ನೀನಾಸಂ ಸತೀಶ್ ಪಾಲಿಗೆ ಅಯೋಗ್ಯ ಚಿತ್ರ ದೊಡ್ಡ ಮಟ್ಟದಲ್ಲಿ ಬ್ರೇಕ್ ನೀಡಿರೋದು ಗೊತ್ತೇ ಇದೆ. ಈ ದೆಸೆಯಿಂದಲೇ ಅವರೀಗ ಬೇರೆ ಭಾಷೆಗಳಲ್ಲಿಯೂ ಮಿಂಚುತ್ತಿದ್ದಾರೆ. ಇಂಥಾದ್ದೊಂದು ಗೆಲುವಿನ ಶಕೆಯನ್ನು ಮುಂದುವರೆಸೋ ಸ್ಪಷ್ಟ ಸೂಚನೆಯೊಂದಿಗೆ ಬಿಡುಗಡೆಯೇ ತಯಾರಾಗಿರೋ ಚಿತ್ರ ಚಂಬಲ್.
ಈ ಸಿನಿಮಾವನ್ನು ನಿರ್ದೇಶಕ ಜೇಕಬ್ ವರ್ಗೀಸ್ ಎಂದಿನಂತೆಯೇ ವಿಶಿಷ್ಟವಾಗಿ ರೂಪಿಸಿದ್ದಾರೆ. ಇದು ಟ್ರೈಲರ್ ಮೂಲಕವೇ ಸ್ಪಷ್ಟವಾಗಿದೆ. ಈ ಕಾರಣದಿಂದಲೇ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಚಂಬಲ್ ನೀನಾಸಂ ಸತೀಶ್ ಅವರ ಈವರೆಗಿನ ಚಿತ್ರಗಳಿಗಿಂತ ತುಂಬಾ ಭಿನ್ನವಾದದ್ದು. ಈ ಹಿನ್ನೆಲೆಯಲ್ಲಿ ಚಂಬಲ್ ನೀನಾಸಂ ಸತೀಶ್ ಪಾಲಿಗೆ ಬಹು ಮುಖ್ಯವಾದ ಚಿತ್ರ.
ಇದುವರೆಗೂ ನೀನಾಸಂ ಸತೀಶ್ ಪ್ರಸಿದ್ಧಿ ಪಡೆದಿದ್ದೇ ಮಂಡ್ಯ ನೆಲದ ಮಣ್ಣಿನ ಘಮಲು ಹೊಂದಿರೋ ಭಾಷಾ ಸೊಗಡಿನಿಂದ. ಆದರೆ ಚಂಬಲ್ ಚಿತ್ರದಲ್ಲಿ ಅವರು ನಿಷ್ಠಾವಂತ ಅಧಿಕಾರಿ. ಅವರ ಭಾಷೆ, ಹಾವಭಾವಗಳೆಲ್ಲವೂ ಚಂಬಲ್ ನಲ್ಲಿ ಬದಲಾಗಿದೆ.
ಈ ಸಿನಿಮಾ ತನ್ನ ವೃತ್ತಿ ಬದುಕಲ್ಲಿ ತುಂಬಾ ವಿಶಿಷ್ಟವಾಗಿದೆ ಅಂತ ಖುದ್ದು ಸತೀಶ್ ಅವರೇ ಹೇಳಿಕೊಂಡಿದ್ದಾರೆ. ಆರಂಭದಲ್ಲಿ ಚಂಬಲ್ ಆಫರ್ ಬಂದಾಗ ಸತೀಶ್ ಒಪ್ಪಿಕೊಂಡಿದ್ದೇ ಬೆರಗಾಗಿಸುವಂಥಾ ಚಿತ್ರಕಥೆ ನೋಡಿಯಂತೆ. ಚಂಬಲ್ ಚಿತ್ರದಲ್ಲಿ ತನಗೆ ತಾನೇ ಹೊಸಬ ಅನ್ನಿಸುವಂಥಾ ಪಾತ್ರಕ್ಕೆ ಸತೀಶ್ ಜೀವ ತುಂಬಿದ್ದಾರಂತೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv