ಮುಂಬೈ: ಭಾರ್ತಿ ಏರ್‌ಟೆಲ್ (Bharti Airtel) ಕಂಪನಿಯು ಮಾರುಕಟ್ಟೆ ಮೌಲ್ಯದಲ್ಲಿ (Market Capitalization) ಹೆಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಹಿಂದಿಕ್ಕಿ ಭಾರತದ ಎರಡನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದೆ.
ಷೇರು ಮಾರುಕಟ್ಟೆಯ ಇತ್ತೀಚಿನ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮೊದಲ ಸ್ಥಾನದಲ್ಲಿದ್ದರೆ, ಏರ್‌ಟೆಲ್ ದ್ವಿತೀಯ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್ ತೃತೀಯ ಸ್ಥಾನಕ್ಕೆ ಕುಸಿದಿದೆ.
ಏರ್‌ಟೆಲ್‌ನ ಒಟ್ಟು ಮಾರುಕಟ್ಟೆ ಮೌಲ್ಯವು ಸುಮಾರು 11.8 ಲಕ್ಷ ಕೋಟಿ ರೂ. ದಾಟಿದರೆ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಹೆಚ್‌ಡಿಎಫ್‌ಸಿ ಪ್ರಸ್ತುತ ಸುಮಾರು 11.7 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದೆ.
ಏರ್‌ಟೆಲ್ ಷೇರುಗಳ ಭಾರಿ ಏರಿಕೆ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಎದುರಿಸುತ್ತಿರುವ ಆಂತರಿಕ ಒತ್ತಡದಿಂದಾಗಿ ಎರಡೂ ಕಂಪನಿಗಳ ಸ್ಥಾನ ಪಲ್ಲಟವಾಗಿದೆ. ಇದನ್ನೂ ಓದಿ: ಅಮೆರಿಕದಲ್ಲೇ ಮೊಬೈಲ್ ಬಿಟ್ಟು ಚೀನಾದಲ್ಲಿ ಬರ್ನರ್ ಫೋನ್ ಬಳಸಿದ ಟೆಕ್ ದಿಗ್ಗಜರು – ಏನಿದು ಡಿಜಿಟಲ್ ಲಾಕ್‌ಡೌನ್?

ಪ್ರತಿ ಗ್ರಾಹಕರಿಂದ ಬರುವ ಸರಾಸರಿ ಆದಾಯವನ್ನು (Average Revenue Per User) ಹೆಚ್ಚಿಸಲು ಏರ್‌ಟೆಲ್ ಕೈಗೊಂಡ ಕ್ರಮಗಳು ಹಾಗೂ ಪ್ರಿಪೇಯ್ಡ್ ದರಗಳ ಹೆಚ್ಚಳವು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿದೆ. ದೇಶಾದ್ಯಂತ 5G ನೆಟ್‌ವರ್ಕ್‌ನ ಯಶಸ್ವಿ ವಿಸ್ತರಣೆ ಮತ್ತು ಗ್ರಾಹಕರಲ್ಲಿ ಹೆಚ್ಚುತ್ತಿರುವ ಇಂಟರ್ನೆಟ್ ಡೇಟಾ ಬಳಕೆಯು ಕಂಪನಿಯ ಆದಾಯವನ್ನು ಹೆಚ್ಚಿಸಿದೆ.
ಇತ್ತೀಚೆಗೆ ಏರ್‌ಟೆಲ್ ಜಾಗತಿಕವಾಗಿ 65 ಕೋಟಿ ಗ್ರಾಹಕರನ್ನು ಹೊಂದುವ ಮೂಲಕ ವಿಶ್ವದ ಎರಡನೇ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿ ಹೊರಹೊಮ್ಮಿದೆ. ಭಾರ್ತಿ ಎಂಟರ್‌ಪ್ರೈಸಸ್ ಮುಖ್ಯಸ್ಥ ಸುನಿಲ್ ಭಾರ್ತಿ ಮಿತ್ತಲ್ ಅವರು ಮುಂದಿನ ದಿನಗಳಲ್ಲಿ ಕಂಪನಿಯಲ್ಲಿ ತಮ್ಮ ಪಾಲನ್ನು 51% ಕ್ಕೆ ಹೆಚ್ಚಿಸಿಕೊಳ್ಳುವ ದೀರ್ಘಾವಧಿಯ ಯೋಜನೆಯನ್ನು ಪ್ರಕಟಿಸಿರುವುದು ಹೂಡಿಕೆದಾರರಲ್ಲಿ ಪಾಸಿಟಿವ್ ಸೆಂಟಿಮೆಂಟ್ ಸೃಷ್ಟಿಸಿದೆ.
ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಅರೆಕಾಲಿಕ ಅಧ್ಯಕ್ಷರಾಗಿದ್ದ ಅತನು ಚಕ್ರವರ್ತಿ ಅವರ ರಾಜೀನಾಮೆಯ ನಂತರ ಬ್ಯಾಂಕ್‌ನ ಮುಂದಿನ ನಾಯಕತ್ವದ (Succession Plan) ಕುರಿತು ಮಾರುಕಟ್ಟೆಯಲ್ಲಿ ಆತಂಕ ಮೂಡಿದ್ದು, ಷೇರುಗಳ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಇತ್ತೀಚಿನ ವಹಿವಾಟುಗಳಲ್ಲಿ ಏರ್‌ಟೆಲ್ ಷೇರುಗಳು 10% ಕ್ಕೂ ಹೆಚ್ಚು ಜಿಗಿತ ಕಂಡರೆ, ಹೆಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಕೇವಲ 1% ರಷ್ಟು ಮಾತ್ರ ಚೇತರಿಕೆ ಕಂಡಿವೆ.
ಇಂದು ಭಾರ್ತಿ ಏರ್‌ಟೆಲ್ ಷೇರು ಮೌಯ 32.70 ರೂ.(1.72%) ಏರಿಕೆಯಾಗಿದ್ದರೆ ಹೆಚ್‌ಡಿಎಫ್‌ಸಿ ಬ್ಯಾಂಕ್ 1.15(0.15%) ಮಾತ್ರ ಏರಿಕೆಯಾಗಿತ್ತು.

