ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಆಂಧ್ರಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾಗಿರುವ ಘಟನೆ ಚಿಕ್ಕಬಳ್ಳಾಪುರದ ಬಳಿ ನಡೆದಿದೆ.
ಎಪಿ 02 ಜೆಡ್ 0542 ನಂಬರ್ ನೋಂದಣಿಯ ಬಸ್ ಬೆಂಗಳೂರಿನಿಂದ ಧರ್ಮಾವರಂಗೆ ರಾಷ್ಟ್ರೀಯ ಹೆದ್ದಾರಿ 7ರ ಮೂಲಕ ಹೊರಟಿತ್ತು. ಈ ವೇಳೆ ಚದಲಪುರ ಗೇಟ್ ಸಮೀಪ ಬೊಲೆರೋ ವಾಹನ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್‍ನಲ್ಲಿದ್ದ 18 ಮಂದಿ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚದಲಪುರ ಗೇಟ್ ಸಮೀಪ ಬಸ್ ಮುಂದೆ ಬೊಲೆರೋ ಬಂದ ಕಾರಣ ಚಾಲಕ ದಿಢೀರ್ ಬ್ರೇಕ್ ಹಾಕಿದ್ದಾನೆ. ಬ್ರೇಕ್ ಹಾಕಿದ್ದರಿಂದ ವೇಗದಲ್ಲಿದ್ದ ಬಸ್ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಕೆಳಗಿ ಇಳಿದು ಪಲ್ಟಿ ಹೊಡೆದಿದೆ. ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿ, ರಕ್ಷಣೆ ಹಾಗೂ ಪ್ರಯಾಣಿಕರಿಗೆ ಧೈರ್ಯ ಹೇಳುವ ಕೆಲಸ ಮಾಡಿದರು. ಬಸ್ ಪಲ್ಟಿ ಹೊಡೆದ ಪರಿಣಾಮ ಮುಂಭಾಗ ಹಾಗೂ ಹಿಂಭಾಗದ ಗಾಜು ಒಡೆದಿದೆ.
ದೇವರು ನನ್ನನ್ನು ಹಾಗೂ ಇಬ್ಬರು ಮಕ್ಕಳನ್ನು ಉಳಿಸಿಬಿಟ್ಟ. ಭಾರೀ ಅನಾಹುತದಲ್ಲಿಯೂ ಬದುಕಿ ಬಂದಿದ್ದೇವೆ ಎಂದು ಮಹಿಳಾ ಪ್ರಯಾಣಿಕರೊಬ್ಬರು ಕಣ್ಣೀರು ಹಾಕಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ನಂದಿಗಿರಿಧಾಮ ಠಾಣೆ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv