ಶಿವಮೊಗ್ಗ: ರೈಸ್ ಮಿಲ್‌ನಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ 7 ಮಂದಿ ಕಾರ್ಮಿಕರು ಗಾಯಗೊಂಡು, ಓರ್ವ ಕಾರ್ಮಿಕ ನಾಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ.
ಭದ್ರಾವತಿ ಪಟ್ಟಣದ ಗಣೇಶ್ ರೈಸ್ ಮಿಲ್‌ನಲ್ಲಿ ಸಂಭವಿಸಿದ ಭಾರಿ ಸ್ಫೋಟ ಸುತ್ತಮುತ್ತಲ ನಿವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಭದ್ರಾವತಿಯ ಚನ್ನಗಿರಿ ರಸ್ತೆಯ ಸೀಗೆಬಾಗಿಯ ಗಣೇಶ್ ರೈಸ್ ಮಿಲ್‌ನಲ್ಲಿ ಸಂಜೆ 7 ಗಂಟೆ ಹೊತ್ತಿಗೆ ಸ್ಫೋಟ ಸಂಭವಿಸಿದೆ. ಬಾಯ್ಲರ್ ಸ್ಫೋಟಗೊಂಡು ಭಾರಿ ಶಬ್ದ ಕೇಳಿಸಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳು ಆತಂಕ್ಕೀಡಾಗಿದ್ದಾರೆ.
Advertisement
ಸ್ಫೋಟದ ತೀವ್ರತೆಗೆ ಗಣೇಶ್ ರೈಸ್ ಮಿಲ್ ಕಟ್ಟಡ ಸಂಪೂರ್ಣ ಹಾನಿಯಾಗಿದೆ. ಅಲ್ಲದೇ, ರೈಸ್ ಮಿಲ್‌ನಲ್ಲಿದ್ದ ಕೆಲವು ಉಪಕರಣಗಳು ಬಹುದೂರದವರೆಗೆ ಹಾರಿ ಹೋಗಿವೆ. ಇಂದಿರಾನಗರ ಬಡಾವಣೆಯಲ್ಲಿ ಮನೆಯೊಂದರ ಆರ್‌ಸಿಸಿ ಸೀಳಿಕೊಂಡು ಉಪಕರಣವೊಂದು ಒಳಗೆ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅನ್ವರ್ ಕಾಲೋನಿಯಲ್ಲಿ ಮನೆಯೊಂದರ ಮೇಲೆ ಉಪಕರಣವೊಂದು ಬಿದ್ದಿದೆ. ಹಾಗಾಗಿ ಮನೆಯ ಹೆಂಚು ಪುಡಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
Advertisement
ಸ್ಫೋಟ ಸಂದರ್ಭ ರೈಸ್ ಮಿಲ್ ಒಳಗೆ ಹಲವರು ಇದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಏಳು ಮಂದಿ ಗಾಯಗೊಂಡಿದ್ದು ಅವರನ್ನು ಭದ್ರಾವತಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ. ಬಾಯ್ಲರ್ ಆಪರೇಟರ್ ರಘು ಎಂಬಾತ ನಾಪತ್ತೆಯಾಗಿದ್ದು, ಆತನಿಗಾಗಿ ಕಟ್ಟಡದಲ್ಲಿ ಶೋಧ ಕಾರ್ಯ ಮುಂದುವರೆದಿದೆ.
Advertisement
ಘಟನೆ ಬೆನ್ನಿಗೆ ಸೀಗೆಬಾಗಿ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಿದೆ. ಇಂದು ರಾತ್ರಿ ಹಲವೆಡೆ ಕರೆಂಟ್ ಕಟ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ಲೈನ್ ಪರಿಶೀಲನೆ ನಡೆಸುತ್ತಿದೆ. ಬಾಯ್ಲರ್ ಸ್ಫೋಟದಿಂದಾಗಿ ದೊಡ್ಡ ಮಟ್ಟದಲ್ಲಿ ಆಸ್ತಿಪಾಸ್ತಿ ಹಾನಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಟ್ಟಡಗಳು ಹಾನಿಗೀಡಾಗಿವೆ. ಲಾರಿ, ಬೈಕುಗಳು ಜಖಂ ಆಗಿವೆ. ಸದ್ಯ ಶೋಧ ಕಾರ್ಯ ಮುಂದುವರೆದಿದ್ದು, ಆಸ್ತಿಪಾಸ್ತಿ ಹಾನಿ ಕುರಿತು ಇನ್ನಷ್ಟೆ ಅಂದಾಜು ಮಾಡಬೇಕಿದೆ.