ನವದೆಹಲಿ: ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ನ್ಯಾಯಾಲಯವು ತಮ್ಮ ನ್ಯಾಯಾಂಗ ಬಂಧನವನ್ನು ಮತ್ತೆ ಎರಡು ದಿನಗಳ ಕಾಲ ವಿಸ್ತರಿಸಿರುವುದನ್ನು ಪ್ರಶ್ನಿಸಿ, ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಸೌರವ್ ದಾಸ್(Saurav Das) ಮತ್ತು ಅಶುತೋಷ್ ರಾಂಕಾ(Ashutosh Ranka) ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನಿಷೇಧಾಜ್ಞೆ ಉಲ್ಲಂಘಿಸಿ ಜಂತರ್ ಮಂತರ್ನಲ್ಲಿ(Jantar Mantar) ರಾಷ್ಟ್ರಧ್ವಜ ಹಾರಿಸಲು ಯತ್ನಿಸುವ ಮೂಲಕ ಈ ಹಿಂದೆ ನೀಡಿದ್ದ ಬಾಂಡ್ ಷರತ್ತು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಇವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಅಕ್ಟೋಬರ್ 14 ರಂದು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮಹೇಶ್ ಕುಮಾರ್ ಮೀನಾ ಅವರು ಈ ಇಬ್ಬರಿಗೂ ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು. ಅಕ್ಟೋಬರ್ 19 ರಂದು ಈ ಪ್ರಕರಣದ ಮುಂದಿನ ವಿಚಾರಣೆ ನಡೆದಿದ್ದು, ಅಂದು ಇಬ್ಬರ ನ್ಯಾಯಾಂಗ ಬಂಧನವನ್ನು ಮತ್ತೆ ಎರಡು ದಿನಗಳ ಕಾಲ ವಿಸ್ತರಿಸಲಾಗಿತ್ತು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 135(3) ರ ಅಡಿಯಲ್ಲಿ ನ್ಯಾಯಾಂಗ ಬಂಧನ ವಿಸ್ತರಿಸುವಲ್ಲಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು ತಮ್ಮ ಅಧಿಕಾರವನ್ನು “ಸ್ವೇಚ್ಛಾನುಸಾರವಾಗಿ ಚಲಾಯಿಸಿದ್ದಾರೆ” ಎಂದು ಅರ್ಜಿದಾರರು ವಾದಿಸಿದ್ದಾರೆ. ಶ್ಯೂರಿಟಿ ಬಾಂಡ್ಗಳನ್ನು ಸಲ್ಲಿಸದ ಕಾರಣಕ್ಕೆ ಕಸ್ಟಡಿ ವಿಸ್ತರಿಸಲಾಗಿದೆ ಎಂದು ಹೇಳಲಾಗಿದೆಯಾದರೂ ಅಕ್ಟೋಬರ್ 19 ರಂದು ಕಾನೂನುಬದ್ಧವಾಗಿಯೇ ಶ್ಯೂರಿಟಿಗಳನ್ನು ಹಾಜರುಪಡಿಸಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
We have moved the Delhi High Court and requested an urgent night hearing.
Saurav and Ashutosh should not spend a single minute behind bars. Their liberty must not be curtailed because of political games.
Justice must not wait.
@Cockroachisback
— Ratna Singh (@whattalawyer) October 20, 2026
ಬೇರೆ ಯಾವುದೇ ಶ್ಯೂರಿಟಿಗಳು ಹಾಜರಿರಲಿಲ್ಲ ಎಂಬ ಮ್ಯಾಜಿಸ್ಟ್ರೇಟ್ ಅವರ ಅಭಿಪ್ರಾಯ ಮೇಲ್ನೋಟಕ್ಕೇ ತಪ್ಪು. ಅರ್ಜಿದಾರರ ಪರವಾಗಿ ಇಬ್ಬರು ಹೆಚ್ಚುವರಿ ಶ್ಯೂರಿಟಿಗಳು ಹಾಜರಿದ್ದರು ಮತ್ತು ನಿಗದಿತ ಬಾಂಡ್ಗಳು ಹಾಗೂ ಎಫ್ಡಿಆರ್ಗಳೊಂದಿಗೆ(ಯಾರಾದರೂ ಆರೋಪಿಗೆ ಜಾಮೀನು ನೀಡಲು ಮುಂದಾದಾಗ (ಶ್ಯೂರಿಟಿ ಅಥವಾ ಸಾಕ್ಷಿದಾರರಾಗುವಾಗ) ಅವರು ತಮ್ಮ ಆಸ್ತಿ ಅಥವಾ ಹಣಕಾಸಿನ ಭದ್ರತೆಯನ್ನು ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಒದಗಿಸಬೇಕಾಗುತ್ತದೆ. ಇದಕ್ಕಾಗಿ ಬ್ಯಾಂಕ್ನಲ್ಲಿ ಇಟ್ಟಿರುವ ಸ್ಥಿರ ಠೇವಣಿಯ ಒರಿಜಿನಲ್ ರಸೀದಿಯನ್ನು (FDR) ನ್ಯಾಯಾಲಯಕ್ಕೆ ಗ್ಯಾರಂಟಿಯಾಗಿ ಸಲ್ಲಿಸಲಾಗುತ್ತದೆ) ಮತ್ತಿಬ್ಬರು ಶ್ಯೂರಿಟಿಗಳು ಲಭ್ಯವಿದ್ದರೂ, ಅವುಗಳನ್ನು ಹಾಜರುಪಡಿಸಲು ಯಾವುದೇ ಅವಕಾಶ ನೀಡಲಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ಅವರ ಆದೇಶದಲ್ಲಿರುವ ಪ್ರತಿಯೊಂದು ಅಂಶವೂ ಕೇವಲ ತನಿಖಾಧಿಕಾರಿಯ ಅರ್ಜಿಯನ್ನು ಆಧರಿಸಿದೆ. ಅಧಿಸೂಚಿತವಲ್ಲದ ಸ್ಥಳದಲ್ಲಿ ಪ್ರತಿಭಟನೆ ನಡೆಸುವುದು ಕೇವಲ ನಿಯಂತ್ರಣದ ಪ್ರಶ್ನೆಯೇ ಹೊರತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಕಾನೂನಿನ ಬಗ್ಗೆ ಗೌರವವಿಲ್ಲದಂತೆ ರಾಂಕಾ, ದಾಸ್ ವರ್ತನೆ – SEM ಆದೇಶದಲ್ಲಿ ಏನಿದೆ?
ಏನಿದು ಪ್ರಕರಣ?
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೆಹಲಿಯಲ್ಲಿ ಕರೆ ನೀಡಲಾಗಿದ್ದ ಪ್ರತಿಭಟನೆಗೆ ಮುನ್ನ, ಅಕ್ಟೋಬರ್ 10 ರಂದು ಈ ಇಬ್ಬರು ನಾಯಕರನ್ನು ವಿಮಾನ ನಿಲ್ದಾಣದಲ್ಲಿ ಬಿಎನ್ಎಸ್ಎಸ್ ಸೆಕ್ಷನ್ 126 ಮತ್ತು 170 ರ ಅಡಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿತ್ತು. ಬಳಿಕ 50,000 ರೂ. ಮೊತ್ತದ ಶಾಂತಿ ಬಾಂಡ್ ಪಡೆದು ಅಂದೇ ಬಿಡುಗಡೆ ಮಾಡಲಾಗಿತ್ತು. ಆದರೆ, ಅಕ್ಟೋಬರ್ 14 ರಂದು ಜಂತರ್ ಮಂತರ್ನಲ್ಲಿ ತಿರಂಗಾ ಪ್ರತಿಭಟನೆ ನಡೆಸಲು ಮುಂದಾದಾಗ ಇವರನ್ನು ಪುನಃ ವಶಕ್ಕೆ ಪಡೆಯಲಾಯಿತು.
ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದ್ದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ರಿತು ರಾಜ್, ಆರೋಪಿಗಳು ಉದ್ದೇಶಪೂರ್ವಕವಾಗಿ ಬಾಂಡ್ ನಿಯಮಗಳನ್ನು ಉಲ್ಲಂಘಿಸಿ ಶಾಂತಿಭಂಗ ಉಂಟುಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದರು. ನಿಷೇಧಿತ ಪ್ರದೇಶಗಳಲ್ಲಿ ಪದೇಪದೆ ಪ್ರತಿಭಟನೆಗೆ ಕರೆ ನೀಡುವ ಅಭ್ಯಾಸವನ್ನು ಇವರು ಹೊಂದಿದ್ದಾರೆ ಎಂಬ ತನಿಖಾಧಿಕಾರಿಯ ವಾದ ಹಾಗೂ ಪೊಲೀಸರು ಸಲ್ಲಿಸಿದ ದಾಖಲೆಗಳನ್ನು ಪರಿಗಣಿಸಿದರೆ, ಇನ್ನು ಮುಂದೆ ಇಂತಹ ಕೃತ್ಯ ಮರುಕಳಿಸುವುದಿಲ್ಲ ಎಂಬ ಆರೋಪಿಗಳ ಭರವಸೆಯು ನಂಬಿಕೆಗೆ ಅರ್ಹವಾಗಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
ಹಾಜರುಪಡಿಸಲಾದ ಶ್ಯೂರಿಟಿಗಳು ಸೂಕ್ತವಾಗಿಲ್ಲವೆಂದು ಪರಿಗಣಿಸಿ, ಹೊಸ ಶ್ಯೂರಿಟಿಗಳನ್ನು ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ಬಾಂಡ್ ದಾಖಲೆಗಳಲ್ಲಿದ್ದ ಭಾವಚಿತ್ರಗಳು ಹಾಗೂ ಶ್ಯೂರಿಟಿಗಳ ಆಧಾರ್ ಕಾರ್ಡ್ ವಿವರಗಳ ನಡುವೆ ವ್ಯತ್ಯಾಸಗಳು ಕಂಡುಬಂದಿದ್ದಲ್ಲದೆ, ವಿಚಾರಣೆ ವೇಳೆ ಅವರು ಸಮರ್ಪಕ ಉತ್ತರ ನೀಡಲು ವಿಫಲರಾಗಿದ್ದರು ಎಂದು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
