಬರುತ್ತೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಅಲ್-ಖೈದಾ ಪರ ಬೆಂಬಲಿಗರು ಜುಲೈನಲ್ಲಿ ಆರಂಭಿಸಿದ ‘ಅಲ್-ಬಯಾನ್’ ಎಂಬ ಸಾಪ್ತಾಹಿಕ ಪ್ರಕಟಣೆಯ ಸಂಚಿಕೆಯಲ್ಲಿ ಈ ಕರೆ ನೀಡಿರುವುದು ಕಂಡುಬಂದಿದೆ. ಈ ಪ್ರಕಟಣೆಯನ್ನು ತೆಗೆದುಹಾಕುವ ಮೊದಲು, ಅದನ್ನು ಆ ಗುಂಪಿನ ಟೆಲಿಗ್ರಾಮ್ ಚಾನೆಲ್ಗಳಲ್ಲಿ ಹಂಚಿಕೊಳ್ಳಲಾಗಿತ್ತು ಎಂದು ವರದಿಯಾಗಿದೆ.
ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ ಹೈಜಾಕ್ ಮಾಡಿ ಪತನಗೊಳಿಸಲು ಒಮಾನ್ ಸಹ-ಪೈಲಟ್ ಯತ್ನಿಸಿದ್ದ. ವಿಮಾನ ಹಾರಾಟ ನಡೆಸುತ್ತಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ಹರಿತವಾದ ವಸ್ತುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಆರೋಪಿ ವಿಮಾನ ಪತನಕ್ಕೆ ಯತ್ನಿಸಿದ್ದ. ಪ್ರಾಣದ ಹಂಗು ತೊರೆದು ಭಾರತೀಯ ಪೈಲಟ್ ಆರೋಪಿ ಜೊತೆ ಹೋರಾಡಿ ಕಾಕ್ಪಿಟ್ ಓಪನ್ ಮಾಡಿದರು. ಈ ವೇಳೆ ಪ್ರಯಾಣಿಕರು, ಇತರೆ ಸಿಬ್ಬಂದಿ ಒಳಬಂದು ಪೈಲಟ್ ಸ್ಮಿತ್ಗೆ ನೆರವಾದರು. ಆರೋಪಿಯನ್ನು ಹಿಡಿದರು. ಅಂತಿಮವಾಗಿ 180 ಪ್ರಯಾಣಿಕರಿದ್ದ ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದಲ್ಲಿ ಲ್ಯಾಂಡ್ ಮಾಡಲಾಯಿತು.

