ಚೆನ್ನೈ: ದೇವಸ್ಥಾನದ ಉಪದೇವಾಲಯಗಳ ಪ್ರತಿಮೆಗಳನ್ನು ನವೀಕರಿಸುವ (ಜೀರ್ಣೋದ್ಧಾರ) ಮಾಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ದೇಣಿಗೆ ಸಂಗ್ರಹಿಸಿ ದುರುಪಯೋಗ ಪಡಿಸಿಕೊಂಡಿರುವ ಯುಟ್ಯೂಬರ್‌ನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಪೆರಂಬಲೂರಿನ ಅರುಲ್ಮಿಗು ಮಧುರ ಕಾಳಿಯಮ್ಮನ್ ತಿರುಕೋಯಿಲ್‌ನ ಕಾರ್ಯನಿರ್ವಾಹಕ ಅಧಿಕಾರಿ ಟಿ.ಅರವಿಂದನ್ ಅವರ ದೂರಿನ ಆಧಾರದ ಮೇಲೆ ಕೇಂದ್ರ ಅಪರಾಧ ವಿಭಾಗದ (CCB) ಅವಡಿ ಪೊಲೀಸರು `ಇಳಯ ಭಾರತಂ’ ಯುಟ್ಯೂಬ್ ಚಾನೆಲ್‌ನ ಕಾರ್ತಿಕ್ ಗೋಪಿನಾಥ್ ಅವರನ್ನು ಬೆಳಗ್ಗೆ ಬಂಧಿಸಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿರುವ ಶೋರೂಂನಲ್ಲಿ ನವವಿವಾಹಿತೆ ಶವ ಪತ್ತೆ
ಕಾರ್ತಿಕ್ ಗೋಪಿನಾಥ್ ಇಳಯ ಭಾರತಂ ಹೆಸರಿನಲ್ಲಿ ಯುಟ್ಯೂಬ್ ಚಾನಲ್ ತೆರೆದು ಸಾರ್ವಜನಿಕರಿಗೆ ಹಣ ನೀಡುವಂತೆ ಕೇಳಿಕೊಂಡಿದ್ದಾನೆ. ಮಧುರ ಕಾಳಿಯಮ್ಮನ್ ದೇವಸ್ಥಾನದ ಉಪದೇವಾಲಯಗಳ ಪ್ರತಿಮೆಗಳನ್ನು ನವೀಕರಿಸುವ ನೆಪದಲ್ಲಿ ನಿಧಿ ಸಂಗ್ರಹಕ್ಕಾಗಿ ವೆಬ್‌ಸೈಟ್ ಸಹ ತೆರೆದಿದ್ದನು. ಈ ಸಂಬಂಧ ಹಿಂದೂ ಧಾರ್ಮಿಕ ಮತ್ತು ಧರ್ಮದತ್ತಿ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ನಿಧಿ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ವಂತ ಮಾವನಿಂದಲೇ ಸೊಸೆಯ ಮೇಲೆ ರೇಪ್ – ಸುಳ್ಳು ಆರೋಪವೆಂದು ಜಾಮೀನು ಕೊಟ್ಟ ಕೋರ್ಟ್
ಆದಾಗ್ಯೂ ಕಾರ್ತಿಕ್ ದೇವಸ್ಥಾನದ ಹೆಸರಿನಲ್ಲಿ ಸಂಗ್ರಹಿಸಿದ್ದ ಹಣವನ್ನು ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದಾನೆ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ಬಂಧಿಸಿದ ತಮಿಳುನಾಡು ಪೊಲೀಸರು ಐಪಿಸಿ ಸೆಕ್ಷನ್ 406 (ನಂಬಿಕೆ ದ್ರೋಹ) ಮತ್ತು ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.