ಮುಂಬೈ: ಮಹಾರಾಷ್ಟ್ರದಾದ್ಯಂತ ಇಂದು ಸ್ಥಳೀಯ ಸಂಸ್ಥೆ ಚುನಾವಣೆ ಮತದಾನ ನಡೆದಿದ್ದು ಬೃಹನ್ ಮುಂಬೈ ಪಾಲಿಕೆಗೆ (BMC) ಜಿದ್ದಾಜಿದ್ದಿ ಹೋರಾಟ ನಡೆದಿದೆ. ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು (Mahayuti Alliance) ಠಾಕ್ರೆ ಸೋದರ ಸಂಬಂಧಿಗಳೊಂದಿಗೆ ತೀವ್ರ ಹಣಾಹಣಿ ನಡೆಸಿದೆ. 9 ವರ್ಷಗಳ ಸುದೀರ್ಘ ಅವಧಿಯ ಬಳಿಕ ಬೃಹನ್ ಮುಂಬೈ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಗೆಲುವು ಸಾಧಿಸುವ ಸಾಧ್ಯತೆಗಳಿವೆ ಎಂದು ಸಮೀಕ್ಷೆಗಳು ಹೇಳಿವೆ.
ಹೌದು. ವಾರ್ಷಿಕ ಬಜೆಟ್ 74,400 ಕೋಟಿಗಿಂತ ಹೆಚ್ಚಿರುವ ಬೃಹನ್ ಮುಂಬೈ ಪಾಲಿಕೆಯಲ್ಲಿ 9 ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ 227 ಸ್ಥಾನಗಳಿಗೆ 1,700 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಈ ಬಾರಿ ಮುಂಬೈನಲ್ಲಿ ಬಿಜೆಪಿ (BJP) ನೇತೃತ್ವದ ಮಹಾಯುತಿ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿಯಲಿದ್ದು, ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಸೂಚಿಸಿವೆ. ಈವೆರೆಗೆ ಹೊರಬಿದ್ದ ಎಕ್ಸಿಟ್ ಪೋಲ್‌ನ ಮೂರು ಸಮೀಕ್ಷಾ ವರದಿಗಳು ಮಹಾಯುತಿ ಮೈತ್ರಿಕೂಟಕ್ಕೆ ಗೆಲುವು ಸೂಚಿಸಿವೆ. 2017ರ ಚುನಾವಣೆಯಲ್ಲಿ ಬಿಜೆಪಿ 82, ಎಸ್‌ಹೆಚ್‌ಎಸ್ 84, ಎಂಎನ್‌ಎಸ್ 7, ಕಾಂಗ್ರೆಸ್ 31, ಎನ್‌ಸಿಪಿ 9 ಹಾಗೂ ಇತರೇ ಪಕ್ಷಗಳು 14 ಸ್ಥಾನಗಳನ್ನ ಪಡೆದುಕೊಂಡಿದ್ದವು.
ಸಮೀಕ್ಷೆ – 1
ಜೆವಿಸಿ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ, ಮಹಾಯುತಿ ಮೈತ್ರಿಕೂಟ – ಬಿಜೆಪಿ ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ – 227 ರಲ್ಲಿ 138 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಠಾಕ್ರೆ ಸೋದರಸಂಬಂಧಿಗಳಾದ ಉದ್ಧವ್ (ಶಿವಸೇನೆ-ಯುಬಿಟಿ) ಮತ್ತು ರಾಜ್ (ಮಹಾರಾಷ್ಟ್ರ ನವನಿರ್ಮಾಣ ಸೇನೆ) 59 ಸ್ಥಾನಗಳನ್ನ ಗೆಲ್ಲುವ ನಿರೀಕ್ಷೆಯಿದೆ. ಇನ್ನೂ ಕಾಂಗ್ರೆಸ್ 23, ಇತರ ಪಕ್ಷಗಳು 7 ಸ್ಥಾನಗಳನ್ನ ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿದೆ.
ಸಮೀಕ್ಷೆ-2
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯು ಮಹಾಯುತಿ 131 ರಿಂದ 151 ಸ್ಥಾನಗಳನ್ನ ನೀಡಿದ್ದು, ಯುಬಿಟಿಗೆ 58 ರಿಂದ 68 ಸ್ಥಾನಗಳು, ಕಾಂಗ್ರೆಸ್‌ಗೆ 12 ರಿಂದ 16 ಸ್ಥಾನಗಳು ಬರಲಿವೆ.
ಸಮೀಕ್ಷೆ-3
ಸಕಲ್ ನಿರ್ಗಮನ ಸಮೀಕ್ಷೆಯು ಮಹಾಯುತಿಗೆ 119 ಸ್ಥಾನಗಳು, ಯುಬಿಟಿ 75 ಸ್ಥಾನಗಳು, ಕಾಂಗ್ರೆಸ್ 20 ಸ್ಥಾನಗಳನ್ನ ಪಡೆಯಲಿದೆ ಎಂದು ಹೇಳಿದೆ.
ಶಾಂತಿಯುತ ಮತದಾನದ ವೇಳೆ ʻಶಾಯಿʼ ಗದ್ದಲ
ಶಾಂತಿಯುತ ಮತದಾನದ ಮಧ್ಯೆ ಬೆರಳಿಗೆ ಹಾಕಲಾಗುವ ಶಾಯಿ ಕುರಿತು ಭಾರೀ ಗದ್ದಲ.. ವಿವಾದ ಭುಗಿಲೆದ್ದಿದೆ. ತಕ್ಷಣ ಅಳಿಸಬಹುದಾದ ಶಾಯಿ ಹಾಕುವ ಮೂಲಕ ಪುನರಾವರ್ತಿತ ಮತದಾನಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಆದರೆ, ಈ ಆರೋಪವನ್ನ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರ ನಿರಾಕರಿಸಿವೆ. ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಪ್ರತಿಕ್ರಿಯಿಸಿ.. ಚುನಾವಣೆಗಳಲ್ಲಿ ಬಳಸಲಾಗುವ ಸಾಂಪ್ರದಾಯಿಕ ಶಾಯಿ ಬದಲಿಗೆ ಹೊಸ ಮಾರ್ಕರ್ ಪೆನ್ ಬಳಸಲಾಗುತ್ತಿದೆ. ಇದರಿಂದ ಹಚ್ಚಲಾಗುವ ಶಾಯಿಯನ್ನು ಸ್ಯಾನಿಟೈಸರ್‌ನಿಂದ ಸುಲಭವಾಗಿ ತೆಗೆದುಹಾಕಲಾಗುತ್ತಿದೆ. ರಾಜ್ಯ ಮಹಾಯುತಿ ಸರ್ಕಾರವು ಅಧಿಕಾರಕ್ಕಾಗಿ ವಂಚನೆಯನ್ನು ಅವಲಂಬಿಸಿದೆ ಎಂದು ಆರೋಪಿಸಿದ್ದಾರೆ.



