ಮಳೆಗಾಲ ಬಂದಾಗ ತಂಪಿನ ವಾತಾವರಣದಲ್ಲಿ ಕೆಲವರು ಬಿಸಿ ಬಿಸಿಯಾಗಿ ಏನಾದರೂ ತಿನ್ನುವುದು ಸಾಮಾನ್ಯ. ಆದರೆ ಮಳೆಗಾಲದಲ್ಲಿ ಕೆಲವರಿಗೆ ಐಸ್‌ಕ್ರೀಮ್ ತಿನ್ನುವ ಅಭ್ಯಾಸವಿರುತ್ತದೆ. ಮುಂಗಾರಿನ ಸಂದರ್ಭದಲ್ಲಿ ಐಸ್‌ಕ್ರೀಮ್ ತಿನ್ನಲು ಬಯಸುವವರು ಒಂದು ಸಲ ಚಾಕೊಲೇಟ್ ಫಲೂಡಾ ಸವಿದು ನೋಡಿ. ನಿಮ್ಮ ಮನೆಯಲ್ಲಿ ಚಾಕೊಲೇಟ್ ಸಿರಪ್ ಮತ್ತು ಐಸ್‌ಕ್ರೀಮ್ ಇದ್ದರೆ ಇದನ್ನು ತುಂಬಾ ಸಿಂಪಲ್ ಆಗಿ ತಯಾರಿಸಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಚಾಕೊಲೇಟ್ ಫಲೂಡಾ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ದರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಟ್ರೈ ಮಾಡಿ ಕಾಬೂಲ್ ಕಡಲೆಯ ಟೇಸ್ಟಿ ಉಪ್ಪಿನಕಾಯಿ ರೆಸಿಪಿ
ಬೇಕಾಗುವ ಸಾಮಗ್ರಿಗಳು:
ಫಲೂಡಾ ಶ್ಯಾವಿಗೆ – ಅಗತ್ಯಕ್ಕೆ ತಕ್ಕಷ್ಟು
ಹಾಲು – ಕಾಲು ಕಪ್
ಕಸ್ಟರ್ಡ್ ಪೌಡರ್ – 1 ಚಮಚ
ಕೋಕೋ ಪೌಡರ್ – 1 ಚಮಚ
ಸಕ್ಕರೆ – 4 ಚಮಚ
ಚಿಯಾ ಸೀಡ್ಸ್ – 4 ಚಮಚ
ಚಾಕೊಲೇಟ್ ಐಸ್‌ಕ್ರೀಮ್ – ಅಗತ್ಯಕ್ಕೆ ತಕ್ಕಷ್ಟು
ಚಾಕೊಲೇಟ್ ಸಿರಪ್ – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು ಕಾದ ನಂತರ ಅದಕ್ಕೆ ಫಲೂಡಾ ಶ್ಯಾವಿಗೆ ಹಾಕಿಕೊಂಡು 2 ನಿಮಿಷಗಳ ಕಾಲ ಚನ್ನಾಗಿ ಬೇಯಿಸಿಕೊಳ್ಳಿ.
* ಇನ್ನೊಂದು ಸಣ್ಣ ಬೌಲ್‌ನಲ್ಲಿ ನೀರು ಹಾಕಿಕೊಂಡು ಅದರಲ್ಲಿ ಚಿಯಾ ಸೀಡ್ಸ್ ಹಾಕಿ 10 ನಿಮಿಷಗಳ ಕಾಲ ನೆನೆಯಲು ಬಿಡಿ.
* ಬಳಿಕ ಒಂದು ಪಾತ್ರೆಯಲ್ಲಿ ಕಾಲು ಕಪ್ ಹಾಲನ್ನು ಹಾಕಿಕೊಂಡು ಅದಕ್ಕೆ 1 ಚಮಚ ಕಸ್ಟರ್ಡ್ ಪೌಡರ್ ಮತ್ತು 1 ಚಮಚ ಕೋಕೋ ಪೌಡರ್ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
* ನಂತರ ಇದಕ್ಕೆ 4 ಚಮಚ ಸಕ್ಕರೆಯನ್ನು ಸೇರಿಸಿಕೊಂಡು ಸಕ್ಕರೆ ಕರಗುವವರೆಗೂ ತಿರುವಿಕೊಳ್ಳಿ.
* ಈಗ ಒಂದು ಗಾಜಿನ ಗ್ಲಾಸ್ ಅನ್ನು ತೆಗೆದುಕೊಂಡು ಅದಕ್ಕೆ ಚಾಕೊಲೇಟ್ ಸಿರಪ್ ಹಾಕಿಕೊಂಡು ಅದರ ಮೇಲೆ ಚಿಯಾ ಸೀಡ್ಸ್ ಹಾಕಿಕೊಳ್ಳಿ. ಅದರ ಮೇಲೆ ಫಲೂಡಾ ಶ್ಯಾವಿಗೆಯನ್ನು ಸೇರಿಸಿಕೊಳ್ಳಿ.
* ನಂತರ ಅದಕ್ಕೆ ಮಿಶ್ರಣ ಮಾಡಿಟ್ಟಿದ್ದ ಹಾಲನ್ನು ಹಾಕಿಕೊಂಡು ಅದರ ಮೇಲೆ ಚಾಕೊಲೇಟ್ ಐಸ್‌ಕ್ರೀಮ್ ಹಾಕಿದರೆ ಚಾಕೊಲೇಟ್ ಫಲೂಡಾ ಸವಿಯಲು ಸಿದ್ಧ. ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ಟ್ರೈ ಮಾಡಿ ಬ್ರೆಡ್ ಉಪ್ಮಾ