– ದಕ್ಷಿಣ ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಅನುಮೋದನೆ
– ಶೀಘ್ರದಲ್ಲಿಯೇ ಕಾಮಗಾರಿ ಆರಂಭ; ಹೈದ್ರಾಬಾದ್, ಚೆನ್ನೈಗೆ ಸಂಪರ್ಕ
ಬೆಂಗಳೂರು: ಜಪಾನ್, ಚೀನಾ, ಜರ್ಮನಿ ರಾಷ್ಟ್ರಗಳಲ್ಲಿ ಜನಪ್ರಿಯಗೊಂಡಿರುವ ಬುಲೆಟ್ ರೈಲು ಇದೀಗಾ ನಮ್ಮ ಬೆಂಗಳೂರಿಗೂ ಬರಲಿದೆ. ಬೆಂಗಳೂರಿನಿಂದ ಹೈದರಾಬಾದ್, ಚೆನ್ನೈಗೆ ಸಂಪರ್ಕಿಸುವ ಬುಲೆಟ್ ರೈಲು (High Speed Bullet Train) ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದ ಬಳಿಕ ನಕ್ಷೆ ಬಿಡುಗಡೆ ಮಾಡಿದೆ.
ದಕ್ಷಿಣ ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭ ಆಗಲಿದೆ. ಬೆಂಗಳೂರು-ಹೈದ್ರಾಬಾದ್, ಬೆಂಗಳೂರು ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್‌ಗಳ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಇದೀಗ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದನ್ನೂ ಓದಿ: ಆನೆಗಳ ಸ್ನಾನ 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ: ಈಶ್ವರ ಖಂಡ್ರೆ
ಈ ಹೈಸ್ಪೀಡ್ ರೈಲು ಯೋಜನೆಗಳು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿಗೆ ಸಂಪರ್ಕಿಸುತ್ತದೆ. ಬೆಂಗಳೂರಿನಿಂದ ಹೈದರಾಬಾದ್, ಚೆನ್ನೈಗೆ ಬುಲೆಟ್ ರೈಲು ಓಡಾಡಲಿದೆ. ಈ ಕಾರಿಡಾರ್ 607 ಕಿ.ಮೀ ಉದ್ದವಿದ್ದು, 101 ಕಿ.ಮೀ ಮಾರ್ಗವು ಕರ್ನಾಟಕದ ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಮೂಲಕ ಹಾದುಹೋಗಲಿದೆ. ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸಲು ಎಂಟರಿಂದ 12 ಘಂಟೆಗಳ ಸಮಯಬೇಕು. ಆದರೆ, ಬುಲೆಟ್ ರೈಲಿಗೆ ಕೇವಲ ಎರಡು ಗಂಟೆ ಸಾಕಾಗಲಿದೆ.
ಎರಡನೇ ಕಾರಿಡಾರ್ ಮೈಸೂರು, ಬೆಂಗಳೂರು, ಚೆನ್ನೈ ನಗರವನ್ನ ಸಂಪರ್ಕಿಸಲಿದೆ. ಇದು 430 ಕಿ.ಮೀ ಉದ್ದವಿದ್ದು, ಬೆಂಗಳೂರಿನಿಂದ ಚೆನ್ನೈಗೆ 5-7 ಗಂಟೆಗಳು ಬೇಕಾಗುತ್ತದೆ. ಆದರೆ, ಈ ಹೈಸ್ಪೀಡ್ ರೈಲು ಆರಂಭವಾದರೆ ಕೇವಲ 1 ಗಂಟೆ 15 ನಿಮಿಷ ತಗಲುತ್ತದೆ. ಈ ಕಾಮಗಾರಿಯು ಬೇಗ ಆರಂಭ ಆಗಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೆಚ್‌ಡಿಎಫ್‌ಸಿ ಬ್ಯಾಂಕ್ ಹಿಂದಿಕ್ಕಿ ದೇಶದ ಎರಡನೇ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದ ಭಾರ್ತಿ ಏರ್‌ಟೆಲ್
ಈ ಎರಡು ಬೃಹತ್ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆಯೂ ಆರಂಭಗೊಂಡಿದೆ. ಕರ್ನಾಟಕದಾದ್ಯಂತ 1,757 ಹೆಕ್ಟೆರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯಿದೆ.

