BellaryDistrictsKarnatakaLatestLeading NewsMain Post

ವಿಮ್ಸ್ ಸರಣಿ ಸಾವು ಪ್ರಕರಣ – ಸತ್ತವರು ನಾಲ್ವರಲ್ಲ, ಇಬ್ಬರು ಮಾತ್ರ: ಸುಧಾಕರ್

ಬಳ್ಳಾರಿ: ವಿಮ್ಸ್ (VIMS) ದುರಂತ ನಡೆದ ಬಳಿಕ ಇಂದು ಆಸ್ಪತ್ರೆಗೆ (Hospital) ಭೇಟಿ ನೀಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ (Dr K.Sudhakar)  ವಿಮ್ಸ್‌ನಲ್ಲಿ ಸತ್ತವರು ನಾಲ್ವರಲ್ಲ, ಇಬ್ಬರು ಮಾತ್ರ ಎಂದು ಹೇಳಿಕೆ ನೀಡಿದ್ದಾರೆ.

ವಿಮ್ಸ್‌ಗೆ ಭೇಟಿ ನೀಡಿ ಮಾಹಿತಿ ಪಡೆದ ಬಳಿಕ ಮಾಧ್ಯಮಗೋಷ್ಠಿ ನಡೆಸಿದ ಸಚಿವರು, ಕಳೆದೆರಡು ವರ್ಷಗಳಲ್ಲಿ ನಾವು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ನೇಮಕಾತಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಿದ್ದೇವೆ. ನಮ್ಮ ಸರ್ಕಾರ ಅತೀ ಹೆಚ್ಚು ಬದ್ಧತೆಯಿಂದ ಕೆಲಸ ಮಾಡಿದೆ. ವಿಮ್ಸ್‌ನಲ್ಲಿ ಸಾವು ಸಂಭವಿಸಿದ ಮಾಹಿತಿ ಬಂದಾಗ ನನ್ನ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ನಾನು ಸದನಕ್ಕೆ ಮಾಹಿತಿ ಕೊಡಲು ಆಗಿಲ್ಲ. ನನ್ನ ಪರವಾಗಿ ಶ್ರೀರಾಮುಲು ಮಾಹಿತಿ ನೀಡಿದ್ದಾರೆ. ರಾಜ್ಯದ ಜನತೆಗೆ ಸತ್ಯ ತಿಳಿಯಬೇಕು. ಹೀಗಾಗಿ ತನಿಖಾ ಸಮಿತಿ ರಚನೆ ಮಾಡಿ ತನಿಖೆ ನಡೆಸಲಾಗುತ್ತಿದೆ ಎಂದರು. ಇದನ್ನೂ ಓದಿ: ವಿಮ್ಸ್ ದುರಂತ: ಇಂದು ಸಚಿವ ಸುಧಾಕರ್ ಭೇಟಿ – ಕರೆಂಟ್ ಸಮಸ್ಯೆಯಿಂದ ಸಾವಾಗಿಲ್ಲ ಎಂದ ಶ್ರೀರಾಮುಲು

ಇಲ್ಲಿ ನಡೆದ ಸಂಪೂರ್ಣ ಮಾಹಿತಿಯನ್ನು ತನಿಖಾ ಸಮಿತಿ ಎಲ್ಲ ವಿಭಾಗಗಳಿಂದಲೂ ಮಾಹಿತಿ ಪಡೆದುಕೊಂಡಿದೆ. ರಾಜ್ಯದಲ್ಲಿ ವಿಮ್ಸ್ ಒಂದು ಅತ್ಯುತ್ತಮ ಸಂಸ್ಥೆ. ಇಲ್ಲಿ ಸತ್ತವರ ಸಂಖ್ಯೆ ಎರಡು ಮಾತ್ರ. ಬೆಳಗ್ಗೆ 8:30ಕ್ಕೆ ಕರೆಂಟ್ ಕಟ್ ಆಗಿದೆ. ಒಂದು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಪ್ರತಿ ವಿಭಾಗದ ಮುಖ್ಯಸ್ಥರ ಜೊತೆಯಲ್ಲಿ ನಾನು ಸಭೆ ನಡೆಸಿದ್ದೇನೆ. ಒಬ್ಬ ವ್ಯಕ್ತಿಗೆ ಹಲವಾರು ವರ್ಷಗಳಿಂದ ಕಿಡ್ನಿ ವೈಫಲ್ಯ ಇತ್ತು. ಅವರಿಗೆ ಬಿಪಿ ಹೆಚ್ಚಾಗಿತ್ತು. ಬ್ರೇನ್‍ನಲ್ಲಿ ಬ್ಲೀಡಿಂಗ್ ಕೂಡಾ ಆಗಿತ್ತು. ಈ ಸಮಸ್ಯೆಯನ್ನು ರೋಗಿಯ ಸಂಬಂಧಿಕರಿಗೆ ತಿಳಿಸಿದ್ದಾರೆ. ಬಳಿಕ ಅವರು 9:30ಕ್ಕೆ ಮೃತಪಟ್ಟಿದ್ದಾರೆ. ಇವರಿಗೆ ಎಲ್ಲ ರೀತಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇನ್ನೊಬ್ಬ ರೋಗಿಗೂ ಆರೋಗ್ಯ ಸಮಸ್ಯೆ ಇತ್ತು. ಈ ಸಾವು ಹೀಗೆ ಸಂಭವಿಸಿದೆ ಅಂತ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಕಾರಣ ನೀಡಿ ಆಸ್ಪತ್ರೆಯ ಆಡಳಿತ ವರ್ಗ ನನಗೆ ರಿಪೋರ್ಟ್ ನೀಡಿದೆ. ಈ ಮಾಹಿತಿಯನ್ನು ತನಿಖಾ ತಂಡಕ್ಕೆ ಸಹ ನೀಡಲಾಗಿದೆ. ಹೆಚ್ಚಿನ ಮಾಹಿತಿ ನೀಡಿದ್ರೆ, ತನಿಖಾ ಸಂಸ್ಥೆಯ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ನಾನು ಯಾವುದೇ ಮಾಹಿತಿ ನೀಡಲ್ಲ ತನಿಖಾ ಸಂಸ್ಥೆ ನೀಡುವ ವರದಿಯನ್ನು ನಾನು ಸದನಕ್ಕೆ ಒಪ್ಪಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಸಾಧ್ಯವಿಲ್ಲ: ಕೇರಳಕ್ಕೆ ಕರ್ನಾಟಕ ಸರ್ಕಾರ ಸ್ಪಷ್ಟನೆ

ಈ ಪ್ರಕರಣದ ಹಿಂದೆ ಯಾವುದೇ ಕಾಣದ ಕೈಗಳಿದ್ದರು ಕ್ರಮ ತೆಗೆದುಕೊಳ್ಳುತ್ತೇವೆ. ತನಿಖೆಯ ನಂತರ ಸತ್ಯ ತಿಳಿಯಲಿದೆ ಎಂದರು. ಹಾಗಾದ್ರೆ ಕರೆಂಟ್ ಸಮಸ್ಯೆಯಿಂದ ಸಾವಾಗಿಲ್ಲ ಎನ್ನೋದಾದರೆ ಆಸ್ಪತ್ರೆಯಿಂದ ಉಳಿದ ರೋಗಿಗಳನ್ನು ಶಿಫ್ಟ್ ಮಾಡಿದ್ದೇಕೆ? ಆಸ್ಪತ್ರೆಗೆ ಹೊಸ ಜನರೇಟರ್‌ಗಳನ್ನು ತರಿಸಿದ್ದು ಏಕೆ? ರಾತ್ರೋರಾತ್ರಿ ಕರೆಂಟ್ ವೈರ್ ಬದಲಾಯಿಸಿದ್ದೇಕೆ? ನಾಲ್ವರು ಸಿಬ್ಬಂದಿಗೆ ನೋಟಿಸ್ ನೀಡಿದ್ದು ಯಾಕೆ? ಮೃತರ ಕುಟುಂಬಕ್ಕೆ ಪರಿಹಾರ ನೀಡಿದ್ದು ಏಕೆ ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

Live Tv

Leave a Reply

Your email address will not be published.

Back to top button