– ಪಕ್ಷ ನನ್ನ ಕೈ ಬಿಡಲ್ಲ ಎಂಬ ನಂಬಿಕೆ ಇದೆ: ಲೋಕಸಭಾ ಟಿಕೆಟ್ ಬಗ್ಗೆ ಸಂಸದ ಪ್ರತಿಕ್ರಿಯೆ
– ರಾಜಕೀಯದಲ್ಲಿ ದ್ವೇಷ-ಅಸೂಯೆ ಇದ್ದೆ ಇರುತ್ತೆ
ಮೈಸೂರು: ನಾನು ಮೈಸೂರು-ಕೊಡಗು ಕ್ಷೇತ್ರ ಗೆದ್ದರೆ ಸಿದ್ದರಾಮಯ್ಯ ಸೀಟು ಅಲುಗಾಡುತ್ತೆ. ಹೀಗಿರುವಾಗ ಕಾಂಗ್ರೆಸ್‌ಗೆ ನಮ್ಮ ಪಕ್ಷ ಹೇಗೆ ಸಪೋರ್ಟ್ ಮಾಡುತ್ತೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದರು.
ಪತ್ರಕರ್ತನಾಗಿದ್ದವನನ್ನು ಎರಡು ಬಾರಿ ಎಂಪಿ ಮಾಡಿದ್ದು ಬಿಜೆಪಿ. ಕಾಂಗ್ರೆಸ್ (Congress) ಅವರಿಗೆ ಅಭ್ಯರ್ಥಿ ಹುಡುಕಲು ಆಗ್ತಾ ಇಲ್ಲ. ಇದರಿಂದ ಪ್ರತಾಪ್ ಸಿಂಹ ಶಕ್ತಿ ಏನು ಅಂತಾ ಕಾಂಗ್ರೆಸ್ ಅವರಿಗೆ ಗೊತ್ತಿದೆ. ನಾನು ಗೆದ್ದರೆ ಸಿದ್ದರಾಮಯ್ಯ (Siddaramaiah) ಅವರ ಸೀಟು ಅಲುಗಾಡುತ್ತೆ. ಪ್ರತಾಪ್ ಸಿಂಹ ಸೋಲಿಸಲು ಆಗಲ್ಲ ಎಂದು ಕಾಂಗ್ರೆಸ್‌ಗೆ ಗೊತ್ತಿದೆ. ಹೀಗಿರುವಾಗ ಕಾಂಗ್ರೆಸ್‌ಗೆ ನಮ್ಮ ಪಕ್ಷ ಹೇಗೆ ಸಪೋರ್ಟ್ ಮಾಡುತ್ತೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪ್ರತಾಪ್ ಸಿಂಹಗೆ ಟಿಕೆಟ್ ಸಿಗೋದು ಅನುಮಾನ – ಮೈಸೂರಿನಿಂದ ಯದುವೀರ್ ಸ್ಪರ್ಧೆ?
ಲೋಕಸಭಾ ಟಿಕೆಟ್ (Lok Sabha Elections 2024) ಗೊಂದಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಂಸದರ ಟಿಕೆಟ್ ನಿರ್ಧಾರ ಮಾಡೋದು ಜನ. ರಾಜ್ಯದಲ್ಲಿ 28 ಮಂದಿ ಸಂಸದರು ಇದ್ದಾರೆ. ಕೆಲಸ ನೋಡಿ ಟಿಕೆಟ್ ನೀಡುತ್ತಾರೆ. ಜನ ಖುಷಿಯಾಗಿದ್ದಾರೆ ಅಂದ್ರೆ ಮೇಲಿನವರು ಅದೇ ನಿರ್ಧಾರ ಮಾಡ್ತಾರೆ. ಮೈಸೂರಿನಲ್ಲಿ ನಾನು ಇಂತಾ ಕೆಲಸ ಮಾಡಿಲ್ಲ ಎಂದು ಹೇಳಲಿ. ಯಾರೋ ಒಂದಷ್ಟು ಜನ ಅಸೂಯೆಗೆ ಮಾತನಾಡುತ್ತಾರೆ. ಕಾಯಲು ಬೆಟ್ಟದ ಮೇಲೆ ಒಬ್ಬಳು ತಾಯಿ (ಚಾಮುಂಡೇಶ್ವರಿ) ಇದ್ದಾಳೆ ಎಂದು ತಿಳಿಸಿದರು.
ಮೈಸೂರಿನಲ್ಲಿ (Mysuru) ಯಾರೂ ಮಾಡಿರದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಗ್ರೇಟರ್ ಮೈಸೂರು ಮಾಡಲು ನಾನು ಹೊರಟಿದ್ದೇನೆ. ಹಲವು ಅಭಿವೃದ್ಧಿ ಯೋಜನೆಗಳನ್ನು ನಾನು ಮಾಡಿದ್ದೇನೆ. ಹಿಂದುತ್ವದ ಪರ ನಾನು ಕೆಲಸ ಮಾಡಿದ್ದೇನೆ. ಕರ್ನಾಟಕ ಆಳಿದವರಿಂದಲೂ ಔಟರ್ ರಿಂಗ್‌ರೋಡ್ ತರಲು ಆಗಿಲ್ಲ. ನಾನು ರಾಜ್ಯದಲ್ಲಿ ಮೊದಲಾಗಿ ಮೈಸೂರಿಗೆ ಮೊದಲ ಪೆರಿಪೆರಲ್ ರಿಂಗ್ ರೋಡ್ ತರಲು ಹೊರಟಿದ್ದೇನೆ. ಕೆಲಸವೇ ನನಗೆ ಶ್ರೀರಕ್ಷೆ. ಮೈಸೂರು ಕೊಡಗು ಜನರು ನನ್ನ ಕೈ ಹಿಡಿಯುತ್ತಾರೆ. ತಾಯಿ ಚಾಮುಂಡಿ ನನ್ನ ಕೈ ಬಿಡಲ್ಲ. ಈ ಬಾರಿಯೂ ನಾನು 2 ರಿಂದ 3 ಲಕ್ಷ ಮತಗಳಿಂದ ಗೆಲ್ಲುತ್ತೇನೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಟಿಕೆಟ್ ಘೋಷಣೆ ಆದಾಗ ಕ್ಷೇತ್ರದಲ್ಲಿ ಅಸಮಾಧಾನ ಸಹಜ: ಪರಮೇಶ್ವರ್
ಎಲ್ಲರಿಗೂ ಟಿಕೆಟ್ ಕೇಳುವ ಹಕ್ಕಿದೆ. 10 ವರ್ಷ ನಿಯತ್ತಾಗಿ ಕೆಲಸ ಮಾಡಿದ್ದೇನೆ. ಪ್ರೀತಿಸುವವರು ಅಷ್ಟೇ ಪ್ರಮಾಣದಲ್ಲಿ ಇದ್ದಾರೆ. ರಾಜಕೀಯದಲ್ಲಿ ದ್ವೇಷ-ಅಸೂಯೆ ಇದ್ದೆ ಇರುತ್ತೆ. ಚಾಲೆಂಜಿಂಗ್ ಮಾಡಿ ಹೇಳ್ತೀನಿ ನನ್ನ ರೀತಿ ಕೆಲಸ ಯಾರೂ ಮಾಡಿಲ್ಲ. ಮೈಸೂರು-ಕೊಡಗು ಜನರ ಪ್ರೀತಿಯ ನಡುವೆ ಅಸೂಯೆ ಯಾವುದು ನಿಲ್ಲಲ್ಲ. ಪಾರ್ಟಿಯ ಕಾರ್ಯಕರ್ತರು ಯಾರು ಅಭ್ಯರ್ಥಿ ಆಗಬೇಕೆಂದು ಹೇಳಿದ್ದಾರೆ. ಅದರ ಶೀಟ್ ನೋಡಿದ್ರೆ ಗೊತ್ತಾಗುತ್ತೆ ಎಂದರು.
ಹಿಂದೂ ಕಾರ್ಯಕರ್ತರಿಗೆ ಅನ್ಯಾಯವಾದಾಗ ಜೊತೆಗೆ ನಿಂತಿದ್ದು ನಾನು. ಬಿಜೆಪಿ ಕಾರ್ಯಕರ್ತರು ಖುಷಿ ಪಡುವ ಎಂಪಿ ಇದ್ರೆ ಅದು ನಾನೇ. ಈ ವಿಚಾರವಾಗಿ ಪ್ರತಾಪ್ ಸಿಂಹ ಎರಡು ಕೇಸ್ ಹಾಕಿಸಿಕೊಂಡಿದ್ದಾನೆ. ಪ್ರತಾಪ್ ಸಿಂಹ ರೂಲರ್ ಅಲ್ಲ, ಕೆಲಸಗಾರ. ಈ ಭಾಗದಲ್ಲಿ ಹನುಮ ಜಯಂತಿ ಆಗುತ್ತಿದೆ ಅಂದ್ರೆ ಅದಕ್ಕೆ ಪ್ರತಾಪ್ ಸಿಂಹ ಕಾರಣ. ಜನರು ನನ್ನ ಕೈ ಹಿಡಿಯಲು ರೆಡಿ ಇದ್ದಾರೆ. ಪಕ್ಷ ನನ್ನ ಕೈ ಬಿಡಲ್ಲ ಎಂಬ ನಂಬಿಕೆ ಇದೆ. ಜನರಿಗೆ ರೂಲರ್ ಬೇಡಾ, ಬೇಕಿರೋದು ಕೆಲಸಗಾರ ಎಂದು ಮಾತನಾಡಿದರು. ಇದನ್ನೂ ಓದಿ: ಬೆಂಗಳೂರಿನ ಮಾನ-ಮರ್ಯಾದೆ ಹರಾಜು ಹಾಕಿದ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್ ಟೀಕೆ