ನವದೆಹಲಿ: ಮೋದಿ ಸರ್ಕಾರ ಕಸಾಯಿಖಾನೆಗಳಿಗೆ ಜಾನುವಾರುಗಳ ಮಾರಾಟವನ್ನು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮೂರನೇ ವರ್ಷದ ಸಂಭ್ರಮದ ಹೊತ್ತಲ್ಲೇ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.
ಜಾನುವಾರುಗಳನ್ನು ಮಾರುವುದಾದರೆ ರೈತರಿಗೆ ಅಥವಾ ಕೃಷಿ ಭೂಮಿ ಇರುವವರಿಗೆ ಮಾತ್ರ ಮಾರಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ದನ, ಗೂಳಿ, ಎತ್ತು, ಕೋಣ, ಹೋರಿ ಮತ್ತು ಒಂಟೆ ಮಾರಾಟಕ್ಕೆ ಈ ನಿಯಮ ಅನ್ವಯವಾಗಲಿದೆ.
Advertisement
ಪರಿಸರ ಖಾತೆ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಭಾರತ ಸರ್ಕಾರ ಒಮ್ಮತದಿಂದ ಈ ಹೊಸ ನಿಯಮವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಜಾನುವಾರುಗಳನ್ನು ಕೃಷಿ ಉಪಯೋಗಕ್ಕೆ ಮಾತ್ರ ಮಾರಾಟ ಮಾಡಬೇಕು, ಕಸಾಯಿಖಾನೆಗೆ ಮಾರುವಂತಿಲ್ಲ ಎಂದು ಪ್ರಾಣಿ ಹಿಂಸೆ ತಡೆ (ಪಿಸಿಎ) ಕಾಯ್ದೆಯ 1960ರ ಸೆಕ್ಷನ್ ಅಡಿಯಲ್ಲಿ ಈ ನಿರ್ಬಂಧ ಹೇರಲಾಗಿದೆ.
Advertisement
ಹೊಸ ನಿಯಮದಲ್ಲಿರುವ ಪ್ರಮುಖ ಅಂಶಗಳು
ಇನ್ನು ಮುಂದೆ ಜಾನುವಾರುಗಳನ್ನು ವ್ಯಾಪಾರ ಮಾಡುವ ಮಾರಾಟಗಾರರು ಮತ್ತು ಖರೀದಿ ಮಾಡುವವರು ಗುರುತಿನ ಚೀಟಿ ಮತ್ತು ಮಾಲೀಕತ್ವದ ದಾಖಲೆಗಳನ್ನು ತೋರಿಸಬೇಕಾಗುತ್ತದೆ.
Advertisement
ಖರೀದಿಸಿದ ಜಾನುವಾರನ್ನು 6 ತಿಂಗಳೊಳಗೆ ಮತ್ತೊಮ್ಮೆ ಮಾರಾಟ ಮಾಡುವಂತಿಲ್ಲ. ರೈತರಿಗೆ ಮಾತ್ರ ಜಾನುವರನ್ನು ಮಾರಾಟ ಮಾಡಬೇಕು. ಖರೀದಿಸುವಾಗ ಕಡ್ಡಾಯವಾಗಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಎಳೆ ಕರುಗಳನ್ನು ಅಥವಾ ಅನಾರೋಗ್ಯ ಪೀಡಿತ ಹಸುಗಳನ್ನು ಮಾರಾಟ ಮಾಡುವಂತಿಲ್ಲ.
Advertisement
ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆಗೆದುಕೊಂಡು ಹೋಗುವಾಗ ಆ ರಾಜ್ಯ ಸರ್ಕಾರದ ವಿಶೇಷ ಅನುಮತಿಯನ್ನು ಪಡೆಯಬೇಕು. ಧಾರ್ಮಿಕ ಕಾರ್ಯಕ್ರಮದಲ್ಲೂ ಈ ಮೇಲೆ ತಿಳಿಸಿದ ಜಾನುವಾರುಗಳ ಹತ್ಯೆಯನ್ನು ನಿಷೇಧಿಸಲಾಗಿದೆ.
ಮ್ಯಾಜಿಸ್ಟ್ರೇಟ್ ಅಧ್ಯಕ್ಷತೆ ವಹಿಸಿರುವ ಜಿಲ್ಲಾ ಜಾನುವಾರು ಮಾರಾಟ ಸಮಿತಿಯ ಅನುಮತಿಯಿಂದಲೇ ಜಾನುವಾರು ವ್ಯಾಪಾರ ಕೇಂದ್ರಗಳನ್ನು ನಡೆಸಬೇಕು. ಸರ್ಕಾರ ಅಂಗೀಕೃತ ಪ್ರಾಣಿ ರಕ್ಷಣಾ ಸಂಘಟನೆಯ ಇಬ್ಬರು ಸದಸ್ಯರು ಈ ಸಮಿತಿಯಲ್ಲಿರಬೇಕು.
5 ಪ್ರತಿಗಳನ್ನು ಇಟ್ಟುಕೊಳ್ಳಬೇಕು:
ಒಂದು ಹಸುವನ್ನು ಕೊಂಡುಕೊಂಡರೆ, ಜಾನುವಾರು ವ್ಯಾಪಾರಿಯು ಮಾರಾಟ ಮಾಡಿದ ದಾಖಲೆಗಳ 5 ಪ್ರತಿಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಒಂದು ಪ್ರತಿಯನ್ನು ಸ್ಥಳೀಯ ಕಂದಾಯ ಅಧಿಕಾರಿಗೆ, ಎರಡನೇ ಪ್ರತಿಯನ್ನು ಹಸು ಖರೀದಿ ಮಾಡಿದ ವ್ಯಕ್ತಿಯ ಜಿಲ್ಲೆಯ ಸ್ಥಳೀಯ ಪಶು ವೈದ್ಯರಿಗೆ, ಮೂರನೇ ಪ್ರತಿಯನ್ನು ಜಾನುವಾರು ಮಾರುಕಟ್ಟೆ ಸಮಿತಿಗೆ ನೀಡಬೇಕಾಗುತ್ತದೆ. ಮಾರಾಟಗಾರ ಮತ್ತು ಖರೀದಿಸಿದ ವ್ಯಕ್ತಿಯೂ ಒಂದೊಂದು ಪ್ರತಿಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ.