ಸಾವಿನಲ್ಲೂ ಸಾರ್ಥಕತೆ ಮೆರೆದ ವಧು-ಕಣ್ಣು, ಹೃದಯ, ಕಿಡ್ನಿ ದಾನ

Public TV
2 Min Read
kolar

ಕೋಲಾರ: ವಧು ತನ್ನ ಜೀವನದಲ್ಲಿ ನೂರಾರು ಕನಸುಗಳನ್ನ ಹೊತ್ತು ಹಸಮಣೆ ಏರಲು ಸಿದ್ದವಾಗಿದ್ದಳು. ಕುಟುಂಬದಲ್ಲೆಲ್ಲಾ ಮದುವೆಯ ಸಂಭ್ರಮ, ಆರತಕ್ಷತೆಗೆ ನೂರಾರು ಜನರು ಮದುಮಗಳಿಗೆ ಶುಭ ಹಾರೈಸುತ್ತಿದ್ದರು. ಹೀಗಿರುವಾಗ ವಿಧಿಯಾಟವೇ ಬೇರೆಯಾಗಿ ಮದುವೆ ಮನೆಗೆ ಸೂತಕದ ಛಾಯ ಆವರಿಸಿತ್ತು. ಹೊಸ ಜೀವನಕ್ಕೆ ಕಾಲಿಟ್ಟು ಬದುಕ ಬೇಕಿದ್ದ ಮಗಳನ್ನು ಕಳೆದು ಕೊಂಡ ಕುಟುಂಬಸ್ಥರು ಕುಟುಂಬದ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕು ಕೊಡಚೆರವು ಗ್ರಾಮದ ಕೃಷಿಕ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ರಾಮಪ್ಪ ಮತ್ತು ಆಕ್ಕೆಮ್ಮ ಅವರ ಏಕೈಕ ಪುತ್ರಿಯಾದ ಚೈತ್ರಾಳಿಗೆ ಮದುವೆ ನಿಶ್ಚಯವಾಗಿತ್ತು, ಎಂಎಸ್ಸಿ ಬಯೋಕೆಮೆಸ್ಟ್ರಿ ಮಾಡಿ ಕೈವಾರ ಬಳಿಯ ಬೈರವೇಶ್ವರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ, ಚೈತ್ರಾಗೆ ಹೊಸಕೋಟೆಯ ಯುವಕನೊಂದಿಗೆ ಫೆಬ್ರವರಿ 6 ಮತ್ತು 7 ರಂದು ಶ್ರೀನಿವಾಸಪುರದ ಮಾರುತಿ ಸಭಾ ಭವನದಲ್ಲಿ ಮದುವೆ ನಿಶ್ಚಯವಾಗಿತ್ತು.

bride Kolara

ನಡೆದಿದ್ದೇನು?: ಫೆಬ್ರವರಿ-6 ರಂದು ಸಂಜೆ 6 ಗಂಟೆಗೆ ಆರತಕ್ಷತೆಗೆ ಸಿದ್ದವಾಗಿ ವರನ ಜೊತೆ ಆಗಮಿಸಿದ ಚೈತ್ರಾ ರಾತ್ರಿ-9 ಗಂಟೆಯವರೆಗೂ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿದ್ದರು. ಆದರೆ 9 ಗಂಟೆ ಸುಮಾರಿಗೆ ದಿಢೀರನೇ ಆರತಕ್ಷತೆ ವೇದಿಕೆ ಮೇಲೆಯೆ ಚೈತ್ರಾ ಕುಸಿದು ಬಿದ್ದಿದ್ದಾಳೆ. ಕೂಡಲೇ ಮದುವೆ ಕಾರ್ಯಕ್ರಮದಲ್ಲೇ ಇದ್ದ ವೈದ್ಯರುಗಳು ಚೈತ್ರಾಳನ್ನು ಶ್ರೀನಿವಾಸಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದ್ದಾರೆ. ಅಲ್ಲಿಂದ ನೇರವಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬ್ರೈನ್ ಸ್ಟ್ರೋಕ್ ಆಗಿದೆ, ಅನ್ನೋದು ತಿಳಿದು ನಂತರ ಸತತ ಐದು ದಿನಗಳ ಕಾಲ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ವೈದ್ಯರು ಬ್ರೈನ್ ಡೆಡ್ ಎಂದು ತಿಳಿಸಿದ್ದಾರೆ.

ಬ್ರೈನ್ ಡೆಡ್ ಆಗಿದ್ದು, ಚೈತ್ರಾ ಚಿಕಿತ್ಸೆಗೆ ಸ್ಪಂದಿಸದೆ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಾ ಹೋದ ಮೇಲೆ ಬಹುತೇಕ ಚೈತ್ರಾ ಬದುಕೋದು ಅನುಮಾನ ಎಂದು ವೈದ್ಯರ ಸಲಹೆ ನೀಡಿದರು. ಕುಟುಂಬಸ್ಥರು ಚೈತ್ರಾಳ ಅಂಗಾಗಧಾನ ಮಾಡಲು ನಿರ್ಧಾರ ಮಾಡಿದ್ದಾರೆ, ಹೃದಯ ಒಡೆದು ಹೋಗುವಷ್ಟು ದು:ಖ ಆವರಿಸಿದ್ದರೂ, ಸಮಾಧಾನ ಮಾಡಿಕೊಳ್ಳಲಾಗಷ್ಟು ನೋವಿನಲ್ಲೂ ಗಟ್ಟಿ ಮನಸ್ಸು ಮಾಡಿದ ಕುಟುಂಬಸ್ಥರು ಚೈತ್ರಾಳ ಕಣ್ಣು, ಹೃದಯ, ಮತ್ತು ಕಿಡ್ನಿಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

bride Kolara 1

ಹೊಸ ಜೀವನಕ್ಕೆ ಕಾಲಿಟ್ಟು ಬದುಕ ಬೇಕಿದ್ದ ಮಗಳನ್ನು ಕಳೆದು ಕೊಂಡ ಕುಟುಂಬಸ್ಥರು ಕೊನೆ ಪಕ್ಷ ಮಗಳ ನೆನಪಿನಲ್ಲಿ ಈ ರೀತಿ ಅಂಗಾಂಗ ದಾನದಿಂದ ನಾಲ್ಕಾರು ಜನರ ಜೀವ ಉಳಿದಿದೆ. ನಮಗೂ ನೆಮ್ಮದಿ ನಮ್ಮ ಮಗಳು ಸಾಯೋದಿಲ್ಲ ಇನ್ನೊಬರ ಜೀವ ಉಳಿಸಿ ಬದುಕುತ್ತಾಳೆ ಎಂದು ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಈ ಕೃಷಿಕ ಕುಟುಂಬಸ್ಥರ ಅಂಗಾಂಗ ದಾನ ವಿಚಾರವನ್ನು ಆರೋಗ್ಯ ಸಚಿವ ಸುಧಾಕರ್ ಕೂಡಾ ಟ್ವಿಟರ್‌ನಲ್ಲಿ ಟ್ವೀಟ್‌ ಮಾಡುವ ಮೂಲಕ ಈ ಕುಟುಂಬಸ್ಥರು ನೋವಿನಲ್ಲಿ ಮಾಡಿದ ಸಾರ್ಥಕ ಕೆಲಸವನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ

ಸಂಭ್ರಮದ ಮನೆ ಸೂತಕದ ಮನೆಯಾಗಿ ಇಡೀ ಕುಟುಂಬಕ್ಕೆ ಆಘಾತ ಬಂದೆರಗಿದರೂ ನೋವಿನಲ್ಲೂ ಸಾರ್ಥಕತೆ ಮೆರೆದು ಚೈತ್ರಾ ಕುಟುಂಬ ತೆಗೆದುಕೊಂಡ ನಿರ್ಧಾರ ಇಡೀ ಸಮಾಜಕ್ಕೆ ಮಾದರಿಯಾಗಿದೆ. ಸಂಕಷ್ಟದಲ್ಲಿರುವ ಹಲವರಿಗೆ ಮರು ಜೀವ ಕೊಟ್ಟ ಚೈತ್ರಾ ನೆನಪು ಸದಾ ಹಸಿರಾಗಿರುತ್ತದೆ ಅನ್ನೋದು ವಿಶೇಷವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *