– ಕಾರ್ಪೊರೇಟ್ ವಲಯದಲ್ಲಿ ಮಹಾ ತಲ್ಲಣ
– ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್‌ಗೆ ಸೆಬಿ ಶಾಕ್
ದೇಶದ ಅತಿ ದೊಡ್ಡ ಚಿನ್ನ ಸಂಸ್ಕರಣೆ ಮತ್ತು ಆಭರಣ ರಫ್ತು ಕಂಪನಿಗಳಲ್ಲೊಂದಾದ, ಬೆಂಗಳೂರು ಮೂಲದ ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ (Rajesh Exports Ltd) ಇದೀಗ ಭಾರತೀಯ ಕಾರ್ಪೊರೇಟ್ ವಲಯವೇ ಬೆಚ್ಚಿಬೀಳುವಂತಹ ಮಹಾ ಆರ್ಥಿಕ ಹಗರಣದ ಸುಳಿಗೆ ಸಿಲುಕಿದೆ. ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (SEBI) ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಕಂಪನಿಯು ಬರೋಬ್ಬರಿ 15.15 ಲಕ್ಷ ಕೋಟಿ ರೂ. ಬೃಹತ್ ಪ್ರಮಾಣದ ಆದಾಯವನ್ನು ತಪ್ಪಾಗಿ ಬಿಂಬಿಸಿ ಹೂಡಿಕೆದಾರರಿಗೆ ವಂಚಿಸಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಹಣಕಾಸು ವರ್ಷ 2021 ರಿಂದ 2025 ರ ನಡುವಿನ ಅವಧಿಯಲ್ಲಿ ಕಂಪನಿಯು ತನ್ನ ಅಂಗಸಂಸ್ಥೆಗಳ (Subsidiaries) ಮೂಲಕ ಬಂದ ಆದಾಯದಲ್ಲಿ 99.8% ರಷ್ಟು ಹಣವನ್ನು ಕೇವಲ ಕಾಗದದ ಮೇಲಷ್ಟೇ ಸೃಷ್ಟಿಸಿ, ಲೆಕ್ಕಪತ್ರಗಳಲ್ಲಿ ಭಾರಿ ಅಕ್ರಮ ಎಸಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸ್ವಿಜ್ಜರ್‌ಲ್ಯಾಂಡ್‌ನಲ್ಲಿರುವ ಜಗತ್ಪ್ರಸಿದ್ಧ ಚಿನ್ನದ ರಿಫೈನರಿಯ ಹೆಸರನ್ನು ಬಳಸಿಕೊಂಡು ಸುಳ್ಳು ಆದಾಯದ ಬೆಟ್ಟವನ್ನು ಸೃಷ್ಟಿಸಿದ್ದಕ್ಕೆ ಸೆಬಿ ಈಗ ಪ್ರವರ್ತಕರಿಗೆ ನಿಷೇಧ ಹೇರಿದೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಈ ಹಗರಣದ ಹಿನ್ನೆಲೆ ಏನು? ಸೆಬಿ ವರದಿಯಲ್ಲಿರುವ ಶಾಕಿಂಗ್ ಅಂಶಗಳು ಏನು? ಬೆಳಕಿಗೆ ಬಂದಿದ್ದು ಹೇಗೆ? ಇತ್ಯಾದಿ ವಿವರಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರಿನಲ್ಲಿದೆ ಕಚೇರಿ:
ಈ ಕಂಪನಿಯನ್ನು 1989 ರಲ್ಲಿ ಸ್ಥಾಪಿಸಲಾಗಿದ್ದು ಬೆಂಗಳೂರಿನಲ್ಲಿ ಇದರ ಪ್ರಧಾನ ಕಚೇರಿ ಇದೆ. ಈ ಕಂಪನಿಯು ಚಿನ್ನದ ಗಣಿಗಾರಿಕೆಯಿಂದ ಹಿಡಿದು, ಸಂಸ್ಕರಣೆ, ಆಭರಣ ವಿನ್ಯಾಸ, ಸಗಟು ಮಾರಾಟ ಮತ್ತು ಚಿಲ್ಲರೆ ವ್ಯಾಪಾರದವರೆಗಿನ (Mine-to-Retail) ಸಂಪೂರ್ಣ ಪೂರೈಕೆ ಸರಪಳಿಯನ್ನು ತನ್ನದೇ ನಿಯಂತ್ರಣದಲ್ಲಿ ಹೊಂದಿರುವ ಕಂಪನಿಯಾಗಿದೆ. ಭಾರತದಲ್ಲಿ ಇದರ ಆಭರಣ ಮಳಿಗೆಗಳು ಶುಭ್ ಜ್ಯುವೆಲ್ಲರ್ಸ್ (Shubh Jewellers) ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಪ್ರವರ್ತಕರಿಗೆ ನಿಷೇಧ
ಸೆಬಿ ಜೂನ್ 3 ರಂದು ಹೊರಡಿಸಿದ ಮಧ್ಯಂತರ ಆದೇಶದಲ್ಲಿ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಮೆಹ್ತಾ ಅವರಿಗೆ ಷೇರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡದಂತೆ ತಾತ್ಕಾಲಿಕ ನಿಷೇಧ ಹೇರಿದೆ. ಮಂಡಳಿಯ ಅಥವಾ ಆಡಿಟ್ ಸಮಿತಿಯ ಒಪ್ಪಿಗೆಯಿಲ್ಲದೆ ರಾಜೇಶ್ ಮೆಹ್ತಾ ಅವರ ವೈಯಕ್ತಿಕ ಖಾತೆಗೆ 339 ಕೋಟಿ ರೂ. ವರ್ಗಾಯಿಸಲಾಗಿದ್ದು, ಅದರಲ್ಲಿ ಕೇವಲ 232 ಕೋಟಿ ರೂ. ಮಾತ್ರ ಮರಳಿ ಬಂದಿದೆ ಎಂದು ಆರೋಪಿಸಲಾಗಿದೆ.
ಕಂಪನಿ ಹೇಳಿದ್ದೇನು?
ರಾಜೇಶ್ ಎಕ್ಸ್‌ಪೋರ್ಟ್ಸ್ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು ಸೆಬಿಯೊಂದಿಗಿನ ಸಂವಹನದ ಕೊರತೆ ಉಂಟಾಗಿದೆ ಮತ್ತು ಕಂಪನಿಯು ಘೋಷಿಸಿರುವ ಆದಾಯ ನಿಖರವಾಗಿದೆ ಎಂದು ಸ್ಪಷ್ಟೀಕರಣ ನೀಡಿದೆ.
ಸೆಬಿ ವರದಿಯಲ್ಲಿ ಏನಿದೆ?
ಕಂಪನಿಯು 2021 ರಿಂದ 2025 ರ ನಡುವೆ ಒಟ್ಟು 15.15 ಲಕ್ಷ ಕೋಟಿ ರೂ. ಆದಾಯವನ್ನು ಹೆಚ್ಚುವರಿಯಾಗಿ ತೋರಿಸಿದೆ. ಇದು ಅವರ ಒಟ್ಟು ಅಂಗಸಂಸ್ಥೆಗಳ ಆದಾಯದ 99.8% ರಷ್ಟಾಗಿದೆ.
ಕಂಪನಿಯ ಒಟ್ಟು ಆದಾಯದ 97% ರಿಂದ 99% ರಷ್ಟು ವಿದೇಶಿ ಅಂಗಸಂಸ್ಥೆಗಳಿಂದ (ಉದಾಹರಣೆಗೆ ಸ್ವಿಟ್ಜರ್‌ಲ್ಯಾಂಡ್‌ನ Valcambi SA ರಿಫೈನರಿ) ಬರುತ್ತದೆ ಎಂದು ತೋರಿಸಲಾಗಿತ್ತು. ಆದರೆ ಆ ಸಂಸ್ಥೆಗಳ ನಿಜವಾದ ಆಡಿಟ್ ವರದಿಗಳನ್ನು ಪರಿಶೀಲಿಸಿದಾಗ ಅಲ್ಲಿ ಇಷ್ಟು ದೊಡ್ಡ ಮಟ್ಟದ ವಹಿವಾಟೇ ನಡೆದಿಲ್ಲ ಎನ್ನುವುದು ಪತ್ತೆಯಾಗಿದೆ.
ಕಂಪನಿಯು ಹಣಕಾಸು ವರ್ಷ 2022 ಮತ್ತು 2024 ರ ನಡುವೆ ಯಾವುದೇ ನೈಜ ಉತ್ಪನ್ನಗಳ ವಿನಿಮಯವಿಲ್ಲದೆ ಕೇವಲ ಕಾಗದದ ಮೇಲೆ 11,487 ಕೋಟಿ ರೂ. ಮೌಲ್ಯದ ನಕಲಿ ಮಾರಾಟ ಹಾಗೂ 11,488 ಕೋಟಿ ರೂ. ಮೌಲ್ಯದ ನಕಲಿ ಖರೀದಿ ವ್ಯವಹಾರಗಳನ್ನು ಸೃಷ್ಟಿಸಿದೆ.

ಕಂಪನಿಯ ಮುಖ್ಯಸ್ಥರಾದ ರಾಜೇಶ್ ಮೆಹ್ತಾ ಅವರು ಮಂಡಳಿಯ ಅನುಮತಿಯಿಲ್ಲದೆ ಕಂಪನಿಯ ನಿಧಿಯಿಂದ 339 ಕೋಟಿ ರೂ. ಹಣವನ್ನು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಷೇರು ಈ ಹಣವನ್ನು ಅವರು ‘ಅಫ್ಲುಯೆನ್ಸ್ ಷೇರ್ಸ್ ಆಂಡ್ ಸ್ಟಾಕ್ಸ್’ ಎಂಬ ಬ್ರೋಕರ್ ಮೂಲಕ ತಮ್ಮ ವೈಯಕ್ತಿಕ ಹೆಸರಿನಲ್ಲಿ ಡೆರಿವೇಟಿವ್ಸ್ (F&O) ವ್ಯಾಪಾರ ಮಾಡಲು ಬಳಸಿಕೊಂಡಿದ್ದಾರೆ.
ರಾಜೇಶ್ ಎಕ್ಸ್‌ಪೋರ್ಟ್ಸ್ ತನ್ನ ವಾರ್ಷಿಕ ವರದಿಗಳಲ್ಲಿ ಆಫ್ರಿಕಾದಲ್ಲಿ ದೊಡ್ಡ ಚಿನ್ನದ ಗಣಿಯನ್ನು (Gold Mine) ಹೊಂದಿರುವುದಾಗಿ ಮತ್ತು ಅದರಲ್ಲಿ ಹೂಡಿಕೆ ಮಾಡಿರುವುದಾಗಿ ಹೂಡಿಕೆದಾರರಿಗೆ ತಿಳಿಸಿತ್ತು. ಆದರೆ ಆಡಿಟರ್‌ಗಳು ಕೇಳಿದಾಗ ಈ ಗಣಿಗೆ ಸಂಬಂಧಿಸಿದ ಯಾವುದೇ ಕಾನೂನುಬದ್ಧ ದಾಖಲೆಗಳನ್ನು ಒದಗಿಸಲು ಕಂಪನಿಗೆ ಸಾಧ್ಯವಾಗಿಲ್ಲ.
ವ್ಯಾಲ್ಕಾಂಬಿ ವಿವಾದ:
ರಾಜೇಶ್ ಎಕ್ಸ್‌ಪೋರ್ಟ್ಸ್ ಕಂಪನಿಯು 2015 ರಲ್ಲಿ ಸ್ವಿಜ್ಜರ್‌ಲ್ಯಾಂಡ್‌ನ ಬಲರ್ನಾ (Balerna) ನಗರದಲ್ಲಿರುವ ವಿಶ್ವದ ಅತ್ಯಂತ ಪ್ರಮುಖ ಹಾಗೂ ದೊಡ್ಡ ಚಿನ್ನದ ಸಂಸ್ಕರಣಾ ಕೇಂದ್ರವಾದ ವ್ಯಾಲ್ಕಾಂಬಿ (Valcambi SA) ಸಂಸ್ಥೆಯನ್ನು ಖರೀದಿಸಿತ್ತು. ಭಾರತದಲ್ಲಿ ಹೂಡಿಕೆದಾರರಿಗೆ ಲೆಕ್ಕ ತೋರಿಸುವಾಗ ಕಂಪನಿಯು ತನ್ನ ಒಟ್ಟು ಆದಾಯದ 97% ರಿಂದ 99% ರಷ್ಟು ಭಾಗ ಈ ಸ್ವಿಸ್ ಸಂಸ್ಥೆಯಿಂದಲೇ ಬರುತ್ತಿದೆ ಎಂದು ಬಿಂಬಿಸಿತ್ತು.
ಸೆಬಿ ನಿಯೋಜಿಸಿದ ಬಿಡಿಒ (BDO) ಆಡಿಟರ್‌ಗಳು ಸ್ವಿಜ್ಜರ್‌ಲ್ಯಾಂಡ್‌ನಲ್ಲಿ ಕೆಪಿಎಂಜಿ ಸಂಸ್ಥೆ ಆಡಿಟ್ ಮಾಡಿದ್ದ ವ್ಯಾಲ್ಕಾಂಬಿಯ ನೈಜ ಬ್ಯಾಲೆನ್ಸ್ ಶೀಟ್ ಅನ್ನು ಪರಿಶೀಲಿಸಿದಾಗ ಆಘಾತಕಾರಿ ಸತ್ಯ ಹೊರಬಿದ್ದಿದೆ. ಅದರ ಪ್ರಕಾರ ವ್ಯಾಲ್ಕಾಂಬಿಯ ನಿಜವಾದ ಸ್ವತಂತ್ರ ಆದಾಯವು (Standalone Revenue) ಕೇವಲ 12,557 ಕೋಟಿ ರೂ. ಮಾತ್ರ ಇತ್ತು. ಇದು ರಾಜೇಶ್ ಎಕ್ಸ್‌ಪೋರ್ಟ್ಸ್ ಭಾರತದಲ್ಲಿ ತೋರಿಸಿದ ಒಟ್ಟು ಆದಾಯದ 0.5% ಕ್ಕಿಂತಲೂ ಕಡಿಮೆ.
ಸೆಬಿ ಮತ್ತು ಫೋರೆನ್ಸಿಕ್ ಆಡಿಟರ್‌ಗಳು ವ್ಯಾಲ್ಕಾಂಬಿ ಸಂಸ್ಥೆಯ ಸಂಪೂರ್ಣ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ಗ್ರಾಹಕರ ವಿವರಗಳನ್ನು ಕೇಳಿದಾಗ ರಾಜೇಶ್ ಎಕ್ಸ್‌ಪೋರ್ಟ್ಸ್ ಕಂಪನಿಯು ಸ್ವಿಜ್ಜರ್‌ಲ್ಯಾಂಡ್‌ನ ಕಟ್ಟುನಿಟ್ಟಾದ ದತ್ತಾಂಶ ಸಂರಕ್ಷಣೆ ಮತ್ತು ಗೌಪ್ಯತೆ ಕಾಯ್ದೆಗಳ ಕಾರಣ ನೀಡಿ ಮಾಹಿತಿ ನೀಡಲು ನಿರಾಕರಿಸಿತ್ತು. ಆದರೆ ಸೆಬಿ ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿತು. ಸ್ವಿಸ್ ಗೌಪ್ಯತೆ ಕಾಯ್ದೆಗಳು ಅಲ್ಲಿನ ವೈಯಕ್ತಿಕ ನಾಗರಿಕರಿಗೆ ಅನ್ವಯಿಸುತ್ತವೆಯೇ ಹೊರತು ಕಾರ್ಪೊರೇಟ್ ವಂಚನೆ ಎಸಗುವ ಕಂಪನಿಯ ಆರ್ಥಿಕ ದಾಖಲೆಗಳನ್ನು ಮುಚ್ಚಿಡಲು ಅಲ್ಲ ಎಂದು ಸೆಬಿ ಹೇಳಿದೆ.
ತನಿಖಾಧಿಕಾರಿಗಳು ಗ್ರಾಹಕರ ವಿವರ ಮಾರಾಟಗಾರರ ಬಿಲ್ (Vendor Records) ಮತ್ತು ವಿದೇಶಿ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಕೇಳಿದಾಗ ಕಂಪನಿಯು ವಿಭಿನ್ನ ಮತ್ತು ಸುಳ್ಳು ಕಾರಣಗಳನ್ನು ನೀಡಿ ದಾಖಲೆಗಳನ್ನು ನೀಡದೆ ಅಸಹಕಾರ ತೋರಿತ್ತು.

ಬೆಳಕಿಗೆ ಬಂದಿದ್ದು ಹೇಗೆ?
ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ವಿರುದ್ಧದ ಇಷ್ಟೂ ದೊಡ್ಡ ಮಟ್ಟದ ತನಿಖೆಗೆ ಕಾರಣವಾಗಿದ್ದು ಮಾರ್ಚ್ 2024 ರಲ್ಲಿ ಸಲ್ಲಿಕೆಯಾದ ಷೇರುದಾರರೊಬ್ಬರ(Shareholder) ದೂರು. ಸೆಬಿಗೆ ಸಲ್ಲಿಕೆಯಾಗಿದ್ದ ದೂರಿನಲ್ಲಿ ದೂರುದಾರರು ಕಂಪನಿಯ ಹಣಕಾಸು ವರದಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಳೆ ಎಳೆಯಾಗಿ ವಿವರಿಸಿದ್ದರು.
ಕಂಪನಿಯು ಗ್ರಾಹಕರಿಂದ ವಸೂಲಿ ಮಾಡಬೇಕಾದ ಸಾವಿರಾರು ಕೋಟಿ ರೂಪಾಯಿ ಬಾಕಿ ಹಣ ಟ್ರೇಡ್ ರಿಸೀವಬಲ್ಸ್ (Trade Receivables – ಗ್ರಾಹಕರು ಸರಕು ಅಥವಾ ಸೇವೆಗಳನ್ನು ಸಾಲದ ಮೇಲೆ ಖರೀದಿಸಿದಾಗ ಅವರು ಕಂಪನಿಗೆ ಪಾವತಿಸಬೇಕಾದ ಬಾಕಿ ಮೊತ್ತ) ವರ್ಷಗಳಾದರೂ ಏಕೆ ವಸೂಲಿಯಾಗುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಲಾಭ ಗಳಿಸುತ್ತಿರುವ ದೊಡ್ಡ ಕಂಪನಿಯೊಂದರಲ್ಲಿ ಇಷ್ಟು ದೀರ್ಘಕಾಲ ಹಣ ಬಾಕಿ ಇರಲು ಸಾಧ್ಯವಿಲ್ಲ ಇದರಲ್ಲಿ ಏನೋ ಅಕ್ರಮ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿದ್ದರು.
ಕಂಪನಿಯು ತನ್ನ ವಾರ್ಷಿಕ ವರದಿಗಳಲ್ಲಿ ಹೂಡಿಕೆದಾರರಿಗೆ ಹಂಚಿಕೊಳ್ಳುತ್ತಿರುವ ಮಾಹಿತಿಗಳು ಅಪೂರ್ಣ ಮತ್ತು ಅನುಮಾನಾಸ್ಪದವಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಪ್ರಮುಖವಾಗಿ ವಿದೇಶದಲ್ಲಿರುವ ಅಂಗಸಂಸ್ಥೆಗಳ ನಿಖರವಾದ ಆರ್ಥಿಕ ವಿವರಗಳನ್ನು ಭಾರತದ ಹೂಡಿಕೆದಾರರಿಗೆ ಸರಿಯಾಗಿ ಬಹಿರಂಗಪಡಿಸುತ್ತಿಲ್ಲ ಎಂದು ಆರೋಪಿಸಿದ್ದರು.
ಸೆಬಿ ಏನು ಮಾಡಿತು?
ದೊಡ್ಡ ಮಟ್ಟದಲ್ಲಿ ಅಕ್ರಮ ನಡೆದ ಆರೋಪವನ್ನು ಗಂಭೀರವಾಗಿ ಸ್ವೀಕರಿಸಿದ ಸೆಬಿ ಒಂದು ವಿಶೇಷ ತನಿಖಾ ಪ್ರಾಧಿಕಾರವನ್ನು ನೇಮಿಸಿತು. ಅಕೌಂಟಿಂಗ್‌ನಲ್ಲಿ ನಡೆದಿರುವ ಒಳಗುಟ್ಟುಗಳನ್ನು ಹೊರತರಲು ಬಿಡಿಒ ಇಂಡಿಯಾ (BDO India) ಎಂಬ ಹೆಸರಾಂತ ಫೋರೆನ್ಸಿಕ್ ಆಡಿಟ್ ಸಂಸ್ಥೆಯನ್ನು ನಿಯೋಜಿಸಿತು. ಕಳೆದ ಎರಡು ವರ್ಷಗಳ ಸುದೀರ್ಘ ಜಂಟಿ ತನಿಖೆ ನಡೆಸಿ ಕಂಪನಿಯ 2021 ರಿಂದ 2025 ರವರೆಗಿನ ಐದು ವರ್ಷಗಳ ಲೆಕ್ಕಪತ್ರಗಳನ್ನು ಪರಿಶೀಲಿಸಿತು. ಈ ವೇಳೆ ಕಂಪನಿಯು ತನ್ನ ಒಟ್ಟು ಆದಾಯದ 99.8% ರಷ್ಟು ಭಾಗವನ್ನು 15.15 ಲಕ್ಷ ಕೋಟಿ ರೂ. ಕೇವಲ ಕಾಗದದ ಮೇಲಷ್ಟೇ ಸೃಷ್ಟಿಸಿ ದಾರಿ ತಪ್ಪಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ.
ಕಂಪನಿಯ ಹಣಕಾಸು ವರದಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ ಒಬ್ಬರೇ ಒಬ್ಬ ಜಾಗೃತ ಷೇರುದಾರ ನೀಡಿದ ದೂರು ಇಡೀ ಕಾರ್ಪೊರೇಟ್ ಜಗತ್ತನ್ನೇ ನಡುಗಿಸುವ ಈ ಮಹಾ ಹಗರಣವನ್ನು ಜಗತ್ತಿನ ಮುಂದೆ ತಂದಿಟ್ಟಿದೆ.













