ರಾಯಚೂರು: ರಾಯಚೂರು ಗ್ರಾಮಾಂತರ ಬಿಜೆಪಿ ಶಾಸಕ ತಿಪ್ಪರಾಜು ಹವಾಲ್ದಾರ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ.
ಶಾಸಕ ತಿಪ್ಪರಾಜು 2013 ರಿಂದಲೂ ಪಿಎಸ್‍ಐ ಬೇಬಿ ವಾಲಿಕಾರ್ ಜೊತೆ ಒಡನಾಟ ಹೊಂದಿದ್ದು, ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಸಂಬಂಧ ಸ್ವತಃ ತಿಪ್ಪರಾಜು ಪತ್ನಿ ಸೌಮ್ಯ ನ್ಯಾಯ ಕೋರಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ದೂರು ಆಧರಿಸಿದ ಮಹಿಳಾ ಆಯೋಗ ಕೂಡ ಪೊಲೀಸ್ ತನಿಖೆಗೆ ಆದೇಶ ನೀಡಿದೆ.
Advertisement
Advertisement
ಈ ಬಗ್ಗೆ ಪಬ್ಲಿಕ್ ಟಿವಿಗೆ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ, ನನಗೆ ದೂರು ಕೊಟ್ಟು ಒಂದು ತಿಂಗಳಾಗಿದೆ. ದೂರಿನಲ್ಲಿ ಶಾಸಕರ ಪತ್ನಿಯ ವಿಳಾಸ ಇರಲಿಲ್ಲ. ಹೀಗಾಗಿ ಅವರ ವಿಳಾಸ ಪಡೆದ ನಂತರ ತನಿಖೆಗೆ ಆದೇಶಿಸಿದ್ದೇನೆ. ಅಲ್ಲದೆ ನಿರಂತರವಾಗಿ ಶಾಸಕರ ಪತ್ನಿಗೆ ಕರೆ ಮಾಡಿದ್ರೂ ಅವರು ಸ್ವೀಕರಿಸುತ್ತಿಲ್ಲ ಅಂದ್ರು. ಈ ಪ್ರಕರಣವನ್ನು ಗಂಭೀರವಾಗಿ ಪರಿಣಿಗಣಿಸಿದ್ದು ತನಿಖೆ ನಡೆಸ್ತೇವೆ ಅಂದ್ರು.
Advertisement
Advertisement
ಇದೇ ವೇಳೆ ಪಬ್ಲಿಕ್ ಟಿವಿ ದೂರವಾಣಿ ಸಂಪರ್ಕಕ್ಕೆ ಸಿಕ್ಕ ಶಾಸಕ ತಿಪ್ಪರಾಜು ಹವಾಲ್ದಾರ್, ಇದೆಲ್ಲಾ ಸುಳ್ಳು. ಈ ಆರೋಪದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ನನ್ನ ಪತ್ನಿಯ ಜೊತೆಗೆ ಇದ್ದೇನೆ. ನನ್ನ ಹೆಂಡತಿ ಯಾವ ಆಯೋಗಕ್ಕೂ ದೂರು ನೀಡಿಲ್ಲ. ನನ್ನ ತೇಜೋವಧೆ ಬಗ್ಗೆ ನನ್ನ ಪತ್ನಿ ಜೊತೆ ದೂರು ನೀಡ್ತೇನೆ ಅಂದ್ರು.
ತಿಪ್ಪರಾಜು ಅವರ ಹೆಂಡತಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲಾ ಶುದ್ಧ ಸುಳ್ಳು. ನಾನು ನನ್ನ ಗಂಡನ ಜೊತೆಯೇ ಇದ್ದೇನೆ. ನನ್ನ ಹೆಸರಿನಲ್ಲಿ ಸುಳ್ಳು ದೂರು ನೀಡಿದ್ದಾರೆ. ನಾನು ಎಲ್ಲಿಯೂ ದೂರು ನೀಡಿಲ್ಲ. ನಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ನಡೀತಿದೆ. ನನ್ನ ಗಂಡನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸುಳ್ಳು ದೂರು ನೀಡಿದವರ ವಿರುದ್ಧ ನನ್ನ ಗಂಡನ ಜೊತೆ ಹೋರಾಡುತ್ತೇನೆ. ವಾಲಿಕಾರ್‍ಗೂ ನನ್ನ ಪತಿಗೂ ಯಾವುದೇ ಸಂಬಂಧವಿಲ್ಲ. ಕುತಂತ್ರಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದಿದ್ದಾರೆ.
ಪಿಎಸ್‍ಐ ವಾಲೇಕರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಹಿಳಾ ಆಯೋಗದ ವಿರುದ್ಧ ಕಿಡಿ ಕಾರಿದ್ದಾರೆ. ಇದೆಲ್ಲಾ ಸುಳ್ಳು. ನನ್ನ ತೇಜೋವಧೆ ಮಾಡಲಾಗ್ತಿದೆ. ಮಹಿಳಾ ಆಯೋಗದ ಅಧ್ಯೆಕ್ಷೆ ಒಬ್ಬ ಮಹಿಳೆಯಾಗಿ ಈ ರೀತಿ ಸುದ್ದಿ ಹಬ್ಬಿಸಿರೋದು ಖಂಡನೀಯ. ಈ ಬಗ್ಗೆ ನನಗೆ ನೋಟಿಸ್ ನೀಡಿ ಪ್ರತಿಕ್ರಿಯೆ ಪಡೆಯಬಹುದಾಗಿತ್ತು. ನನ್ನ ತೇಜೋವಧೆ ಮಾಡಿದವರ ವಿರುದ್ಧ ದೂರು ದಾಖಲಿಸುತ್ತೇನೆ ಎಂದಿದ್ದಾರೆ.