– 7 ವರ್ಷದ ಬಳಿಕ ಭಾರತಕ್ಕೆ ಭೇಟಿ
– ಭದ್ರತೆ, ಹೋಟೆಲ್ ವ್ಯವಸ್ಥೆಗಳ ಸಿದ್ಧತೆ ತೊಡಗಿದ್ದಾರೆ ಅಧಿಕಾರಿಗಳು
ನವದೆಹಲಿ: ಸೆಪ್ಟೆಂಬರ್ 12 ಮತ್ತು 13 ರಂದು ನವದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್(Xi Jinping) ಭಾರತಕ್ಕೆ(India) ಆಗಮಿಸುವ ನಿರೀಕ್ಷೆಯಿದೆ.
ಈ ಭೇಟಿ ಅಧಿಕೃತವಾಗಿ ಖಚಿತವಾದರೆ, 2020ರ ಗಾಲ್ವಾನ್ ಕಣಿವೆ ಸಂಘರ್ಷದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹಳಸಿದ ನಂತರ ಹಾಗೂ ಕಳೆದ ಏಳು ವರ್ಷಗಳಲ್ಲೇ ಕ್ಸಿ ಜಿನ್‌ಪಿಂಗ್ ಕೈಗೊಳ್ಳುತ್ತಿರುವ ಮೊದಲ ಭಾರತ ಪ್ರವಾಸ ಇದಾಗಲಿದೆ.
ಕ್ಸಿ ಜಿನ್‌ಪಿಂಗ್ ಅವರು ಬೃಹತ್ ನಿಯೋಗದೊಂದಿಗೆ ಶೃಂಗಸಭೆಗೆ ಆಗಮಿಸುವ ಸಾಧ್ಯತೆಯಿದೆ. ಈ ನಿಯೋಗದಲ್ಲಿ ಸುಮಾರು 400 ಅಧಿಕಾರಿಗಳು ಇರಲಿದ್ದು, ಇದು 2019ರ ಭಾರತ ಭೇಟಿಯ ನಿಯೋಗಕ್ಕಿಂತ ದುಪ್ಪಟ್ಟು ಗಾತ್ರದ್ದಾಗಿರಲಿದೆ ಎಂದು ಮೂಲಗಳು ತಿಳಿಸಿವೆ.
ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಮಾಲೋಚನೆಗಳು ತೀವ್ರಗೊಂಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಅವರು ಗಡಿ ವಿವಾದ ಕುರಿತ 25ನೇ ಸುತ್ತಿನ ವಿಶೇಷ ಪ್ರತಿನಿಧಿಗಳ (SR) ಮಟ್ಟದ ಮಾತುಕತೆಗಾಗಿ ಚೀನಾಕ್ಕೆ ತೆರಳಿದ್ದಾರೆ. ಕ್ಸಿ ಜಿನ್‌ಪಿಂಗ್ ಭೇಟಿಯ ಭದ್ರತೆ ಹಾಗೂ ಹೋಟೆಲ್ ವ್ಯವಸ್ಥೆಗಳ ಸಿದ್ಧತೆಯಲ್ಲೂ ಉಭಯ ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ.

ಕ್ಸಿ ಜಿನ್‌ಪಿಂಗ್ ಅವರ ಪ್ರವಾಸವನ್ನು ಚೀನಾ ವಿದೇಶಾಂಗ ಸಚಿವಾಲಯ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. “ನಾವು ಬ್ರಿಕ್ಸ್ ಸಹಕಾರಕ್ಕೆ ಸದಾ ಹೆಚ್ಚಿನ ಮಹತ್ವ ನೀಡುತ್ತೇವೆ. ಭಾರತ ಆಯೋಜಿಸುತ್ತಿರುವ ಈ ಬಾರಿಯ ಶೃಂಗಸಭೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಮತ್ತು ಶೃಂಗಸಭೆ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ” ಎಂದು ಚೀನಾ ಹೇಳಿದೆ.
ಭಾರತವೂ ಈ ಕುರಿತು ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ. ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಮತ್ತೆ ಪ್ರತಿಭಟನೆಗೆ ಮುಂದಾದ ಸಿಜೆಪಿ – ಸರ್ಕಾರದ ಈಡೇರದ ಭರವಸೆಗಳ ವಿರುದ್ಧ ಸೆ.5ಕ್ಕೆ ಶಾಂತಿಯುತ ಮೆರವಣಿಗೆ
ಜೂನ್ 2020 ರಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ನಂತರ ಭಾರತ-ಚೀನಾ ಸಂಬಂಧ ತೀವ್ರ ಹದಗೆಟ್ಟಿತ್ತು. ಭಾರತವು ಚೀನಾ ಹೂಡಿಕೆಗಳು ಮತ್ತು ಆ್ಯಪ್‌ಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿತ್ತು.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಇತ್ತೀಚೆಗೆ ಮಾತನಾಡಿ, 2020 ರಿಂದ 2024 ರವರೆಗೆ ಗಡಿ ಪರಿಸ್ಥಿತಿಯಿಂದಾಗಿ ಸಂಬಂಧಗಳು ಕಠಿಣ ಹಂತದಲ್ಲಿದ್ದವು. ಉಭಯ ದೇಶಗಳ ಸಂಬಂಧ ಉತ್ತಮಗೊಳ್ಳಲು ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವುದು ಅತ್ಯಂತ ಅಗತ್ಯ ಎಂದು ಸ್ಪಷ್ಟಪಡಿಸಿದ್ದಾರೆ.
ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾ ಮರುಹೆಸರಿಡಲು ನಡೆಸಿದ ಪ್ರಯತ್ನಗಳನ್ನು ಭಾರತ ತಳ್ಳಿಹಾಕಿದ್ದು, ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಎಂದು ಪುನರುಚ್ಚರಿಸಿದೆ. 2025 ರಲ್ಲಿ ಬ್ರೆಜಿಲ್ ಬ್ರಿಕ್ಸ್ ಶೃಂಗಸಭೆಗೆ ಗೈರಾಗಿದ್ದ ಕ್ಸಿ ಜಿನ್‌ಪಿಂಗ್ ಈ ಬಾರಿ ದೆಹಲಿಗೆ ಆಗಮಿಸಿದರೆ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಮಹತ್ವದ ರಾಜತಾಂತ್ರಿಕ ಬೆಳವಣಿಗೆಯಾಗಲಿದೆ.
ಈ ಹಿಂದೆ 2019 ರಲ್ಲಿ ಚೀನಿ ಅಧ್ಯಕ್ಷರು ಭಾರತಕ್ಕೆ ಆಗಮಿಸಿದ್ದರು. ನರೇಂದ್ರ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಅವರ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆಯು ಅಕ್ಟೋಬರ್ 11 ಮತ್ತು 12 ರಂದು ತಮಿಳುನಾಡಿನ ಐತಿಹಾಸಿಕ ಕರಾವಳಿ ಪಟ್ಟಣವಾದ ಮಹಾಬಲಿಪುರಂನಲ್ಲಿ ಯಶಸ್ವಿಯಾಗಿ ನಡೆದಿತ್ತು.
