ಹಾವೇರಿ: ಸಚಿವ ಸಂಪುಟದಲ್ಲಿ ಖಾಲಿ ಇರುವ ಖಾತೆಗಳನ್ನು ಉಳಿಸಿಕೊಂಡು ಕಾಲಹರಣ ಮಾಡುವುದರಲ್ಲಿ ಅರ್ಥವಿಲ್ಲ. ಬೇರೆಯವರಿಗೂ ಸಚಿವ ಸ್ಥಾನವನ್ನು ನೀಡಿ ಎಂದು ವಿಧಾನಪರಿಷತ್ ಸದಸ್ಯ(MLC) ಆರ್.ಶಂಕರ್(R Shankar) ತಿಳಿಸಿದರು.
ಹಾವೇರಿ(Haveri) ಜಿಲ್ಲೆ ರಾಣೆಬೆನ್ನೂರಿನಲ್ಲಿ ಮಾತನಾಡಿದ ಅವರು, ಇನ್ನೂ ಐದಾರು ಖಾತೆಗಳು ಖಾಲಿ ಇವೆ. ಖಾತೆಗಳನ್ನು ಖಾಲಿ ಉಳಿಸಿಕೊಂಡು ಕಾಲಹರಣ ಮಾಡುವುದರಲ್ಲಿ ಅರ್ಥವಿಲ್ಲ. ಎಲ್ಲರಿಗೂ ಜನಸೇವೆ ಮಾಡಬೇಕು ಎನ್ನುವ ಅಭಿಲಾಷೆ ಇರುತ್ತದೆ. ನಾನು ಪಕ್ಷೇತರನಾಗಿ ಗೆದ್ದಿದ್ದೆ. ನನ್ನ ಕ್ಷೇತ್ರವನ್ನು ಬೆಂಗಳೂರು ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಹೇಳಿದ್ದೆ. ನಾನು ಶಾಸಕನಾಗಿ ಕೆಲವೇ ದಿನಗಳು ಇದ್ದಿದ್ದು. ಆದರೆ ಅನೇಕ ಕಾಮಗಾರಿಗಳಿಂದ ರಸ್ತೆಗಳು, ಕೆರೆ ಅಭಿವೃದ್ಧಿ ಆಗಿದೆ ಎಂದರು.
ನಾನೇನು ಹಣಕ್ಕಾಗಿ ಹೋದವನಲ್ಲ. ಕೆಲವೇ ತಿಂಗಳು ಮಂತ್ರಿ ಆಗುವ ಅವಕಾಶ ಸಿಕ್ಕಿತ್ತು. ಜನಕ್ಕಾಗಿ, ಕಾರ್ಯಕರ್ತರಿಗಾಗಿ ನಾನು ರಾಜಕಾರಣ ಮಾಡಬೇಕಿದೆ. ನಮ್ಮ ಕಾರ್ಯಕರ್ತರಿಗೆ ಒಂದೇ ಒಂದು ಹುದ್ದೆ ಸಿಗಲಿಲ್ಲ. ಸರ್ಕಾರದ ಮೇಲೆ ನನಗೆ ವಿಶ್ವಾಸವಿದೆ. ಆದಷ್ಟು ಬೇಗ ಸೂಕ್ತ ಸ್ಥಾನಮಾನ ಸಿಗುತ್ತದೆ. ಎಲ್ಲರೂ ಮಂತ್ರಿ ಆಗಲು ಹೋಗಿದ್ದರು. ನಾನು ಮಂತ್ರಿ ಇದ್ದಿದ್ದು ಬಿಟ್ಟು ಹೋಗಿದ್ದೆ. ಆದಷ್ಟು ಬೇಗ ಸೂಕ್ತ ಸ್ಥಾನಮಾನ ಸಿಗುತ್ತದೆ. ನನಗೆ ಪಕ್ಷದ ಮೇಲೆ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಮ್ಸ್ ಸರಣಿ ಸಾವು ಪ್ರಕರಣ – ಸತ್ತವರು ನಾಲ್ವರಲ್ಲ, ಇಬ್ಬರು ಮಾತ್ರ: ಸುಧಾಕರ್
ಈಗ ಟಿಕೆಟ್ ಬಗ್ಗೆ ಮಾತನಾಡುವುದಿಲ್ಲ. ಯಾರು ತ್ಯಾಗ ಮಾಡಿದ್ದಾರೆ, ಏನು ಎಲ್ಲವನ್ನೂ ನೋಡಿ ಹೈಕಮಾಂಡ್‍ನವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಈಗ ಟಿಕೆಟ್ ವಿಚಾರ ಬೇಡ. ಮುಂದೆ ಏನಾಗಬೇಕು ನೋಡಿ ಪಕ್ಷದವರು ನಿಲುವು ತೆಗೆದುಕೊಳ್ಳುತ್ತಾರೆ. ನನ್ನ ಮೇಲೆ ಜನರ ವಿಶ್ವಾಸವಿತ್ತು, ನನಗೂ ಜನರ ಮೇಲೆ ವಿಶ್ವಾಸವಿದೆ ಎಂದರು. ಇದನ್ನೂ ಓದಿ: ಭಾರತದ ವೀಸಾ ನಿಯಮ ಉಲ್ಲಂಘನೆ – 17 ಬಾಂಗ್ಲಾ ಪ್ರಜೆಗಳು ಅರೆಸ್ಟ್