ನವದೆಹಲಿ: ನಮ್ಮ ಮೆಟ್ರೋದಲ್ಲಿ (Namma Metro) ಕಡಿಮೆ ಅಂತರದ ಸ್ಥಳಗಳಿಗೆ ಪ್ರಯಾಣಿಸುವವರಿಗೆ 100% ರಷ್ಟು ಪ್ರಯಾಣ ದರ ಏರಿಕೆಯಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ.
ಸಂಸತ್‌ನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ತೇಜಸ್ವಿ ಸೂರ್ಯ ಮೆಟ್ರೋ ದರಲ್ಲಿ ಭಾರಿ ಏರಿಕೆಯಾಗಿರುವುದರಿಂದ ಮಧ್ಯಮ ವರ್ಗಕ್ಕೆ ಉಂಟಾಗುತ್ತಿರುವ ಅನಾನುಕೂಲದ ಬಗ್ಗೆ ಸರ್ಕಾರದ ಗಮನ ಸೆಳೆದರು. ನಮ್ಮ ಮೆಟ್ರೋನಲ್ಲಿ ಕಡಿಮೆ ಅಂತರದ ಸ್ಥಳಗಳಿಗೆ ಪ್ರಯಾಣಿಸುವವರಿಗೂ 100% ಪ್ರಯಾಣ ದರ ಏರಿಕೆಯಾಗಿದೆ. ಇದರಿಂದಾಗಿ ಮೆಟ್ರೋ ಪ್ರಯಾಣ ದುಬಾರಿಯಾಗಿದೆ. ನಗರಕ್ಕೆ ಸುಸ್ಥಿರ ಸಾರ್ವಜನಿಕ ಸಾರಿಗೆ ಪರಿಹಾರವಾಗಿರುವ ಮೂಲ ಉದ್ದೇಶಕ್ಕೇ ಧಕ್ಕೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ದರ ರಚನೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವಿಷಯವಾಗಿ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನೂ ತೇಜಸ್ವಿ ಸೂರ್ಯ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ನಮ್ಮ ಮೆಟ್ರೋ ಪ್ರಯಾಣ ದರದ ಏರಿಕೆಗೆ ರಾಜ್ಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಫೆ.10 ರಂದು ಬಿಎಂ ಆರ್ ಸಿಎಲ್ ಕೇಂದ್ರ ಕಚೇರಿಗೆ ತೆರಳಿದ್ದ ಬಿಜೆಪಿ ನಿಯೋಗ, ಏರಿಕೆಯಾಗಿರುವ ದರವನ್ನು ಜನ ಸಾಮಾನ್ಯರಿಗೆ ಹೊರೆಯಾಗದಂತೆ ಇಳಿಸುವಂತೆ ಮನವಿ ಮಾಡಿತ್ತು. ದರ ಏರಿಕೆ ಕಡಿಮೆ ಮಾಡಿದಿದ್ದರೆ ಹೋರಾಟ ಮಾಡುವುದಾಗಿ ಹೇಳಿದ್ದೇವೆ. ಜನಕ್ಕೆ ಹೆಚ್ಚು ಹೊರೆಯಾಗದಂತೆ ಏರಿಸಲಿ ಎಂದು ಜಯನಗರ ಶಾಸಕ ಸಿ.ಕೆ ರಾಮಮೂರ್ತಿ ಹೇಳಿದ್ದರು.