– ಆಸ್ಪತ್ರೆಯಲ್ಲಿದ್ದರೂ ಉಳಿಯದ 39 ವಯಸ್ಸಿನ ಡಾಕ್ಟರ್ ಜೀವ
ಚೆನ್ನೈ: ಹೃದಯ ಶಸ್ತ್ರಚಿಕಿತ್ಸಕ ಆಸ್ಪತ್ರೆಯಲ್ಲಿ ರೌಂಡ್ಸ್ ಹಾಕುತ್ತಿದ್ದಾಗಲೇ ಹೃದಯ ಸ್ತಂಭನದಿಂದ ಮೃತಪಟ್ಟಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. 39 ವಯಸ್ಸಿನ ವೈದ್ಯನ ದುರಂತ ಸಾವು ದೇಶಾದ್ಯಂತ ಅಘಾತವನ್ನು ಸೃಷ್ಟಿಸಿದೆ.
ಹೃದಯ ಶಸ್ತ್ರಚಿಕಿತ್ಸಕ ಡಾ. ಗ್ರಾಡ್ಲಿನ್ ರಾಯ್ (39) ಅವರು ಹೃದಯ ಶಸ್ತ್ರಚಿಕಿತ್ಸಕರಾಗಿದ್ದರು. ಭಾರಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.
ಡಾ. ಗ್ರಾಡ್ಲಿನ್ ರಾಯ್ ಅವರು ವಾರ್ಡ್‌ನಲ್ಲಿ ರೌಂಡ್ಸ್ ಹಾಕುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ತಕ್ಷಣ ಅವರನ್ನು ಸಹೋದ್ಯೋಗಿಗಳು ಪರೀಕ್ಷೆಗೆ ಒಳಪಡಿಸಿದರು. ಸಿಪಿಆರ್ ಮಾಡಿದರು. ಆಂಜಿಯೋಪ್ಲಾಸ್ಟಿ ಕೂಡ ಮಾಡಿದರು. ಇಂಟ್ರಾ-ಆರ್ಟಿಕ್ ಬಲೂನ್ ಪಂಪ್, ಇಸಿಎಂಒ ಕೂಡ ಮಾಡಲಾಯಿತು. ಆದರೆ, 100% ಎಡ ಮೇನ್ ಆರ್ಟರಿ ಅಡಚಣೆಯಿಂದಾಗಿ ಹೃದಯ ಸ್ತಂಭನ ಆಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ವೈದ್ಯರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಸಹೋದ್ಯೋಗಿಯ ನಿಧನಕ್ಕೆ ಡಾ. ಸುಧೀರ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ದೀರ್ಘ-ಅನಿಯಮಿತ ಕೆಲಸದ ಸಮಯ, ಅನಾರೋಗ್ಯಕರ ಆಹಾರ ಪದ್ಧತಿ, ಜಡ ಜೀವನಶೈಲಿ, ಮಾನಸಿಕ ಹೊರೆ, ಅಧಿಕ ಒತ್ತಡ, ಧೂಮಪಾನ ಮತ್ತು ಮದ್ಯಪಾನವು ವೈದ್ಯಕೀಯ ವೃತ್ತಿಪರರಿಗೆ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಕುಮಾರ್ ಅವರು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
ವೈದ್ಯರು ಹೃದಯ ಆರೋಗ್ಯಕ್ಕೆ ಪೂರಕವಾಗಿ ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಇತರರ ಹೃದಯಗಳನ್ನು ಉಳಿಸಲು ತಮ್ಮ ಜೀವನವನ್ನು ಮುಡಿಪಾಗಿಡುವವರು ಹೆಚ್ಚಾಗಿ ತಮ್ಮದೇ ಆದ ಹೃದಯಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಕುಮಾರ್ ಅವರು ತಿಳಿಸಿದ್ದಾರೆ.