ವಿಜಯಪುರ: ಸರ್ಕಾರ ಕೆಡವಲು 1,000 ಕೋಟಿ ರೆಡಿ ಮಾಡಿಕೊಂಡಿದ್ದಾರೆಂದು ಬಿಜೆಪಿ (BJP) ನಾಯಕರೇ ಹೇಳಿದ್ದಾರೆ ಎಂದು ಸಚಿವ ಶರಣ ಪ್ರಕಾಶ ಪಾಟೀಲ್ (Sharan Prakash Patil), ವಿಜಯಪುರ ಶಾಸಕ ಬಸನಗೌಡ ಪಾಟೀಲ್ (Basanagouda Patil Yatnal) ಅವರ ಹೇಳಿಕೆಯನ್ನ ಪುನರುಚ್ಛರಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿ, ಸರ್ಕಾರ ಕೆಡವಲು 1000 ಕೋಟಿ ರೂ. ತಯಾರಿ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬಿಜೆಪಿಯಲ್ಲಿ ಅವರೊಬ್ಬ ಪ್ರಮುಖ ನಾಯಕರಿದ್ದಾರೆ. ಅವರಿಗೆ ಏನು ಮಾಹಿತಿ ಇದೆ, ನನಗೆ ಗೊತ್ತಿಲ್ಲ. ಆದ್ರೆ ಸರ್ಕಾರ ಬೀಳಿಸಲು ಬಹಳ ದೊಡ್ಡ ಹಣ ಉಪಯೋಗ ಆಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಈ ಹಿಂದೆಯೂ 17 ಶಾಸಕರು ರಾಜೀನಾಮೆ ನೀಡಿದ್ದರು. ಇದೆಲ್ಲ ಹಣಬಲದ ಮೇಲೆ ಆಗಿದೆ. ಈಗಲೂ ಅದೇ ರೀತಿ ಪಿತೂರಿ ನಡೆಯುತ್ತಿರಬಹುದು ಎಂದು ಆಗ್ರಹಿಸಿದರು.ಇದನ್ನೂ ಓದಿ: ಭೋಪಾಲ್‌ನಲ್ಲಿ 1,814 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ – ಇಬ್ಬರು ಅರೆಸ್ಟ್
Advertisement
Advertisement
ಬಿಜೆಪಿಯವರು 4 ವರ್ಷ 2019 ರಿಂದ 2023ರ ವರೆಗೆ ರಾಜ್ಯವನ್ನ ವ್ಯವಸ್ಥಿತವಾಗಿ ಲೂಟಿ ಹೊಡೆದಿದ್ದಾರೆ. ಅವರು ಮಾಡಿದ ಕೆಲಸ ಕಾರ್ಯಗಳು, ನಡೆದುಕೊಂಡಂತಹ ರೀತಿ ಇದೆಲ್ಲವನ್ನು ನೋಡಿಯೇ ರಾಜ್ಯದ ಜನರು ನಮಗೆ ಬೆಂಬಲ ನೀಡಿದ್ದಾರೆ. 135 ಶಾಸಕರನ್ನ ಆಯ್ಕೆ ಮಾಡುವ ಮುಖಾಂತರ ಸ್ಥಿರ ಸರ್ಕಾರವನ್ನ ರಾಜ್ಯದ ಜನರು ನೀಡಿದ್ದಾರೆ. ಇದನ್ನ ಅಸ್ಥಿರಗೊಳಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಇದು ಸಂವಿಧಾನ ವಿರೋಧಿ ನೀತಿಯಾಗಿದೆ. ಇದರಿಂದ ರಾಜ್ಯದ ಜನರಿಗೆ ಹಾನಿಯಾಗುತ್ತಿದೆ. ರಾಜ್ಯದ ಜನರು ಇದನ್ನು ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
ವಿಪಕ್ಷದ ನಾಯಕ ಸ್ಥಾನಕ್ಕೆ ಆರ್.ಅಶೋಕ್ (R.Ashok) ರಾಜೀನಾಮೆ ವಿಚಾರವಾಗಿ ಮಾತನಾಡಿ, ನೋಡಿ ಅಧಿಕಾರದಲ್ಲಿದ್ದಾಗ ನೀವು ರಾಜೀನಾಮೆ ಕೊಟ್ಟು, ನಮಗೂ ಕೊಡಿ ಎಂದರೆ ಅದಕ್ಕೆ ಅರ್ಥ? ಆಗ ಅವರು ಕೊಟ್ಟಿಲ್ಲ. ಒಂದು ವೇಳೆ ಕೊಟ್ಟಿದ್ದರೆ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಬಹುದಿತ್ತು. ಸಿದ್ದರಾಮಯ್ಯ (CM Siddaramaiah) ಓರ್ವ ನಿಷ್ಕಳಂಕ, ಜನಪರ ನಾಯಕ. ಒಳ್ಳೆಯ ಆಡಳಿತ ನೀಡಿರುವಂತಹ ಸಿಎಂ ಇವರು ಎಂದರು.
Advertisement
ಗ್ಯಾರಂಟಿಗಳ ಬಗ್ಗೆ ಬಿಜೆಪಿ ಸುಳ್ಳು ಪ್ರಚಾರ:
ಇವತ್ತು ಬಿಜೆಪಿ ಅವರಿಗೆ ತಕರಾರು ಏನು ಎಂದರೆ, ನಮ್ಮ ಸರಕಾರ ರಾಜ್ಯದ ಜನರಿಗೆ 5 ಗ್ಯಾರಂಟಿಗಳನ್ನ (Gurantee) ನೀಡಿದೆ. ಇದರಿಂದ ರಾಜ್ಯದ ಜನರ ಮನಸ್ಥಿತಿ ಬದಲಾಗುತ್ತಿದೆ ಎಂಬ ಭಯ ಬಿಜೆಪಿಯವರಿಗೆ ಕಾಡುತ್ತಿದೆ. ಅದಕ್ಕಾಗಿ ಗ್ಯಾರಂಟಿಗಳನ್ನು ನೀಡಲು ಆಗುವುದಿಲ್ಲ ಎಂದು ಬಿಜೆಪಿಯವರು ಸುಳ್ಳು ಪ್ರಚಾರ ಮಾಡಿದ್ದಾರೆ. ಆದರೆ ನಾವು ಯಶಸ್ವಿಯಾಗಿ ಗ್ಯಾರಂಟಿಗಳನ್ನ ಈಡೇರಿಸಿದ್ದೇವೆ. ಈ ಗ್ಯಾರಂಟಿಗಳು ಈಡೇರಲ್ಲ ಎಂದು ಮೋದಿಯವರು (PM Modi) ಕೂಡ ಹೇಳಿದ್ದರು. ಅವರಿಗೆ ಭಯ ಶುರುವಾಗಿದೆ. ಅದಕ್ಕೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಎಐಸಿಸಿ ಅಧ್ಯಕ್ಷ ಹಾಗೂ ಸಚಿವ ಸತೀಶ ಜಾರಕಿಹೋಳಿ ಭೇಟಿ ವಿಚಾರವಾಗಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸಿಎಂ ಆಗುವ ಬಗ್ಗೆ ಚರ್ಚೆ ವದಂತಿಯಷ್ಟೇ. ಈ ಭೇಟಿ ಕುರಿತು ಈಗಾಗಲೇ ಸಿಎಂ ಸ್ಪಷ್ಟನೆ ನೀಡಿದ್ದಾರೆ. ದೆಹಲಿಗೆ ಹೋದ ಸಚಿವರು ಎಐಸಿಸಿ (AICC) ಆಧ್ಯಕ್ಷರನ್ನ ಭೇಟಿಯಾಗುತ್ತಾರೆ, ಇದು ಸಹಜ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.
ದಲಿತ ಸಿಎಂ ಆಗುವ ಕುರಿತು ಚರ್ಚೆ ವಿಚಾರವಾಗಿ ಮಾತನಾಡಿ, ಆ ರೀತಿ ಯಾವುದೇ ಮಾಹಿತಿ ಇಲ್ಲ. ಆ ರೀತಿಯ ಚಲನ ವಲನ ನಮ್ಮ ಗಮನಕ್ಕೆ ಬಂದಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ ಅಷ್ಟೇ. ದಲಿತ ಸಿಎಂ ಆಗುವ ವಿಚಾರದ ಕುರಿತು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಜಾತಿ ಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅನ್ನೋದಾದ್ರೆ ಹೋಗಲಿ: ಹರಿಪ್ರಸಾದ್ ಸ್ಫೋಟಕ ಹೇಳಿಕೆ