ಬ್ರೆಝಿಲ್ ಮನೆಗೆ, ಬೆಲ್ಜಿಯಂ ಸೆಮಿಗೆ

Public TV
1 Min Read
Brazil vs Belgium 1

ಮಾಸ್ಕೊ: ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 6ನೇ ಬಾರಿ ಪ್ರಶಸ್ತಿ ಗೆಲ್ಲುವ ಬಲಿಷ್ಠ ಬ್ರೆಝಿಲ್ ತಂಡದ ಕನಸು ನೂಚ್ಚುನೂರಾಗಿದೆ. ಕಝಾನ್ ಅರೆನಾದಲ್ಲಿ ನಡೆದ ನಡೆದ ಜಿದ್ದಾಜಿದ್ದಿನ ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ 2-1 ಗೋಲುಗಳ ಅಂತರದಲ್ಲಿ ಬ್ರೆಝಿಲ್‍ಗೆ ಆಘಾತವಿಕ್ಕಿದ, ರೆಡ್ ಡೆವಿಲ್ಸ್ ಖ್ಯಾತಿಯ ಬೆಲ್ಜಿಯಂ ಸೆಮಿಫೈನಲ್ ಪ್ರವೇಶಿಸಿದೆ.

ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದ 13ನೇ ನಿಮಿಷದಲ್ಲಿ ಫೆರ್ನಾಂಡಿನೊ ನೀಡಿದ ಸೆಲ್ಫ್ ಗೋಲ್ ಬೆಲ್ಜಿಯಂಗೆ ವರವಾಯಿತು. ಬೆಲ್ಜಿಯಂನ ವಿನ್ಸೆಂಟ್ ಕೊಂಪನಿ ಕಾರ್ನರ್‍ನಿಂದ ಕಳುಹಿಸಿದ ಚೆಂಡನ್ನು ಹೆಡ್ ಮಾಡಲು ಜಂಪ್ ಮಾಡಿದ ಫೆರ್ನಾಂಡಿನೋ ತಮ್ಮ ತಂಡದ ಗೋಲು ಬಲೆಯೊಳಗೆ ಚೆಂಡನ್ನು ತಳ್ಳಿ ಬೆಲ್ಜಿಯಂಗೆ ಮುನ್ನಡೆ ತಂದುಕೊಟ್ಟರು. ನಂತರದಲ್ಲೂ ಅಕ್ರಮಣಕಾರಿ ಆಟದ ತಂತ್ರದ ಮೊರೆ ಹೋದ ಬೆಲ್ಜಿಯಂ 31ನೇ ನಿಮಿಷದಲ್ಲಿ ಸ್ಟಾರ್ ಮಿಡ್‍ಫೀಲ್ಡರ್ ಕೆವಿನ್ ಡಿ ಬ್ರೂಯ್ನ್ ಮೂಲಕ ಮತ್ತೊಂದು ಗೋಲು ದಾಖಲಿಸಿ ಬ್ರೆಝಿಲ್‍ಗೆ ಡಬಲ್ ಶಾಕ್ ನೀಡಿತು. ನಾಯಕ ಹಝಾರ್ಡ್ ನೀಡಿದ ಪಾಸ್‍ಅನ್ನು ಡಿ ಬಾಕ್ಸ್‍ನ ಹೊರಭಾಗದಿಂದಲೇ ರಾಕೆಟ್ ವೇಗದಲ್ಲಿ ಗುರು ಮುಟ್ಟಿಸಿದ ಮ್ಯಾಂಚೆಸ್ಟರ್ ಸಿಟಿ ಆಟಗಾರ, ಬೆಲ್ಜಿಯಂ ಅಭಿಮಾನಿಗಳು ಗ್ಯಾಲರಿಯಲ್ಲಿ ಕುಣಿದು ಕುಪ್ಪಳಿಸುವಂತೆ ಮಾಡಿದರು. ಆ ಮೂಲಕ ಮೊದಲಾರ್ಧದಲ್ಲಿ ಬೆಲ್ಜಿಯಂ 2-0 ಅಂತರದ ಮುನ್ನಡೆ ದಾಖಲಿಸಿತ್ತು.

Brazil vs Belgium

ಪಂದ್ಯದ ದ್ವಿತೀಯಾರ್ಧದಲ್ಲಿ ನೇಮರ್, ಗೆಬ್ರಿಯಲ್ ಜೀಸಸ್, ಹಾಗೂ ವಿಲ್ಲನ್ ಅವರನ್ನು ಒಳಗೊಂಡ ಬ್ರಝಿಲ್ ಮುನ್ಪಡೆ ಆಟಗಾರರು ಬೆಲ್ಜಿಯಂ ರಕ್ಷಣಾ ಕೋಟೆಯನ್ನು ದಾಟಲು ಸತತ ಪ್ರಯತ್ನ ನಡೆಸಿದರು. 76ನೇ ನಿಮಿಷದಲ್ಲಿ ಕೊಟಿನ್ಹೊ ಪಾಸ್‍ನ್ನು ಹೆಡರ್ ಮೂಲಕ ಗುರು ಮುಟ್ಟಿಸಿದ ರೆನಟೊ ಆಗಸ್ಟೊ, ಬ್ರಝಿಲ್ ಪರ ಏಕೈಕ ಗೋಲು ದಾಖಲಿಸಿ ಸೋಲಿನ ಅಂತರವನ್ನು ತಗ್ಗಿಸಿದರು.

ಬ್ರೆಝಿಲ್‍ಗೆ ತಡೆಗೋಡೆಯಾದ ಕಾಟ್ರೋಯ್: ಬ್ರಝಿಲ್ ವಿರುದ್ಧದ ಮಹತ್ವದ ಪಂದ್ಯ ಗೆಲ್ಲಲು ಬೆಲ್ಜಿಯಂಗೆ ನೆರವಾಗಿದ್ದು ಗೋಲ್‍ಕೀಪರ್ ಕಾಟ್ರೋಯ್ಸ್. ದ್ವಿತೀಯಾರ್ಧದಲ್ಲಿ 17 ಬಾರಿ ಗೋಲು ಬಲೆಯನ್ನು ಗುರಿಯಾಗಿಸಿದ ಬಂದ ಚೆಂಡನ್ನು 16 ಬಾರಿಯೂ ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಚೆಲ್ಸಿಯಾ ಗೋಲ್ ಕೀಪರ್ ಬ್ರೆಝಿಲ್‍ನ ಎಲ್ಲಾ ಪ್ರಯತ್ನಗಳಿಗೂ ತಡೆಗೋಡೆಯಾದರು. ಮಂಗಳವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂ, ಫ್ರಾನ್ಸ್ ವಿರುದ್ಧ ಸೆಣೆಸಲಿದೆ.

 

Share This Article
Leave a Comment

Leave a Reply

Your email address will not be published. Required fields are marked *