ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ(Washington D.C) ಪ್ರತಿವರ್ಷ ನಡೆಯುವ ಅತ್ಯಂತ ಪ್ರತಿಷ್ಠಿತ ಮತ್ತು ಅದ್ದೂರಿ ಔತಣಕೂಟ ಇದಾಗಿದ್ದು ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್ (WHCA) ಈ ಡಿನ್ನರ್ ಆಯೋಜಿಸುತ್ತದೆ.
ಇದು ಮೂಲತಃ ಪತ್ರಕರ್ತರು ಮತ್ತು ಸರ್ಕಾರದ ನಡುವಿನ ಬಾಂಧವ್ಯವನ್ನು ವೃದ್ಧಿಸಲು ಈ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್(White House Correspondents’ Dinner) ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಶ್ವೇತ ಭವನದ ಸುದ್ದಿಗಳನ್ನು ವರದಿ ಮಾಡುವ ಪತ್ರಕರ್ತರಿಗಾಗಿ ಇದನ್ನು ನಡೆಸಲಾಗುತ್ತದೆ. ಇದರಿಂದ ಬರುವ ಹಣವನ್ನು ಪತ್ರಕರ್ತರಿಗೆ ಸ್ಕಾಲರ್‌ಶಿಪ್ ನೀಡಲು ಬಳಸಲಾಗುತ್ತದೆ.
ಯಾರು ಭಾಗವಹಿಸುತ್ತಾರೆ?:
ಅಮೆರಿಕ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗಿಯಾಗುತ್ತಾರೆ. ವೈಟ್ ಹೌಸ್ ಸುದ್ದಿಗಳ ವರದಿ ಮಾಡುವ ಪ್ರಮುಖ ಸುದ್ದಿ ಸಂಸ್ಥೆಗಳ ಪತ್ರಕರ್ತರು, ಹಾಲಿವುಡ್ ನಟ-ನಟಿಯರು, ಗಾಯಕರು ಮತ್ತು ಮಾಡೆಲ್‌ಗಳು ಈ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಾಜರಿ ಹಾಕುತ್ತಾರೆ.
ಕಾರ್ಯಕ್ರಮ ಹೇಗಿರುತ್ತೆ?
ಈ ಡಿನ್ನರ್‌ನ ಮತ್ತೊಂದು ವಿಶೇಷವೆಂದರೆ ಹಾಸ್ಯ. ಅಧ್ಯಕ್ಷರು ತಮ್ಮನ್ನು ತಾವು ಮತ್ತು ತಮ್ಮ ವಿರೋಧಿಗಳನ್ನು ಹಾಸ್ಯ ಮಾಡುವ ಮೂಲಕ ಭಾಷಣ ಮಾಡುತ್ತಾರೆ. ಹಾಗೆಯೇ ಒಬ್ಬ ಪ್ರಸಿದ್ಧ ಹಾಸ್ಯ ಕಲಾವಿದ ಅಧ್ಯಕ್ಷರನ್ನು ಮತ್ತು ಪ್ರಚಲಿತ ವಿದ್ಯಮಾನಗಳನ್ನು ಲೇವಡಿ ಮಾಡುವ ಸಂಪ್ರದಾಯವಿದೆ. ಇದನ್ನು “ವಾಷಿಂಗ್ಟನ್‌ನ ಆಸ್ಕರ್ ಹಬ್ಬ” ಎಂದೂ ಕರೆಯಲಾಗುತ್ತದೆ. ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುತ್ತದೆ.

ಈ ಬಾರಿಯ ವಿಶೇಷ ಏನು?
ಡೊನಾಲ್ಡ್ ಟ್ರಂಪ್ (Donald Trump) ಅವರು ತಮ್ಮ ಮೊದಲ ಅವಧಿಯಲ್ಲಿ(2017-2020) ಮಾಧ್ಯಮಗಳ ಮೇಲಿನ ಅಸಮಾಧಾನದಿಂದ ಈ ಡಿನ್ನರ್ ಅನ್ನು ಬಹಿಷ್ಕರಿಸಿದ್ದರು. ಆದರೆ 2026 ರಲ್ಲಿ ಅಧ್ಯಕ್ಷರಾಗಿ ಅವರು ಈ ಕಾರ್ಯಕ್ರಮಕ್ಕೆ ಮೊದಲ ಬಾರಿಗೆ ಆಗಮಿಸಿದ್ದರು.
ಈ ಬಾರಿಯ ಡಿನ್ನರ್‌ನಲ್ಲಿ ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಅವರು ಟ್ರಂಪ್ ಅವರೊಂದಿಗೆ ಭಾಗವಹಿಸಿದ್ದು ವಿಶೇಷವಾಗಿತ್ತು. ಇದನ್ನೂ ಓದಿ:ದಾಳಿಗೂ ಮುನ್ನವೇ ಪ್ಲ್ಯಾನ್ – ಸಾಕಷ್ಟು ಭದ್ರತೆ ಇದ್ದರೂ ದಾಳಿಕೋರ ಟ್ರಂಪ್ ಡಿನ್ನರ್ ಪಾರ್ಟಿಗೆ ನುಗ್ಗಿದ್ದು ಹೇಗೆ?
1921 ರಲ್ಲಿ ಆರಂಭ
1914 ರಲ್ಲಿ ಸ್ಥಾಪನೆಯಾದ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್ 1921 ರಲ್ಲಿ ತನ್ನ ಮೊದಲ ಔತಣಕೂಟವನ್ನು ಅರಲಿಂಗ್ಟನ್ ಹೋಟೆಲ್‌ನಲ್ಲಿ ಆಯೋಜಿಸಿತ್ತು. ಅಂದು ಕೇವಲ 50 ಪುರುಷರು ಮಾತ್ರ ಈ ಕೂಟದಲ್ಲಿ ಭಾಗವಹಿಸಿದ್ದರು.
ಮೊದಲ ಔತಣಕೂಟಕ್ಕೆ ಅಂದಿನ ಅಧ್ಯಕ್ಷ ವಾರೆನ್ ಜಿ. ಹಾರ್ಡಿಂಗ್ ಅವರು ಹಾಜರಾಗಿರಲಿಲ್ಲ. ಆದರೆ 1924 ರಲ್ಲಿ ಕ್ಯಾಲ್ವಿನ್ ಕೂಲಿಡ್ಜ್ ಹಾಜರಾಗಿದ್ದರು. ಅಂದಿನಿಂದ ಅಧ್ಯಕ್ಷರು ಕನಿಷ್ಠ ಒಂದು ಬಾರಿಯಾದರೂ ಈ ಕೂಟದಲ್ಲಿ ಭಾಗವಹಿಸುವುದು ವಾಷಿಂಗ್ಟನ್‌ನ ಒಂದು ಸಂಪ್ರದಾಯವಾಗಿ ಬೆಳೆದುಬಂದಿದೆ. ಈ ಡಿನ್ನರ್‌ಗೆ 1950ರ ದಶಕದವರೆಗೆ ಕರಿಯರಿಗೆ ಪ್ರವೇಶವಿರಲಿಲ್ಲ ಮತ್ತು 1962ರ ನಂತರವಷ್ಟೇ ಮಹಿಳೆಯರಿಗೆ ಭಾಗವಹಿಸಲು ಅವಕಾಶ ನೀಡಲಾಗಿತ್ತು.

ಹಿಲ್ಟನ್ ಹೋಟೆಲಿಗೆ ಶಿಫ್ಟ್:
1921 ರಲ್ಲಿ ಆರಂಭವಾದ ಈ ಔತಣಕೂಟವು ಮೊದಲು ವಿವಿಧ ಹೋಟೆಲ್‌ಗಳಲ್ಲಿ ನಡೆಯುತ್ತಿತ್ತು. ಆದರೆ ಕಾರ್ಯಕ್ರಮದ ವ್ಯಾಪ್ತಿ ಮತ್ತು ಅತಿಥಿಗಳ ಸಂಖ್ಯೆ ಹೆಚ್ಚಾದಂತೆ 1968 ರಿಂದ ಇದನ್ನು ವಾಷಿಂಗ್ಟನ್ ಹಿಲ್ಟನ್‌ನ ಹೋಟೆಲಿನ ವಿಶಾಲವಾದ ‘ಇಂಟರ್ನ್ಯಾಷನಲ್ ಬಾಲ್‌ರೂಮ್’ನಲ್ಲಿ ಆಯೋಜಿಸಲಾಗುತ್ತಿದೆ. ಇದು ವಾಷಿಂಗ್ಟನ್ ಡಿ.ಸಿ.ಯಲ್ಲೇ ಅತಿ ದೊಡ್ಡ ಹೋಟೆಲ್ ಬಾಲ್‌ರೂಮ್‌ಗಳಲ್ಲಿ ಒಂದಾಗಿದ್ದು, ಸುಮಾರು 2,500 ರಿಂದ 3,000 ಜನರಿಗೆ ಆಸನದ ವ್ಯವಸ್ಥೆ ಮಾಡುವಷ್ಟು ದೊಡ್ಡದಾಗಿದೆ. ಇದನ್ನೂ ಓದಿ: ಕೊನೆಕ್ಷಣದಲ್ಲಿ ಶಾಂತಿ ಮಾತುಕತೆ ರದ್ದುಗೊಳಿಸಿದ ಟ್ರಂಪ್- ಪೆಚ್ಚಾದ ಪಾಕಿಸ್ತಾನ
ಈ ಹೋಟೆಲ್‌ನಲ್ಲಿ ಸತತವಾಗಿ ಅಧ್ಯಕ್ಷೀಯ ಕಾರ್ಯಕ್ರಮಗಳು ನಡೆಯುವುದರಿಂದ ಇದನ್ನು “ಹಿಂಕ್ಲಿ ಹಿಲ್ಟನ್” ಎಂದೂ ಕರೆಯಲಾಗುತ್ತದೆ. 1981 ರಲ್ಲಿ ಅಧ್ಯಕ್ಷ ರೋನಾಲ್ಡ್ ರೇಗನ್ ಮೇಲೆ ಇಲ್ಲಿಯೇ ದಾಳಿ ನಡೆದಿದ್ದರಿಂದ ಈ ಹೆಸರು ಬಂದಿದೆ.
ಈ ಬಾಲ್‌ರೂಮ್‌ನ ಅತಿ ದೊಡ್ಡ ವಿಶೇಷತೆ ಎಂದರೆ ಇಲ್ಲಿ ಯಾವುದೇ ಕಂಬಗಳಿಲ್ಲ. ಸುಮಾರು 36 ಸಾವಿರ ಚದರ ಅಡಿ ವಿಸ್ತೀರ್ಣದ ಈ ಹಾಲ್‌ನಲ್ಲಿ ಎಲ್ಲಿ ಕುಳಿತರೂ ವೇದಿಕೆಯು ನೇರವಾಗಿ ಕಾಣಿಸುತ್ತದೆ. ಹೋಟೆಲ್‌ನ ಮುಖ್ಯ ಕಟ್ಟಡದ ಕೆಳಭಾಗದಲ್ಲಿ ಬಾಲ್ ರೂಮ್ ನಿರ್ಮಾಣ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಮತ್ತು ಅಕ್ಕಪಕ್ಕದ ಜನವಸತಿ ಪ್ರದೇಶಕ್ಕೆ ಶಬ್ದ ತೊಂದರೆಯಾಗಬಾರದೆಂಬ ಕಾರಣಕ್ಕೆ ಈ ರೀತಿ ವಿನ್ಯಾಸಗೊಳಿಸಲಾಗಿದೆ.
ಹೋಟೆಲ್‌ನಲ್ಲಿ ಅಧ್ಯಕ್ಷರ ಭದ್ರತೆಗಾಗಿ ವಿಶೇಷ ಪ್ರೆಸಿಡೆನ್ಷಿಯಲ್ ಟನಲ್ (Presidential Tunnel) ಅಥವಾ ಸುರಂಗ ಮಾರ್ಗವಿದೆ. ಅಧ್ಯಕ್ಷರು ತಮ್ಮ ವಾಹನದಿಂದ ಇಳಿದು ನೇರವಾಗಿ ಬಾಲ್‌ರೂಮ್‌ನ ವೇದಿಕೆಯ ಹಿಂಭಾಗಕ್ಕೆ ಯಾರಿಗೂ ಕಾಣಿಸದಂತೆ ಬರಲು ಇದು ಸಹಾಯ ಮಾಡುತ್ತದೆ. ಇದನ್ನೂ ಓದಿ: White House Dinner Shooting| 4 ಬಾರಿ ಟ್ರಂಪ್ ಹತ್ಯೆಗೆ ಯತ್ನ – ಯಾವಾಗ ಏನಾಗಿತ್ತು?
1981 ರಲ್ಲಿ ಅಧ್ಯಕ್ಷ ರೋನಾಲ್ಡ್ ರೇಗನ್ ಅವರು ಇದೇ ಬಾಲ್‌ರೂಮ್‌ನಲ್ಲಿ ಭಾಷಣ ಮುಗಿಸಿ ಹೊರಬರುವಾಗ ಅವರ ಮೇಲೆ ಹತ್ಯೆಯ ಯತ್ನ ನಡೆದಿತ್ತು. ಸಾಮಾನ್ಯ ಜನರು ಕೂಡ ಮದುವೆ ಅಥವಾ ದೊಡ್ಡ ಕಾರ್ಪೊರೇಟ್ ಕಾರ್ಯಕ್ರಮಗಳಿಗಾಗಿ ಈ ಬಾಲ್‌ರೂಮ್ ಬಾಡಿಗೆಗೆ ಪಡೆಯಬಹುದು. ಹೆಚ್ಚಾಗಿ ಇಲ್ಲಿ ಅಮೆರಿಕದ ಪ್ರಮುಖ ರಾಜಕೀಯ ಭಾಷಣಗಳು, ಉದ್ಯಮದ ದೊಡ್ಡ ಸಮ್ಮೇಳನಗಳು ಮತ್ತು ಅಂತರಾಷ್ಟ್ರೀಯ ಕಾರ್ಯಕ್ರಮಗಳು ನಡೆಯುತ್ತದೆ.



