ನವದೆಹಲಿ: AI ಸಂಶೋಧಕ ಲೆಕ್ಸ್ ಫ್ರಿಡ್ಮನ್ ಅವರೊಂದಿಗಿನ ಪಾಡ್‌ಕಾಸ್ಟ್ ನಂತರ ಪ್ರಧಾನಿ ಮೋದಿ ಅವರನ್ನು ಅಪರೂಪಕ್ಕೆ ಚೀನಾ ಹಾಡಿ ಹೊಗಳಿದೆ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ಚೀನಾ-ಭಾರತ ಸಂಬಂಧಗಳ ಕುರಿತು ಪ್ರಧಾನಿ ಮೋದಿಯವರ ಸಕಾರಾತ್ಮಕ ಹೇಳಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿ ಅವರ ಹೇಳಿಕೆಯು ಭಿನ್ನಾಭಿಪ್ರಾಯಕ್ಕಿಂತ ಮಾತುಕತೆಗೆ ಒಲವು ತೋರುತ್ತದೆ ಎಂದು ತಿಳಿಸಿದ್ದಾರೆ.
2000 ವರ್ಷಗಳಿಗೂ ಹೆಚ್ಚಿನ ಕಾಲದ ಇತಿಹಾಸದಲ್ಲಿ, ಎರಡೂ ದೇಶಗಳು (ಭಾರತ ಮತ್ತು ಚೀನಾ) ಸ್ನೇಹಪರ ವಿನಿಮಯವನ್ನು ಉಳಿಸಿಕೊಂಡಿವೆ ಎಂದು ನಾನು ಒತ್ತಿ ಹೇಳುತ್ತೇನೆ ಎಂದು ಮಾವೋ ನಿಂಗ್ ಸೋಮವಾರ ಬೀಜಿಂಗ್‌ನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎರಡೂ ದೇಶಗಳು ಪರಸ್ಪರ ಕಲಿತು ನಾಗರಿಕತೆಯ ಸಾಧನೆಗಳು ಮತ್ತು ಮಾನವ ಪ್ರಗತಿಗೆ ಕೊಡುಗೆ ನೀಡಿವೆ ಎಂದಿದ್ದಾರೆ.
ಈ ಹೇಳಿಕೆಯು ಪ್ರಧಾನಿ ಮೋದಿಯವರ ಭಾವನೆಗಳನ್ನು ಪ್ರತಿಧ್ವನಿಸುವಂತಿದೆ. ಭಾರತ ಮತ್ತು ಚೀನಾ ನಡುವೆ ನಿಜವಾದ ಸಂಘರ್ಷದ ಇತಿಹಾಸವಿಲ್ಲ. ಅವರ ಸಂಬಂಧ ಹೊಸದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೀವು ಐತಿಹಾಸಿಕ ದಾಖಲೆಗಳನ್ನು ನೋಡಿದರೆ, ಶತಮಾನಗಳಿಂದ ಭಾರತ ಮತ್ತು ಚೀನಾ ಪರಸ್ಪರ ಕಲಿತಿವೆ. ಅವರು ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ ಜಾಗತಿಕ ಒಳಿತಿಗೆ ಕೊಡುಗೆ ನೀಡಿದ್ದಾರೆ. ಹಳೆಯ ದಾಖಲೆಗಳು ಒಂದು ಹಂತದಲ್ಲಿ, ಭಾರತ ಮತ್ತು ಚೀನಾ ಮಾತ್ರ ವಿಶ್ವದ ಜಿಡಿಪಿಯ ಶೇಕಡಾ 50 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದವು ಎಂದು ಸೂಚಿಸುತ್ತವೆ. ಭಾರತದ ಕೊಡುಗೆ ಅಷ್ಟೊಂದು ದೊಡ್ಡದಾಗಿತ್ತು. ನಮ್ಮ ಸಂಬಂಧ ಆಳವಾದ ಸಾಂಸ್ಕೃತಿಕ ಸಂಪರ್ಕಗಳೊಂದಿಗೆ ಅತ್ಯಂತ ಪ್ರಬಲವಾಗಿವೆ ಎಂದು ನಾನು ನಂಬುತ್ತೇನೆ ಎಂದು ಪ್ರಧಾನಿ ಮೋದಿ, ಫ್ರಿಡ್ಮನ್‌ಗೆ ತಿಳಿಸಿದ್ದರು.