ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವು ಶುದ್ಧ ಎಡಬಿಡಂಗಿ ಸರ್ಕಾರವಾಗಿದ್ದು, ಇನ್ನೂ ಸ್ವಲ್ಪ ದಿನಗಳಲ್ಲೇ ಅಧಿಕಾರಕಳೆದುಕೊಂಡು ಜನಾದೇಶ ಪಡೆದಿರುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆಂದು ಕೇಂದ್ರ ರಾಸಾಯನಿಕ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.
ನಗರದ ಬಸವನಗುಡಿಯ ನಿವಾಸದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಒಂದು ಅಪವಿತ್ರ ಮೈತ್ರಿಯಾಗಿದೆ. ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದಗಿನಿಂದಲೂ ಶೀತಲ ಸಮರ ನಡೆಯುತ್ತಲೇ ಇದೇ. ಈ ಎಡಬಿಡಂಗಿ ಸರ್ಕಾರದ ನಾಯಕರುಗಳು ಚುನಾವಣಾ ಪೂರ್ವದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಕೆಸರೆರಚಾಟ ನಡೆಸಿದ್ದರು. ಇದರಿಂದಾಗಿ ಇಬ್ಬರೂ ಒಟ್ಟಿಗೆ ಉಳಿಯಲು ಸಾಧ್ಯವಿಲ್ಲ. ಕುಮಾರಸ್ವಾಮಿಯವರ ಸರ್ಕಾರ ಬಾಲಗ್ರಹಪೀಡಿತ ಸರ್ಕಾರವಾಗಿದೆ. ಹೀಗಾಗಿ ಈ ಸರ್ಕಾರ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ. ಸರ್ಕಾರ ಬಿದ್ದ ಕೂಡಲೇ ಹೊಸ ಸಮೀಕರಣ ಆಗುತ್ತದೆ. ಆಗ ಜನಾದೇಶ ಪಡೆದ ಬಿಜೆಪಿಯು ಮತ್ತೊಮ್ಮೆ ಅಧಿಕಾರದ ಗದ್ದುಗೆಯನ್ನು ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಈ ವೇಳೆ ಬಿಬಿಎಂಪಿ ಹೊಸ ತೆರಿಗೆ ಕುರಿತು ಮಾತನಾಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹೇರಲು ಹೊರಟಿರುವ ಹೊಸ ತೆರಿಗೆ ಸರಿಯಲ್ಲ. ಮೊದಲು ತಮ್ಮ ಸಂಸ್ಥೆಯಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟಲಿ. ಇದರಿಂದಾಗಿ ಸರ್ಕಾರಕ್ಕೆ ಸುಮಾರು 3 ಸಾವಿರ ಕೋಟಿ ರೂಪಾಯಿ ಉಳಿಕೆಯಾಗುತ್ತದೆ. ಕೇವಲ 40 ಕೋಟಿ ರೂಪಾಯಿ ತೆರಿಗೆ ಸಂಗ್ರಹಕ್ಕೆ ಜನಸಾಮಾನ್ಯರಿಗೆ ಹೊರೆ ಹಾಕುವುದು ಸರಿಯಲ್ಲ ಎಂದು ಹೇಳಿದರು.
Advertisement
ತೆಲಂಗಾಣದಿಂದ ಕರ್ನಾಟಕದ ಶಿವರಾಮಪುರದಲ್ಲಿ ಅತಿಕ್ರಮಣ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿರಾಜ್ಯವು ತನ್ನದೆಯಾದ ಗಡಿಯನ್ನು ಹೊಂದಿದ್ದು, ಅದರ ನೆಲ, ಜಲ ಹಾಗೂ ನಾಡುನುಡಿಯನ್ನು ಕಾಯ್ದುಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ತೆಲಂಗಾಣದ ಕ್ರಮ ಸರಿಯಲ್ಲ. ಕೂಡಲೇ ಸಿಎಂ ಕುಮಾರಸ್ವಾಮಿಯವರು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ಜೊತೆ ಈ ಬಗ್ಗೆ ಮಾತುಕತೆ ನಡೆಸಬೇಕೆಂದು ಆಗ್ರಹಿಸಿದರು.
Advertisement
ಸುದ್ದಿಗಾರರೊಂದಿಗೆ ಮಾತನಾಡುವ ಮೊದಲು ಅನಂತ್ ಕುಮಾರ್ ಮನೆಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ ಹಾಗೂ ಇನ್ನೂ ಅನೇಕ ಬಿಬಿಎಂಪಿ ಸದಸ್ಯರು ಪಾಲ್ಗೊಂಡಿದ್ದರು. ಈ ವೇಳೇ ತಾರಾರವರು ಅನಂತ್ ಕುಮಾರ್ ರವರಿಗೆ ರಾಖಿ ಕಟ್ಟುವ ಮೂಲಕ ಶುಭ ಹಾರೈಸಿದರು. ಅಲ್ಲದೇ ಅಣ್ಣ-ತಂಗಿಯ ವಿಶೇಷವಾದ ದಿನದಂದು ಎಲ್ಲರೂ ಪರಸ್ಪರ ರಕ್ಷಿಸಿಕೊಂಡು, ಭಾರತ ಮಾತೆ ಹಾಗೂ ಪ್ರಕೃತಿ ಮಾತೆಯನ್ನು ರಕ್ಷಣೆ ಮಾಡಬೇಕೆಂದು ಸಚಿವರು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv