ನವದೆಹಲಿ: ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ (Edible oil) ಪ್ಯಾಕೆಟ್‌ಗಳ ಗಾತ್ರವನ್ನು ಪ್ರಮಾಣೀಕರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ನಿಯಮ ಜಾರಿಗೆ ಬಂದರೆ ಗ್ರಾಹಕರ ಬೆಲೆಯಲ್ಲಿ ಪಾರದರ್ಶಕತೆಯನ್ನು ಸುಧಾರಿಸಬಹುದು ಎನ್ನಲಾಗಿದೆ. ಈ ನಿರ್ಧಾರಗಳಿಂದ ಅಡುಗೆ ಎಣ್ಣೆ ಕಂಪನಿಗಳ ನಡುವೆ ಆರೋಗ್ಯಕರ ಸ್ಪರ್ಧೆ ನಡೆಯುವ ಸಾಧ್ಯತೆಯಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಅಡುಗೆ ಎಣ್ಣೆ 850 ಎಂಎಲ್, 875 ಎಂಎಲ್, 900 ಎಂಎಲ್, ಹಾಗೂ 950ಎಂಎಲ್‌ನ ವಿವಿಧ ಗಾತ್ರದ ಎಣ್ಣೆ ಪ್ಯಾಕ್‌ಗಳು ಸಿಗುತ್ತಿವೆ. ಇದರಿಂದಾಗಿ ಗ್ರಾಹಕರಿಗೆ ಒಂದು ಲೀಟರ್‌ಗೆ ಯಾವ ಬ್ರ್ಯಾಂಡ್‌ನ ಎಣ್ಣೆ ಎಷ್ಟು ಬೆಲೆ ಎಂದು ಲೆಕ್ಕ ಹಾಕಲು ಕಷ್ಟವಾಗುತ್ತಿದೆ. ಗ್ರಾಹಕರ ಹಿತರಕ್ಷಣೆ, ಪಾರದರ್ಶಕ ಲೇಬಲಿಂಗ್ ಮತ್ತು ಪರಿಸರಸ್ನೇಹಿ ಪ್ಯಾಕೇಜಿಂಗ್‌ಗೆ ಸರ್ಕಾರ ಆದ್ಯತೆ ನೀಡುವ ಸಲುವಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಇದನ್ನೂ ಓದಿ:Explained| ಬರೋಬ್ಬರಿ 15.15 ಲಕ್ಷ ಕೋಟಿ ಅಕ್ರಮ – ಬೆಂಗಳೂರಿನ ಚಿನ್ನದ ಕಂಪನಿಯಲ್ಲಿ ‘ಕಾಗದದ’ ಆಟ!
ಈ ಬಗ್ಗೆ ಪಿ ಮಾರ್ಕ್ ಸಾಸಿವೆ ಎಣ್ಣೆ ಕಂಪನಿಯ (ಪುರಿ ಆಯಿಲ್ ಮಿಲ್ಸ್ ಲಿಮಿಟೆಡ್) ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಪುರಿ ಮಾತನಾಡಿ, ಭಾರತ ಸರ್ಕಾರ ಅಡುಗೆ ಎಣ್ಣೆ ಪ್ಯಾಕ್ ಬಗ್ಗೆ ಈ ಗಂಭೀರ ಸಮಸ್ಯೆಯನ್ನು ಪರಿಗಣಿಸಿದೆ. ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಅಡುಗೆ ಎಣ್ಣೆ ಪ್ಯಾಕೆಟ್‌ಗಳ ಗಾತ್ರದ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ನಾವು ಕಳೆದ ಸುಮಾರು ವರ್ಷಗಳಿಂದ ಈ ಸಮಸ್ಯೆ ಬಗೆಹರಿಸುವಂತೆ ಒತ್ತಾಯ ಮಾಡಿದ್ದೆವು. ಗ್ರಾಹಕರಿಗೆ ಸ್ಪಷ್ಟ ಮತ್ತು ಪಾರದರ್ಶಕ ಬೆಲೆ ತಿಳಿಯಲು ಈ ಸಮಸ್ಯೆ ಬಗೆಹರಿಸಿ ಎಂದು ನಾವು ಈ ಹಿಂದೆಯೇ ಕೇಳಿಕೊಂಡಿದ್ದೆವು. ಪ್ಯಾಕ್ ಗಾತ್ರ ಒಂದೇ ಸಮನಾಗಿದ್ದರೆ ಗ್ರಾಹಕರು ಬೇಗ ಎಣ್ಣೆ ಪ್ಯಾಕ್ ಬೆಲೆ ಅರಿಯಬಹುದು. ಆಗ ಕಂಪನಿಗಳ ನಡುವಿನ ಸ್ಪರ್ಧೆ ಕೇವಲ ಪ್ಯಾಕೆಜಿಂಗ್ ಮೇಲೆ ಮಾತ್ರವಲ್ಲದೆ, ಎಣ್ಣೆಯ ಗುಣಮಟ್ಟ ಮತ್ತು ಶುದ್ಧತೆಯ ಮೇಲೂ ಏರ್ಪಡುತ್ತದೆ ಎಂದು ಅವರು ಹೇಳಿದ್ದಾರೆ.
ಗ್ರಾಹಕರು ಅಂಗಡಿಯಲ್ಲಿ ಬೇರೆ ಬೇರೆ ಕಂಪನಿಗಳ ಎಣ್ಣೆ ಪ್ಯಾಕ್ ಬೆಲೆಯನ್ನ ಸುಲಭವಾಗಿ ಹೋಲಿಕೆ ಮಾಡಿ ನೋಡಬಹುದು. ಜೊತೆಗೆ ಪ್ಯಾಕ್ ಮಾಡಿದ ಅಡುಗೆ ಎಣ್ಣೆಯ ಪ್ರಮಾಣದ ಬಗ್ಗೆ ವಿಶ್ವಾಸ ಹೆಚ್ಚಾಗುತ್ತದೆ. ಅನಗತ್ಯ ಪ್ಲಾಸ್ಟಿಕ್ ಬಳಕೆಯೂ ಇದರಿಂದ ಕಡಿಮೆ ಆಗುತ್ತದೆ. ಕಂಪನಿಗಳಿಗೆ ಬೇರೆ ಬೇರೆ ಗಾತ್ರದ ಪ್ಯಾಕ್‌ಗಳಿಗೆ ಪ್ರತ್ಯೇಕ ಲೇಬಲ್‌ಗಳು ಮತ್ತು ಪ್ಯಾಕೇಜಿಂಗ್ ಬಾಕ್ಸ್‌ಗಳನ್ನು ತಯಾರಿಸುವ ಕೆಲಸ ತಪ್ಪುತ್ತದೆ. ಪೂರೈಕೆಯ ವಿಧಾನ ಸರಳವಾಗುವುದರಿಂದ ವೆಚ್ಚ ಮತ್ತು ಶ್ರಮ ಎರಡೂ ಕಡಿಮೆಯಗುತ್ತದೆ. ಇದರಿಂದ ಕಂಪನಿಗಳಿಗೆ ಹಾಗೂ ಗ್ರಾಹಕರಿಗೆ ಇಬ್ಬರಿಗೂ ಸಹಾಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪ್ಯಾಕಿಂಗ್ ಗಾತ್ರವನ್ನು ದೇಶಾದ್ಯಂತ ಒಂದೇ ಸಮನಾಗಿ ಪ್ರಮಾಣೀಕರಿಸಬೇಕು ಎಂಬ ಬೇಡಿಕೆ ಉದ್ಯಮ ವಲಯದಲ್ಲಿ ತೀವ್ರಗೊಂಡಿದೆ. ಪ್ರಮುಖ ತೈಲ ಉತ್ಪಾದನಾ ಸಂಸ್ಥೆಯಾದ ಪುರಿ ಆಯಿಲ್ ಮಿಲ್ಸ್ ಸೇರಿದಂತೆ ಹಲವು ಪ್ರಮುಖ ಪಾಲುದಾರರು ಈ ಕುರಿತು ಸರ್ಕಾರದ ಮಟ್ಟದಲ್ಲಿ ಸಮಾಲೋಚನೆ ನಡೆಸುತ್ತಿದ್ದು, ಶೀಘ್ರದಲ್ಲೇ ಈ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.
ಗ್ರಾಹಕರಿಗೆ ಲಾಭವೇನು?
ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಗಾತ್ರ ಹಾಗೂ ವಿನ್ಯಾಸದ ಎಣ್ಣೆ ಪ್ಯಾಕೇಟ್‌ಗಳು ಲಭ್ಯವಿರುವುದರಿಂದ, ಗ್ರಾಹಕರಿಗೆ ನೈಜ ಬೆಲೆ ಮತ್ತು ಪ್ರಮಾಣವನ್ನು ಹೋಲಿಕೆ ಮಾಡಲು ಕಷ್ಟವಾಗುತ್ತಿದೆ. ಎಲ್ಲಾ ಬ್ರ‍್ಯಾಂಡ್‌ಗಳೂ ಒಂದೇ ನಿಗದಿತ ಗಾತ್ರದಲ್ಲಿ ಅಡುಗೆ ಎಣ್ಣೆ ಮಾರಾಟ ಮಾಡಿದರೆ, ಗ್ರಾಹಕರು ಸುಲಭವಾಗಿ ಬೆಲೆಗಳನ್ನು ಹೋಲಿಸಿ ಖರೀದಿಸಲು ಸಹಕಾರಿಯಾಗುತ್ತದೆ. ಇದು ಮಾರುಕಟ್ಟೆಯಲ್ಲಿ ಪಾರದರ್ಶಕತೆ ಹೆಚ್ಚಿಸುತ್ತಿದೆ ಎಂದು ಹಲವರು ಹೇಳಿದ್ದಾರೆ. ಇದನ್ನೂ ಓದಿ:ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಾಪತ್ತೆ – ವಾರವಾದ್ರೂ ಸಿಗದ ಸುಳಿವು
ಬೇರೆ ಬೇರೆ ಗಾತ್ರದ ಅಡುಗೆ ಎಣ್ಣೆ ಪ್ಯಾಕೇಟ್ ತಯಾರಿಕೆಗೆ ಪ್ರತ್ಯೇಕ ಅಚ್ಚುಗಳು (ಪ್ಯಾಕೇಟ್ ಮೇಲೆ ಮುದ್ರಿಸಲಾಗುವ ಮಾಹಿತಿ) ಮತ್ತು ಪ್ಲಾಸ್ಟಿಕ್ ಲೇಬಲ್‌ಗಳ ಅಗತ್ಯವಿರುತ್ತದೆ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯದ ಬಳಕೆ ಹೆಚ್ಚಾಗುತ್ತಿತ್ತು. ಆದರೆ ಈಗ ಪ್ಯಾಕ್ ಗಾತ್ರಗಳು ಒಂದೇ ಸಮನಾಗಿರುವುದರಿಂದ ಅನಗತ್ಯ ಪ್ಲಾಸ್ಟಿಕ್ ಬಳಕೆಗೆ ಬ್ರೇಕ್ ಬೀಳಲಿದೆ.
ಸರ್ಕಾರ ಗ್ರಾಹಕರ ಹಿತದೃಷ್ಟಿ, ಪಾರದರ್ಶಕ ಲೇಬಲಿಂಗ್ ಮತ್ತು ಪರಿಸರಸ್ನೇಹಿ ವ್ಯವಹಾರಗಳಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಈ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸಿದೆ.













