ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಸಚಿವ ನಾಗೇಂದ್ರ (B Nagendra) ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಹೋರಾಟ ಮುಂದುವರೆಸಿದ್ದರಿಂದ ವಿಧಾನಮಂಡಲದ ಕಲಾಪವನ್ನು (Legislative Proceedings) ಮೂರು ದಿನಗಳ ಮೊದಲೇ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದೆ.
ಒಂದು ವಾರದಿಂದ ಸದನದ ಒಳಗೆ-ಹೊರಗೆ ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ ಇಂದಿನಿಂದ ಅಹೋರಾತ್ರಿ ಧರಣಿಗೆ ಮುಂದಾಗಿತ್ತು. ಆದರೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಇದಕ್ಕೂ ಮುನ್ನ ನಾಗೇಂದ್ರ ವಿರುದ್ಧ ಬಿಜೆಪಿ ಹೋರಾಟ ತೀವ್ರಗೊಳಿಸಿತ್ತು. ಒಂದು ತಂಡ ಅಶೋಕ್-ವಿಜಯೇಂದ್ರ ನೇತೃತ್ವದಲ್ಲಿ ವಿಕಾಸಸೌಧದ ಪ್ರವೇಶ ದ್ವಾರದ ಬಳಿ ನಾಗೇಂದ್ರ ವಿರುದ್ಧ ಪ್ಲೇಕಾರ್ಡ್ ಪ್ರದರ್ಶಿಸಿ ವಿಧಾನಸೌಧಕ್ಕೆ ನುಗ್ಗಲು ಮುಂದಾಯಿತು. ಇದಕ್ಕೆ ಅವಕಾಶ ಕೊಡದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಇದನ್ನೂ ಓದಿ: ಐಫೋನ್ EMI ವಿಚಾರಕ್ಕೆ ಕುಟುಂಬ ದುರಂತ ಅಂತ್ಯ?: ಮೃತ ಮಹಿಳೆಯ ಸಹೋದರಿ ಹೇಳಿದ್ದೇನು?
ಇನ್ನೊಂದು ಕಡೆ, ಛಲವಾದಿ ನಾರಾಯಣಸ್ವಾಮಿ, ಅಶ್ವಥ್ ನಾರಾಯಣ್, ಶ್ರೀರಾಮುಲು ನೇತೃತ್ವದಲ್ಲಿ ಫ್ರೀಡಂಪಾರ್ಕ್ ಬಳಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರನ್ನು ಕದಲದಂತೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಈ ಮಧ್ಯೆ ನಾಗೇಂದ್ರ ವಿರುದ್ಧ ಸಿಬಿಐ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದು, ಕ್ಯಾಬಿನೆಟ್ ಸಲಹೆಯನ್ನು ರಾಜ್ಯಪಾಲರು ಕೇಳಿದ್ದಾರೆ. ಮತ್ತೊಂದೆಡೆ, ಕಳಂಕಿತ ಸಚಿವ ನಾಗೇಂದ್ರ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು ನೀಡಿದೆ. ಇದನ್ನೂ ಓದಿ: ಹಾಸನದ ಮಲೆನಾಡು ಭಾಗದಲ್ಲಿ ಮಳೆಯಾರ್ಭಟ; ಬಿಸಿಲೆ-ಸುಬ್ರಹ್ಮಣ್ಯ ಮಾರ್ಗ ಸಂಚಾರ ಬಂದ್
