ನವದೆಹಲಿ: ಕೇಂದ್ರ ರೈಲ್ವೇ ಸಚಿವಾಲಯವು(Ministry Of Railways) ದೇಶದ ಮೊದಲ ಪ್ರಸ್ತಾವಿತ ಮುಂಬೈ-ಅಹಮದಾಬಾದ್ ಬುಲೆಟ್ ರೈಲಿನ (Bullet Train) ವಿನ್ಯಾಸದ ಚಿತ್ರವನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ.
ಜಪಾನ್‌ನ ಪ್ರಸಿದ್ಧ ಶಿಂಕನ್‌ಸನ್ (Shinkansen) ಹೈ-ಸ್ಪೀಡ್ ರೈಲು ಮಾದರಿಯನ್ನು ಆಧರಿಸಿ ಏರೋಡೈನಾಮಿಕ್ (ಚಲಿಸುವ ವಸ್ತುವಿಗೆ ಎದುರಾಗುವ ಗಾಳಿಯ ಪ್ರತಿರೋಧವನ್ನು ಕಡಿಮೆ ಮಾಡಲು ರೂಪಿಸುವ ವಿಶೇಷ ದೇಹ ವಿನ್ಯಾಸ) ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.
ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಮತ್ತು ಬೆಂಗಳೂರಿನ ಬಿಇಎಂಎಲ್ (BEML) ಜಂಟಿಯಾಗಿ ಭಾರತದ ಮೊದಲ ಸ್ವದೇಶಿ ಬುಲೆಟ್ ರೈಲು ಮಾದರಿಯನ್ನು ಅಭಿವೃದ್ಧಿಪಡಿಸುತ್ತಿವೆ.
ಮುಂಬೈ ಮತ್ತು ಅಹಮದಾಬಾದ್ ನಡುವಿನ ಈ ಹೈ-ಸ್ಪೀಡ್ ಕಾರಿಡಾರ್ 508 ಕಿಲೋಮೀಟರ್ ಉದ್ದವನ್ನು ಹೊಂದಿದೆ. ಈ ಬುಲೆಟ್ ರೈಲು ಗಂಟೆಗೆ ಗರಿಷ್ಠ 320 ಕಿ.ಮೀ ವೇಗದಲ್ಲಿ ಚಲಿಸಲಿದೆ. ಕೇವಲ 2 ಗಂಟೆ 17 ನಿಮಿಷಗಳಲ್ಲಿ ಇಡೀ ದೂರವನ್ನು ಕ್ರಮಿಸಲಿದೆ.

ಸೂರತ್ ಮತ್ತು ವಾಪಿ ನಡುವಿನ ಮೊದಲ 50 ಕಿ.ಮೀ ನಿಂದ 100 ಕಿ.ಮೀ ವರೆಗಿನ ಮಾರ್ಗವು ಆಗಸ್ಟ್ 2027 ರ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ತಿಳಿಸಿದ್ದಾರೆ. ಸಂಪೂರ್ಣ ಯೋಜನೆ ಡಿಸೆಂಬರ್ 2029 ರ ವೇಳೆಗೆ ಪೂರ್ಣಗೊಳ್ಳುವ ಗುರಿ ಹೊಂದಿದೆ.
508 ಕಿ.ಮೀ ಮಾರ್ಗದಲ್ಲಿ ಈಗಾಗಲೇ 349 ಕಿ.ಮೀ ಗಿಂತಲೂ ಹೆಚ್ಚು ಉದ್ದದ ವಯಾಡಕ್ಟ್ (ಮೇಲ್ಸೇತುವೆ ರಚನೆ) ಮತ್ತು 435 ಕಿ.ಮೀ ನಷ್ಟು ಪಿಲ್ಲರ್ (Pier) ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇದನ್ನೂ ಓದಿ: ಬೆಂಗಳೂರಿಗೆ ಬರಲಿದೆ ಹೈಸ್ಪೀಡ್ ಬುಲೆಟ್ ರೈಲು
ಈ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳಿದ್ದು (ಗುಜರಾತ್‌ನಲ್ಲಿ 8, ಮಹಾರಾಷ್ಟ್ರದಲ್ಲಿ 4), ಗುಜರಾತ್‌ನ ಎಲ್ಲಾ 8 ನಿಲ್ದಾಣಗಳ ಮೇಲ್ಛಾವಣಿ ಕೆಲಸ ಮುಗಿದು ಆಯಾ ನಗರದ ಸಂಸ್ಕೃತಿಯನ್ನು ಬಿಂಬಿಸುವ ಒಳಾಂಗಣ ವಿನ್ಯಾಸದ ಕೆಲಸಗಳು ನಡೆಯುತ್ತಿವೆ.

