ಹೈದರಾಬಾದ್: ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಭಾರತ್ ರಾಷ್ಟ್ರ ಸಮಿತಿಯ (BRS) ಶಾಸಕಿ ಜಿ ಲಾಸ್ಯ ನಂದಿತಾ (G Lasya Nanditha) (37) ದುರ್ಮರಣಕ್ಕೀಡಾಗಿದ್ದಾರೆ.
ಈ ಘಟನೆ ಇಂದು ಬೆಳಗ್ಗೆ 6.30ರ ಸುಮಾರಿಗೆ ಹೈದರಾಬಾದ್‌ನ (Hyderabad) ಹೊರವಲಯದಲ್ಲಿರುವ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಟಂಚೇರು ಎಂಬಲ್ಲಿ ಸಂಭವಿಸಿದೆ.
ನಂದಿತಾ ಅವರು ತಮ್ಮ ಎಸ್‌ಯುವಿ ಕಾರಿನಲ್ಲಿ ನಗರಕ್ಕೆ ವಾಪಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಎಕ್ಸ್‌ಪ್ರೆಸ್‌ವೇಯ ಎಡಭಾಗದಲ್ಲಿರುವ ಲೋಹದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಶಾಸಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಕಾರು ಚಾಲಕನನ್ನು ಸಮೀಪದ ಪಟಂಚೇರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಸಿಎಂ ಮನೋಹರ್ ಜೋಶಿ ನಿಧನ
ನಂದಿತಾ ಅವರು ಫೆಬ್ರವರಿ 13 ರಂದು ಬಿಆರ್‌ಎಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಸಾರ್ವಜನಿಕ ರ‍್ಯಾಲಿಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಮರ್ರಿಗುಡ ಜಂಕ್ಷನ್‌ನಲ್ಲಿ ಇದೇ ರೀತಿಯ ರಸ್ತೆ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಪಾರಾಗಿದ್ದರು.
ಬಿಆರ್‌ಎಸ್‌ನ ಮಾಜಿ ಶಾಸಕ ದಿವಂಗತ ಜಿ ಸಾಯಣ್ಣ ಅವರ ಪುತ್ರಿಯಾಗಿರುವ ನಂದಿತಾ ಅವರು ಕಳೆದ ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಕಂದರಾಬಾದ್ ಕಂಟೋನ್ಮೆಂಟ್ ಕ್ಷೇತ್ರದಿಂದ ಜಿ ವೆನ್ನೆಲ ಅವರನ್ನು ಸೋಲಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದ್ದರು.