ಸಿಎಂ ತಮ್ಮ ಹೆಸರನ್ನ ಸಿದ್ದರಾವಣಯ್ಯ ಎಂದು ಇಟ್ಟುಕೊಳ್ಳಲಿ: ಪ್ರತಾಪ್ ಸಿಂಹ

Public TV
1 Min Read
PRATHAP SIMHA

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹೆಸರನ್ನ ಸಿದ್ದರಾವಣಯ್ಯ ಎಂದು ಇಟ್ಟುಕೊಂಡರೆ ಒಳ್ಳೆಯದು ಎಂದು ಸಂಸದ ಪ್ರತಾಪ್ ಸಿಂಹ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯನವರಲ್ಲಿ ರಾವಣನ ಗುಣಗಳು ಹೆಚ್ಚಿವೆ. ಎಲ್ಲದಕ್ಕೂ ನಾನು, ನನ್ನಿಂದಲೇ, ಎಲ್ಲವು ನನಗೆ ಸೇರಿದ್ದು, ಯಾರಿಗೂ ಕೊಡದೆ ಎಲ್ಲವನ್ನು ಕಿತ್ತುಕೊಳ್ಳುವ ಭಾವನೆ ರಾವಣನಿಗೆ ಇತ್ತು. ಸಿದ್ದರಾಮಯ್ಯ ಕೂಡ ಮಾತು ಮಾತಿಗೂ ನಾನು, ನನ್ನಿಂದಲೇ ಎನ್ನುತ್ತಾರೆ. ಈ ಎಲ್ಲಾ ಗುಣವು ಸಿದ್ದರಾಮಯ್ಯ ಅವರಲ್ಲೂ ಇದ್ದು, ಮೈಗೂಡಿಸಿಕೊಂಡಿದ್ದಾರೆ. ಆದ್ದರಿಂದ ಅವರ ಹೆಸರನ್ನು ಸಿದ್ದರಾಮಯ್ಯ ಬದಲು ಸಿದ್ದರಾವಣಯ್ಯ ಎಂದು ಇಟ್ಟುಕೊಂಡರೆ ಒಳ್ಳೆಯದು ಎಂದು ಹೇಳಿದ್ದಾರೆ.

ಕನಿಷ್ಠ 12-13 ಸಾವಿರ ಕೋಟಿ ರೂಪಾಯಿನ್ನು ಮೂರುವರೆ ವರ್ಷದಲ್ಲಿ ಮೋದಿ ಅವರು ಕೊಟ್ಟಿದ್ದ ಅನುದಾನದಲ್ಲಿ ಯೋಜನೆಗಳನ್ನು ನಾನೇ ತಂದಿದ್ದೇನೆ. ನಾವು ತಂದಿರುವ ಯೋಜನೆಯನ್ನು ಸಿದ್ದರಾಮಯ್ಯ ತಂದಿರುವ ಯೋಜನೆಯನ್ನು ಹೋಲಿಕೆ ಮಾಡಿ ನೋಡಿ. ನಾಲ್ಕು ಕಟ್ಟಡ ಮಾಡಿ ನಾನೇ ಮೈಸೂರು ಮಹಾರಾಜ ಎಂದು ಹೇಳುತ್ತಾರೆ. ಇದಕ್ಕಿಂತ ನಗೆಪಾಟಲಿನ ವಿಚಾರ ಬೇರೊಂದಿಲ್ಲ ಎಂದು ಸಿಎಂ ವಿರುದ್ಧ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

150 ಕೋಟಿ ರೂ. ಜೈದೇವ್ ಆಸ್ಪತ್ರೆ, 34 ಕೋಟಿ ರೂ. ಡಿಸಿ ಆಫೀಸ್, 20 ಕೋಟಿ ರೂ. ಕಮಿಷನರ್ ಆಫೀಸ್, 50 ಕೋಟಿ ರೂ. ಮಹಾರಾಣಿ ಕಾಲೇಜು ಮತ್ತು ಹಾಸ್ಟೆಲ್ ಎಷ್ಟೆಲ್ಲಾ ಸೇರಿದರೆ ಸುಮಾರು 400 ಕೋಟಿ ರೂ. ಆಗುತ್ತದೆ. ಆದರೆ ನಾವು ರೈಲ್ವೇ ಆದಾಯದಲ್ಲಿ ಸುಮಾರು 789 ಕೋಟಿ ರೂ. ಮೈಸೂರಿಗೆ ತಂದಿದ್ದೇವೆ. ಅಷ್ಟೇ ಅಲ್ಲದೇ ಮೈಸೂರು – ಬೆಂಗಳೂರು ಡಬಲ್ ಟ್ರ್ಯಾಕ್ ಸಂಪೂರ್ಣ ಮಾಡಿಸಿ ಹೊಸ ರೈಲು ತಂದಿದ್ದೇವೆ. ಮೈಸೂರು-ಬೆಂಗಳೂರು ನಡುವೆ 8ಲೈನ್ ಹೈವೇ ಆಗುತ್ತದೆ. ಅದಕ್ಕೂ 8,600 ಕೋಟಿ ರೂ. ನಾವು ಕೇಂದ್ರ ಸರ್ಕಾರದಿಂದ ತಂದು ಕೊಟ್ಟಿದ್ದೇವೆ ಎಂದು ಸಂಸದ ಪ್ರತಾಪ್‍ಸಿಂಹ ಸಿಎಂಗೆ ತಿರುಗೇಟು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *