ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು (Cauvery Water) ಹರಿಸುವ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ಮಹತ್ವದ ವಿಚಾರಣೆ ನಡೆಯಲಿದೆ. ತಮಿಳುನಾಡು(Tamil Nadu) ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ದ್ವಿಸದಸ್ಯ ಪೀಠ ನಡೆಸಲಿದೆ.
ಕಳೆದ ವಿಚಾರಣೆ ವೇಳೆ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ ಎಂದು ಕರ್ನಾಟಕ (Karnataka) ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ಕರ್ನಾಟಕ ನೀರು ಹರಿಸುತ್ತಿಲ್ಲ ಎಂಬ ತಮಿಳುನಾಡಿನ ಆರೋಪವನ್ನು ಸುಳ್ಳು ಎಂದು ವಾದಿಸಿದ್ದ ರಾಜ್ಯ ಸರ್ಕಾರಕ್ಕೆ, ಒಂದು ವಾರದಲ್ಲಿ ಹರಿದ ನೀರಿನ ನಿಖರ ಅಂಕಿ-ಅಂಶಗಳೊಂದಿಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಇಂದು ಸಮಗ್ರ ದಾಖಲೆ ಹಾಗೂ ಅಂಕಿ-ಅಂಶಗಳನ್ನು ನ್ಯಾಯಪೀಠದ ಮುಂದೆ ಮಂಡಿಸಲಿದೆ.
ನಾಳೆ CWRC ಸಭೆ
ಇನ್ನೊಂದೆಡೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯು ನಾಳೆ ದೆಹಲಿಯಲ್ಲಿ ನಡೆಯಲಿದ್ದು, ನೀರು ಹರಿಸುವಿಕೆ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ. ಇದನ್ನೂ ಓದಿ: ಐಫೋನ್ EMI ವಿಚಾರಕ್ಕೆ ಮೂವರ ದುರಂತ ಅಂತ್ಯ – 2025ರಲ್ಲಿ ಅದೇ ಜಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ
ರಾಜ್ಯದಲ್ಲಿನ ಜಲಾಶಯಗಳ ನೀರಿನ ಕೊರತೆಯನ್ನು ಮುಂದಿಟ್ಟುಕೊಂಡು, ನಾಳಿನ CWRC ಸಭೆಯಲ್ಲಿಯೂ ಈ ವಿಚಾರದತ್ತ ಸಮಿತಿಯ ಗಮನ ಸೆಳೆಯಲು ಕರ್ನಾಟಕ ಸಜ್ಜಾಗಿದೆ.
ಕರ್ನಾಟಕದ ಮೇಲ್ಮನವಿಯನ್ನು ಪುರಸ್ಕರಿಸಿ ಸಮಿತಿ ಸಮಾಧಾನಕರ ನಿರ್ಧಾರ ಕೈಗೊಳ್ಳಲಿದೆಯೇ ಅಥವಾ ಮತ್ತೆ ಹೆಚ್ಚುವರಿ ನೀರು ಹರಿಸಲು ಆದೇಶಿಸಲಿದೆಯೇ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
