ಚಿಕ್ಕಬಳ್ಳಾಪುರ: ಸ್ಥಳೀಯ ಸಂಸ್ಥೆ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಮತ ಕೇಳಲು ತೆರಳಿದ್ದ ಜೆಡಿಎಸ್ ಶಾಸಕ, ವಿಧಾನಸಭೆಯ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಅವರಿಗೆ ಮಹಿಳೆಯೊಬ್ಬರು ತರಾಟೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಚಿಂತಾಮಣಿ ಶಾಸಕರಾದ ಎಂ.ಕೃಷ್ಣಾರೆಡ್ಡಿ ಅವರು ಪಕ್ಷದ ಅಭ್ಯರ್ಥಿ ಪರ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದರು. ಈ ವೇಳೆ ತಮ್ಮ ನಿವಾಸಕ್ಕೆ ಆಗಮಿಸಿದ್ದ ಶಾಸಕರಿಗೆ ತರಾಟೆ ತೆಗೆದುಕೊಂಡಿರುವ ಮಹಿಳೆ, ನಗರದಲ್ಲಿ ಸರಿಯಾದ ರೀತಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಂಡು ಬಂದಿಲ್ಲ. ಶಾಸಕರು ಮತಯಾಚನೆ ಮಾಡಲು ಬರುತ್ತಾರೆ ಎಂದು ಇಂದು ಬೆಳಗ್ಗೆ ಪಾಲಿಗೆ ಸಿಬ್ಬಂದಿ ಈ ಪ್ರದೇಶವನ್ನು ಸ್ವಚ್ಛ ಮಾಡಿದ್ದಾರೆ. ನೀವು ನಮ್ಮ ಮನೆಯಲ್ಲಿ ಒಂದು ದಿನ ಇದ್ದು ನೋಡಿ, ನಾವು ನಿಮ್ಮ ಮನೆಯಲ್ಲಿ ಇರುತ್ತೇವೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Advertisement
Advertisement
ಮಹಿಳೆಯ ಅಸಮಾಧಾನ ಕಂಡ ಎಂ.ಕೃಷ್ಣಾರೆಡ್ಡಿ ಅವರು, ಅವರಿಗೆ ಸಮಾಧಾನ ಮಾಡಲು ಯತ್ನಿಸಿ, ಕೂಡಲೇ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೇ ಆ ವೇಳೆಗೆ ಸ್ಥಳೀಯ ಮುಖಂಡರು ಕೂಡ ಸಮಸ್ಯೆ ಬಗ್ಗೆ ಗಮನ ನೀಡುವುದಾಗಿ ತಿಳಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಶಾಸಕರ ಎದುರು ಮಹಿಳೆ ತಮ್ಮ ಸಮಸ್ಯೆಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.