Connect with us

Chikkamagaluru

ಕುರಿ ಮಾಂಸಕ್ಕೆ ದನದ ಮಾಂಸ ಮಿಕ್ಸ್ – ನಾಲ್ವರ ಬಂಧನ

Published

on

ಚಿಕ್ಕಮಗಳೂರು: ಲಾಕ್‍ಡೌನ್ ವೇಳೆ ಮಾಂಸಕ್ಕೆ ಭಾರೀ ಬೇಡಿಕೆ ಇರುವ ಹಿನ್ನೆಲೆ ಕುರಿ ಮಾಂಸಕ್ಕೆ ದನದ ಮಾಂಸವನ್ನು ಮಿಕ್ಸ್ ಮಾಡಿ ನಾಲ್ವರು ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಗ್ರಾಮದಲ್ಲಿ ನಡೆದಿದೆ.

ಈ ಸಂಬಂಧ ಸಿರಾಜ್, ಅನಿಲ್ ಡಿಮೆಲ್ಲೊ, ಡೆಂನ್ಜಿಲ್, ಡೆಮಿಸ್ ಡಿಸೋಜ ಎಂಬವರನ್ನು ಬಂಧಿಸಲಾಗಿದೆ. ಕೊರೊನಾ ಆತಂಕದಿಂದ ಪ್ರತಿದಿನ ಜನಸಾಮಾನ್ಯರು ಆತಂಕದಿಂದ ಬದುಕುತ್ತಿದ್ದಾರೆ. ಜನರಿಗೆ ಊಟ-ತಿಂಡಿಗೆ ಸಮಸ್ಯೆ ಆಗಬಾರದೆಂದು ಸರ್ಕಾರ ಮಾಂಸವನ್ನು ಅತ್ಯಾವಶ್ಯಕ ಎಂದು ಪರಿಗಣಿಸಿ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಈ ನಡುವೆ ಮಾಂಸದ ದರ ಕೆ.ಜಿ ಗೆ 600-800ರವರೆಗೂ ಇದೆ.

ಮಾಂಸಕ್ಕೆ ಭಾರೀ ಬೇಡಿಕೆ ಇರುವುದರಿಂದ ಇದನ್ನೇ ಬಂಡವಾಳ ಮಾಡಿಕೊಂಡ ಕೊಪ್ಪ ತಾಲೂಕಿನ ಜಯಪುರದ ಬಸ್ ನಿಲ್ದಾಣದ ಕೋಳಿ ಅಂಗಡಿಯಲ್ಲಿ ಕುರಿ ಮಾಂಸಕ್ಕೆ ದನದ ಮಾಂಸ ಮಿಕ್ಸ್ ಮಾಡಿ ಮಾರಲು ಮುಂದಾಗಿದ್ದಾರೆ. ಸುಮಾರು ಒಂದೂವರೆ ಎರಡು ವರ್ಷ ಪ್ರಾಯದ ಹಸುವನ್ನು ಕದ್ದು, ಕೊಂದು, ಡೆಮಿಸ್ ಡಿಸೋಜನ ತೋಟದಲ್ಲಿ ಅದನ್ನು ಕಡಿದು ಅದರ ಚರ್ಮವನ್ನು ತೋಟದೊಳಗೆ ಹೂತು ಮಾಂಸವನ್ನ ತಂದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಜಯಪುರ ಬಸ್ ನಿಲ್ದಾಣದ ಎಸ್.ಆರ್ ಚಿಕನ್ ಸೆಂಟರ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಅಂಗಡಿಯಲ್ಲಿ ಸುಮಾರು 40 ಕೆ.ಜಿಯಷ್ಟು ದನದ ಮಾಂಸವೂ ಸಿಕ್ಕಿದೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.

Click to comment

Leave a Reply

Your email address will not be published. Required fields are marked *