ಭಾರತ ಮತ್ತು ಪಾಕಿಸ್ತಾನ (Pakistan) ಪಂದ್ಯವೆಂದರೆ ಅದು ಯಾವತ್ತೂ ವಿಶೇಷವೇ. ಇಲ್ಲಿ ಯಾವುದು ಬಲಿಷ್ಠ, ಯಾವುದು ಕನಿಷ್ಠ ಎಂಬಿತ್ಯಾದಿ ಪ್ರಶ್ನಗಳು ಉದ್ಭವಿಸುವುದೇ ಇಲ್ಲ. ಎರಡೂ ತಂಡಗಳ ಆಟಗಾರರು ಉತ್ಸಾಹದಲ್ಲಿರುತ್ತಾರೆ. ಅದೇ ರೀತಿ ಎರಡೂ ತಂಡಗಳ ಮೇಲೆ ಅತೀವ ಒತ್ತಡವೂ ಇರುತ್ತದೆ. ಈ ಒತ್ತಡವನ್ನು ಮೀರಿ ನಿಂತು ಉತ್ತಮ ಪ್ರದರ್ಶನ ತೋರಿದವರೇ ಇಲ್ಲಿ ವಿಜಯ ಶಾಲಿಗಳಾಗುತ್ತಾರೆ.
ಐಸಿಸಿ ಏಕದಿನ ವಿಶ್ವಕಪ್ ನ ವಿಚಾರಕ್ಕೆ ಬಂದಾಗ ಇತ್ತಂಡಗಳಲ್ಲಿ ಭಾರತದ್ದೇ ಪಾರಮ್ಯ, ಭಾರತವೇ ಸಾರ್ವಭೌಮ. ಈವರೆಗೆ ನಡೆದಿರುವ 8 ಪಂದ್ಯಗಳಲ್ಲಿ ಏಂಟರಲ್ಲೂ ಭಾರತವೇ ಗೆದ್ದಿದೆ. ಒಂದು ಬಾರಿಯೂ ಪಾಕ್ ಗೆ ಗೆಲುವಿನ ನಗು ಬೀರಲು ಸಾಧ್ಯವಾಗಿಲ್ಲ. ಆದ್ರೆ ಮಿನಿ ವಿಶ್ವಕಪ್ ಖ್ಯಾತಿಯ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಬಂದ್ರೆ ಇಲ್ಲಿ ಫಲಿತಾಂಶ 40:60 ಇದೆ. ಇದನ್ನೂ ಓದಿ: ಕೊನೆ ಓವರ್‌ನಲ್ಲಿ ಹ್ಯಾರಿಸ್ ಹ್ಯಾಟ್ರಿಕ್ ವಿಕೆಟ್; ಡೆಲ್ಲಿ ಆಲೌಟ್ – ಯುಪಿಗೆ 33 ರನ್‌ಗಳ ಜಯ
Advertisement
Advertisement
ಈವರೆಗೆ ಭಾರತ ಮತ್ತು ಪಾಕಿಸ್ತಾನ (Ind vs Pak) ತಂಡಗಳು ಪರಸ್ಪರ 5 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತ ತಂಡ 2 ಬಾರಿ ಗೆದ್ದಿದ್ದರೆ, 3 ಬಾರಿ ಪಾಕಿಸ್ತಾನದ್ದೇ ಮೇಲುಗೈ. ಅದರಲ್ಲೂ ಒಂದು ಬಾರಿ ಅಂತೂ ಫೈನಲ್ ನಲ್ಲೇ ಭಾರತ ತಂಡವನ್ನು ಸೋಲಿಸಿರುವ ಹೆಗ್ಗಳಿಕೆ ಪಾಕಿಸ್ತಾನದ್ದು. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಫೆಬ್ರವರಿ 19ರಂದು ಚಾಲನೆ ಸಿಕ್ಕಿದ್ದು ಇಂದು ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಸಂದರ್ಭದಲ್ಲಿ 1998 ರಿಂದ 2017ರ ವರೆಗೆ ಇತ್ತಂಡಗಳ ನಡುವೆ ನಡೆದಿರುವ ಐದು ಮುಖಾಮುಖಿಗಳ ವಿವರ ಇಲ್ಲಿದೆ. ಇದನ್ನೂ ಓದಿ: ಆಂಗ್ಲರನ್ನು ಸದೆಬಡಿದ ಇಂಗ್ಲಿಸ್ – ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ!
Advertisement
Advertisement
2004ರಲ್ಲಿ ಪಾಕ್‌ಗೆ ಮೊದಲ ಗೆಲುವಿನ ಕೇಕೆ
ಇಂಗ್ಲೆಂಡ್‌ನ ಎಡ್ಜ್‌ಬಾಸ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಇನ್ಝಮಾಮುಲ್ ಹಕ್ ಅವರು ಫೀಲ್ಡಿಂಗ್ ಆಯ್ದುಕೊಂಡರು. ವೇಗಿಗಳಾದ ಶೊಯೇಬ್ ಅಖ್ತರ್ ಮತ್ತು ನವೀದ್ ಉಲ್ ಹಸನ್ ದಾಳಿಗೆ ತತ್ತರಿಸಿದ ಭಾರತ ತಂಡ 200 ರನ್ ಗಳಿಗೆ ಆಲೌಟ್ ಆಯಿತು. ನಾಯಕ ಸೌರವ್ ಗಂಗೂಲಿ (0), ವೀರೇಂದ್ರ ಸೆಹ್ವಾಗ್ (10), ವಿವಿಎಸ್ ಲಕ್ಷ್ಮಣ್(3) ಪಾಕ್ ಬೌಲಿಂಗ್ ಅನ್ನು ಎದುರಿಸಲಾಗದೆ ಬೇಗನೇ ಪೆವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ದ್ರಾವಿಡ್ (67) ಮತ್ತು ಮೊಹಮ್ಮದ್ ಕೈಫ್ (27) ನಿಧಾನಗತಿಯ ಬ್ಯಾಟಿಂಗ್ ನಡೆಸಿ ತಂಡವನ್ನು ಕುಸಿತದಿಂದ ತಪ್ಪಿಸಿದರೂ ರನ್ ರೇಟ್ ಮೇಲೆ ಹೊಡೆತ ಬಿತ್ತು.
ಕೈಫ್ ವಿಕೆಟ್ ಪತನದ ಬಳಿಕ ಕ್ರೀಸಿಗೆ ಬಂದ ಯುವರಾಜ್ ಸಿಂಗ್ (0) ಬಂದ ವೇಗದಲ್ಲಿ ಪೆವಿಲಿಯನ್ ಗೆ ಮರಳಿದರೆ, ರೋಹನ್ ಗವಸ್ಕರ್ ಕ್ರೀಸಿನಲ್ಲಿ ಸುಮ್ಮನೇ ಸಮಯ ದೂಡಿದರು. ಅಪರೂಪಕ್ಕೆ ಬ್ಯಾಟ್ ಬೀಸುತ್ತಿದ್ದ ಅಜಿತ್ ಅಗರ್ಕರ್ ಅವರು 50 ಎಸೆತಗಳಿಂದ 47 ರನ್ ಗಳಿಸಿ ತಂಡದ ಮೊತ್ತ 200ರ ಗಡಿಗೆ ತಲುಪಲು ಕಾರಣವಾದರು. ಸಾಧಾರಣ ಮೊತ್ತವನ್ನು ಬೆಂಬತ್ತಿ ಹೊರಟ ಪಾಕಿಸ್ತಾನ ತಂಡ 27 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಾಗ ಭಾರತ ತಂಡ ಗೆಲುವಿನ ಕನಸು ಕಂಡಿತ್ತು. ಆದರೆ ಮೊಹಮ್ಮದ್ ಯೂಸುಫ್ ಅವರು ಅಜೇಯ 81 ರನ್‌ಗಳ ನೆರವಿನಿಂದ ಪಾಕಿಸ್ತಾನ ತಂಡ 49.2 ಓವರ್ ಗಳಲ್ಲಿ ಗುರಿ ತಲುಪಿತು. ಅಂತಿಮವಾಗಿ 3 ವಿಕೆಟ್‌ಗಳಿಂದ ಗೆದ್ದು ಬೀಗಿತು. ಇದು ಐಸಿಸಿ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಪ್ರಥಮ ವಿಜಯವಾಗಿದೆ.
2009ರಲ್ಲೂ ಭಾರತ ವಿಫಲ
ದಕ್ಷಿಣ ಆಫ್ರಿಕಾದಲ್ಲಿ ನಡೆದ ಭಾರತ vs ಪಾಕಿಸ್ತಾನ ಮುಖಾಮುಖಿಯಲ್ಲಿ ಭಾರತ ತಂಡ 54 ರನ್ ಗಳಿಂದ ಪರಾಭವ ಅನುಭವಿಸಿತು. ಟಾಸ್ ಗೆದ್ದ ಪಾಕ್ ನಾಯಕ ಯೂನಸ್ ಖಾನ್ ಬ್ಯಾಟಿಂಗ್ ಆಯ್ದುಕೊಂಡರು. ಶೊಯೇಬ್ ಮಲಿಕ್ ಅವರು ಅಮೋಘ ಶತಕ(128)ದ ಮತ್ತು ಮೊಹಮ್ಮದ್ ಯೂನುಸ್ ಅವರ ಅರ್ಧಶತಕ (87) ಗಳ ನೆರವಿನಿಂದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು. ಆಶೀಶ್ ನೆಹ್ರಾ 4 ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: ಡಕೆಟ್, ರೂಟ್ ಶತಕದ ಜೊತೆಯಾಟ – ಗರಿಷ್ಠ ರನ್ ದಾಖಲೆ, ಆಸೀಸ್ ಗೆಲುವಿಗೆ 352 ರನ್ ಗುರಿ
ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಸಚಿನ್ ವಿಕೆಟ್ ಬೇಗನೇ ಕಳೆದುಕೊಂಡರೂ ಗೌತಮ್ ಗಂಭೀರ್ (57) ಮತ್ತು ರಾಹುಲ್ ದ್ರಾವಿಡ್ (76) ಅವರು ತಂಡವನ್ನು ಆಧರಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ (46) ಅವರಿಗೆ ಸರಿಯಾದ ಬೆಂಬಲ ಸಿಗದ್ದರಿಂದ ಭಾರತ ತಂಡ ಅಂತಿಮವಾಗಿ 44.5 ಓವರ್ ಗಳಲ್ಲಿ 248 ರನ್ ಗೆ ಸರ್ವಪತನ ಕಂಡಿತು.
2013ರಲ್ಲಿ ಭಾರತಕ್ಕೆ ಮೊದಲ ಗೆಲುವು
ಎಡ್ಜ್‌ಬಾಸ್ಟನ್ ಮಳೆಯಿಂದ ತೊಂದರೆಗೀಡಾದ ಪಂದ್ಯದಲ್ಲಿ ಭಾರತ ತಂಡ ಡಕ್‌ವರ್ತ್ ಲೂಯಿಸ್ ನಿಯಮದಡಿ 8 ವಿಕೆಟ್ ಗಳ ಭರ್ಜರಿ ವಿಜಯ ಸಾಧಿಸಿತು. ಮಳೆಯಿಂದಾಗಿ 40 ಓವರ್ ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡ ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ 39.4 ಓವರ್ ಗಳಲ್ಲಿ 165 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಭಾರತ ತಂಡ 19.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿತ್ತು. ಆಗ ಮಳೆ ಮುಂದುವರಿದ ಹಿನ್ನಲೆಯಲ್ಲಿ ಭಾರತವನ್ನು ವಿಜಯಿ ಎಂದು ಘೋಷಿಸಲಾಯಿತು.
2017ರಲ್ಲಿ ಇತ್ತಂಡಗಳಿಗೂ ಬೇವು ಬೆಲ್ಲ
ಈ ವರ್ಷ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಗುಂಪು ಹಂತದ ಪಂದ್ಯದಲ್ಲಿ ಭಾರತ ಭರ್ಜರಿ ವಿಜಯ ಸಾಧಿಸಿದರೆ ಫೈನಲ್ ನಲ್ಲಿ ಪಾಕಿಸ್ತಾನ ಗೆದ್ದು ಟ್ರೋಫಿ ಮೇಲೆ ಹಕ್ಕು ಸಾಧಿಸಿತು. ಎಡ್ಜ್‌ಬಾಸ್ಟನ್ ನಲ್ಲಿ ನಡೆದ ಬಿ-ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ ತಂಡ ಡೆಕ್ ವರ್ತ್ ಲೂಯಿಸ್ ವಿಧಾನದಿಂದ 124 ರನ್‌ಗಳಿಂದ ಗೆದ್ದಿತು. ಮಳೆಯಿಂದಾಗಿ 48 ಓವರ್ ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಭಾರತ ತಂಡ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟಿತ್ತು. ರೋಹಿತ್ ಶರ್ಮಾ (91), ಶಿಖರ್ ಧವನ್ (68), ವಿರಾಟ್ ಕೊಹ್ಲಿ (81) ಮತ್ತು ಯುವರಾಜ್ ಸಿಂಗ್ (53) ಅವರ ಅರ್ಧಶತಕಗಳ ಸಹಾಯದಿಂದ ಭಾರತ ತಂಡ 3 ವಿಕೆಟ್ ನಷ್ಟಕ್ಕೆ 319 ರನ್ ಗಳನ್ನು ಕಲೆ ಹಾಕಿತು. ಇದಕ್ಕುತ್ತರವಾಗಿ ಪಾಕಿಸ್ತಾನ ಕೇವಲ 33.4 ಓವರ್ ಗಳಲ್ಲೇ 164 ರನ್ ಗಳಿಸುವಲ್ಲಿ ಸರ್ವಪತನ ಕಂಡಿತು.
ದಿ ಓವಲ್ ನಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ 180 ರನ್‌ಗಳಿಂದ ಗೆದ್ದಿತು . ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಫಖರ್ ಜಮಾನ್ ಅವರ ಸ್ಫೋಟಕ 114 ರನ್ ನಿಂದಾಗಿ 4 ವಿಕೆಟ್ ನಷ್ಟಕ್ಕೆ 338 ರನ್ ಪೇರಿಸಿತು. ಅಜರ್ ಅಲಿ (59), ಮೊಹಮ್ಮದ್ ಹಫೀಝ್ (57) ರನ್ ಗಳಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಕೇವಲ 30.3 ಓವರ್ ಗಳಲ್ಲಿ 158 ರನ್ ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಇತಿಹಾಸ ನಿರ್ಮಿಸಿದ ಬೆನ್ ಡಕೆಟ್ – ಸಚಿನ್, ಗಂಗೂಲಿ ದಾಖಲೆಗಳು ನುಚ್ಚುನೂರು