ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಇನ್ನೂ ದೀರ್ಘಕಾಲ ಮುಂದುವರಿದರೆ ದೇಶದಲ್ಲಿ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್‌ಬಿಐ ಗವರ್ನರ್ (Reserve Bank Governor) ಸಂಜಯ್ ಮಲ್ಹೋತ್ರಾ(Sanjay Malhotra) ಹೇಳಿದ್ದಾರೆ.
ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸರ್ಕಾರ ಈಗಾಗಲೇ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ತೊಂದರೆಗಳಿಂದ ತೈಲ ಮತ್ತು ಅನಿಲ ಪೂರೈಕೆಗೆ ಅಡ್ಡಿಯಾಗಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆಗಳು ಏರಿಕೆಯಾಗಿವೆ. ಭಾರತವು ಇಂಧನ ಹಾಗೂ ರಸಗೊಬ್ಬರಗಳ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಇದರ ಪರಿಣಾಮ ದೇಶದ ಮೇಲೂ ಕಾಣಿಸಿಕೊಳ್ಳಲು ಆರಂಭವಾಗಿದೆ ಎಂದು ಮಲ್ಹೋತ್ರಾ ಹೇಳಿದರು. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನೊಳಗೆ ಮಹಿಳೆಯ ಮೇಲೆ ಗ್ಯಾಂಗ್ ರೇಪ್ – ಡ್ರೈವರ್, ಕಂಡಕ್ಟರ್ ಅರೆಸ್ಟ್
ಈ ಪರಿಸ್ಥಿತಿ ಇನ್ನೂ ಮುಂದುವರಿದರೆ ಸರ್ಕಾರ ಇಂಧನ ಬೆಲೆ ಏರಿಕೆಯ ಭಾರವನ್ನು ಸಾರ್ವಜನಿಕರ ಮೇಲೆ ಹಾಕಬೇಕಾದ ಪರಿಸ್ಥಿತಿ ಬರಬಹುದು ಎಂದು ಅವರು ಎಚ್ಚರಿಕೆ ನೀಡಿದರು. ಆದರೆ ಫೆಬ್ರವರಿ 28ರಿಂದ ಆರಂಭವಾದ ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೂ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಿಲ್ಲ.
ಇದೇ ವೇಳೆ ವಿದೇಶಿ ವಿನಿಮಯ ಉಳಿಸಲು ಇಂಧನ ಬಳಕೆ ಮತ್ತು ಖಾದ್ಯ ತೈಲ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದರ ನಡುವೆ ರೂಪಾಯಿ ಮೌಲ್ಯವೂ ಕುಸಿತ ಕಂಡಿದ್ದು, ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 95ರ ಗಡಿಗಿಂತ ಕೆಳಗೆ ಇಳಿದಿದೆ.

