ಬೆಂಗಳೂರು: ಈ ಸರ್ಕಾರ ಸತ್ತು ಹೋಗಿ ಬಹಳ ದಿನಗಳಾಗಿದೆ. ಇದನ್ನು ವೆಂಟಿಲೇಟರ್ ಮೇಲೆ ಇಟ್ಟಿದ್ದಾರೆ. ಜೀವ ಹೋಗಿದೆ ಎಂದು ವೈದ್ಯರು ಕೂಡ ಘೋಷಿಸಿ ಆಗಿದೆ ಎಂದು ಬಿಜೆಪಿ ಶಾಸಕ ನಡಹಳ್ಳಿ ಅವರು ದೋಸ್ತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾನ್ಯ ಸಿಎಂ ಅವರು ಬಹುಮತವನ್ನು ಕಳೆದುಕೊಂಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಗೊಂದಲ ಏರ್ಪಟ್ಟಿದೆ ಎಂದು ಅವರೇ ಹೇಳಿದ್ದಾರೆ. ಆದರೆ ಅವರು ತಕ್ಷಣ ರಾಜೀನಾಮೆ ನೀಡಬೇಕಿತ್ತು ಅಥವಾ ವಿಶ್ವಾಸ ಮತಯಾಚನೆ ಕೇಳಬೇಕು ಎಂದಿದ್ದರೆ ಶುಕ್ರವಾರವೇ ಕೇಳಬೇಕಿತ್ತು. ಆದರೆ ನಾನು ಬುಧವಾರ, ಗುರುವಾರ ಕೇಳುತ್ತೇನೆ ಎಂಬುದನ್ನು ಬಿಟ್ಟು ಸೋಮವಾರವೇ ವಿಶ್ವಾಸ ಮತಯಾಚನೆ ಕೇಳಲಿ ನಾವೆಲ್ಲ ತಯಾರಾಗಿದ್ದೇವೆ ಎಂದರು.
ಈ ಸರ್ಕಾರ ಸತ್ತು ಹೋಗಿ ಬಹಳ ದಿನವಾಗಿದೆ. ಇದನ್ನು ವೆಂಟಿಲೇಟರ್ ಮೇಲೆ ಇಟ್ಟಿದ್ದಾರೆ. ಜೀವ ಹೋಗಿದೆ ಎಂದು ವೈದ್ಯರು ಘೋಷಿಸಿ ಆಗಿದೆ. ಇನ್ನೇನಿದ್ದರೂ ಸಂಬಂಧಿಕರು ಬರುತ್ತಾರೆ ಇರಿ, ಸ್ವಲ್ಪ ಇರಿ ಎಂದು ಸ್ಪೀಕರ್ ಮೂಲಕ ಡೆಡ್ ಬಾಡಿಯನ್ನು ಇಟ್ಟುಕೊಂಡಿದ್ದಾರೆ. ಸ್ಪೀಕರ್ ಕೂಡ ಈ ಸರ್ಕಾರ ಸತ್ತೋಗಿದೆ ಎಂದಿದ್ದಾರೆ. ಆದರೆ ವೆಂಟಿಲೇಟರ್ ತೆಗೆಯಬೇಡಿ ಎಂದು ಸ್ಪೀಕರ್ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಸರ್ಕಾರದ ಬಗ್ಗೆ ನಡಹಳ್ಳಿ ವ್ಯಂಗ್ಯವಾಡಿದ್ದಾರೆ.
ನಮ್ಮ ಸಂಬಂಧಿಕರು ಮುಂಬೈನಲ್ಲಿದ್ದಾರೆ ಬರುತ್ತಾರೆ ಎಂದು ಈ ಸರ್ಕಾರವನ್ನು ಇರಿಸಿಕೊಂಡಿದ್ದಾರೆ. ಆದರೆ ಈ ಸರ್ಕಾರದ ಸತ್ತಿರುವ ಡೆಡ್‍ಬಾಡಿಯ ವಾಸನೆ ಇಡೀ ರಾಜ್ಯದ 6.5 ಕೋಟಿಯ ಮನೆಯವರ ಬಾಗಿಲಿಗೆ ಹೋಗಿ ಮೂಗಿಗೆ ಹೊಡೆಯುತ್ತಿದೆ. ಈಗಾಗಲೇ ಸರ್ಕಾರ ಸತ್ತು ಆರು ದಿನವಾಗಿದೆ. ದಯವಿಟ್ಟು ಈ ಸತ್ತು ಹೋಗಿರುವ ಡೆಡ್‍ಬಾಡಿಯ ವಾಸನೆ ಎಲ್ಲ ಕಡೆ ಹರಡಲು ಬಿಡಬೇಡಿ. ವೆಂಟಿಲೇಟರ್ ಅನ್ನು ಸೋಮವಾರ ಬೆಳಗ್ಗೆ 10 ಗಂಟೆಗೆ ತೆಗೆಯಿರಿ ಎಂದು ಸ್ಪೀಕರ್ ಬಳಿ ನಡಹಳ್ಳಿ ಮನವಿ ಮಾಡಿಕೊಂಡಿದ್ದಾರೆ.