ಉಡುಪಿ: ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆದ್ದರೆ ದೈವಗಳಿಗೆ ನೇಮೋತ್ಸವ ಸೇವೆ ನೀಡುತ್ತೇವೆ ಎಂದು ಹರಕೆ ಕಟ್ಟಿಕೊಳ್ಳಲಾಗಿತ್ತು. ಅದರಂತೆ ಉಡುಪಿಯಲ್ಲಿ ಬಿಜೆಪಿ ಗೆದ್ದಿದಕ್ಕೆ ನಿರಂತರ 48 ಗಂಟೆಗಳ ಕಾಲ ದೈವಗಳ ಸೇವೆಯನ್ನು ಬಿಜೆಪಿ ಸಲ್ಲಿಸಿದೆ.
2018ರ ವಿಧಾನಸಭಾ ಚುನಾವಣೆ ಘೋಷಣೆಯಾದ ಕೂಡಲೇ ಉಡುಪಿಯ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ಕುಂಜಿಬೆಟ್ಟುವಿನ ಬಬ್ಬುಸ್ವಾಮಿಗೆ ಹರಕೆ ಹೇಳಿಕೊಂಡಿದ್ದರು. ಜಿಲ್ಲೆಯಲ್ಲಿ ಬಿಜೆಪಿಗೆ ಐದಕ್ಕೆ ಐದು ಸೀಟು ಗೆಲ್ಲಿಸಿಕೊಟ್ಟರೆ ಧರ್ಮ ನೇಮೋತ್ಸವ ಕೊಡುವುದಾಗಿ ದೇವರಲ್ಲಿ ನಿವೇದನೆ ಮಾಡಿಕೊಂಡಿದ್ದರು. ಅದರಂತೆ ನಮ್ಮ ಪಕ್ಷಕ್ಕೆ ಒಳ್ಳೆಯದಾಗಿದೆ. ಈಗ ಹರಕೆಯ ಕೋಲ ನೀಡುತ್ತಿದ್ದೇವೆ. ಕಾರ್ಯಕರ್ತರ ಶ್ರಮಕ್ಕೆ ದೇವರ ಅನುಗ್ರಹವೂ ಆಗಿದೆ. ಐದು ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವನ್ನು ಸಾಧಿಸಿದೆ ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪಬ್ಲಿಕ್ ಟಿವಿ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Advertisement
Advertisement
ಬಬ್ಬುಸ್ವಾಮಿ, ಧೂಮಾವತಿ ಬಂಟ, ಜೋಡಿ ಗುಳಿಗ, ನೀಚದೈವ- ಕೊರಗಜ್ಜ ದೈವಗಳಿಗೆ ಕೋಲ ಸೇವೆ ನೀಡಲಾಗಿದೆ. ಶಾಸಕರಾದ ಸುನೀಲ್ ಕುಮಾರ್, ರಘುಪತಿ ಭಟ್, ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕೂಡ ನೇಮೋತ್ಸವದಲ್ಲಿ ಹಾಜರಿದ್ದರು.
Advertisement
Advertisement
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯ ಪಕ್ಕದಲ್ಲೇ ಇರುವ ಗುಡಿಯಲ್ಲಿ ಎರಡು ದಿನಗಳ ಕಾಲ ನರ್ತನ ಸೇವೆ ನಡೆದಿದ್ದು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ವೇಳೆ ಸುಮಾರು 6,000 ಮಂದಿಗೆ ಅನ್ನದಾನವನ್ನೂ ಕೂಡ ಬಿಜೆಪಿ ನೀಡಿದೆ.
ಈ ಕುರಿತು ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ನಮ್ಮ ಜಿಲ್ಲಾ ಕಚೇರಿ ಪಕ್ಕದಲ್ಲೇ ದೈವಸ್ಥಾನ ಇದೆ. ವಿಧಾನಸಭೆ ಚುನಾವಣೆ ಘೋಷಣೆಯಾದ ಕೂಡಲೇ ಅಲ್ಲಿಗೆ ಹೋಗಿ ಪ್ರಾರ್ಥನೆ ಮಾಡಿದ್ದೆ. ಇದೀಗ ನೇಮೋತ್ಸವ ಮಾಡಿಸುತ್ತಿದ್ದೇವೆ. ಜಿಲ್ಲೆಯ ಎಲ್ಲಾ ನಾಯಕರು, ಕಾರ್ಯಕರ್ತರು ಹಾಗೂ ಮತದಾರರು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ಚುನಾವಣೆ ಬಂದಾಗ ಮಾತ್ರ ದೇವಸ್ಥಾನಗಳಲ್ಲಿ ಅರ್ಚನೆ ಪೂಜೆ ನೆರವೇರುತ್ತದೆ. ದೇವರಿಗೆ ಹರಕೆಯನ್ನೂ ಹೇಳಿಕೊಳ್ಳುತ್ತಾರೆ. ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಪಕ್ಷವೊಂದು ಹರಕೆಯ ಕೋಲವನ್ನು ಕೊಡುತ್ತಿದೆ. ದೈವದ ವಿಚಾರದಲ್ಲೂ ರಾಜಕೀಯ ಪ್ರವೇಶವಾಯ್ತಾ ಅಂತ ಕೆಲ ಧಾರ್ಮಿಕ ಮುಖಂಡರು ಕೊಂಚ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv