ಮಡಿಕೇರಿ: ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದ ಮೇಲೆ ಕಮಿಷನ್‌ಗಾಗಿ ಹಿಂದಿನ ಬಿಜೆಪಿ (BJP) ಸರ್ಕಾರದ ಕಾಮಗಾರಿ ತಡೆಹಿಡಿದಿದೆ ಎಂಬ ಕಾರಜೋಳ ಆರೋಪ ವಿಚಾರ ಹಿನ್ನೆಲೆ ಬಿಜೆಪಿಗರು ತಮ್ಮೊಳಗೆ ಬಡಿದಾಡಿಕೊಳ್ತಿದ್ದಾರೆ. ಅದನ್ನು ಮರೆಮಾಚಲು ಇಂತಹ ಆರೋಪ ಮಾಡ್ತಿದ್ದಾರೆ ಎಂದು ಸಚಿವ ಬೋಸರಾಜು (NS Boseraju) ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಡಗು (Kodagu) ಜಿಲ್ಲೆಯ ತಲಕಾವೇರಿ ಮಳೆಗಾಗಿ ವಿಶೇಷ ಪೂಜೆ ನೆರವೇರಿಸಿ ಮಾತಾನಾಡಿದ ಅವರು, ಯಾವುದೇ ಸರ್ಕಾರ ಬಂದಾಗಲೂ ಕೆಲಸ ಮಾಡಲು ಸಮಯ ಅಂತ ಬೇಕಾಗುತ್ತದೆ. ಗೋವಿಂದ ಕಾರಜೋಳ ಹಾಗೂ ಬಿಜೆಪಿಗರ ಕಾರ್ಯ ನೋಡಿ ಜನ ತಿರಸ್ಕಾರ ಮಾಡಿದ್ದಾರೆ. ಸದ್ಯದಲ್ಲೇ ಅಧಿವೇಶನ ಆರಂಭವಾಗುತ್ತೆ. ಎಲ್ಲರೂ ಅನುಭವಿಗಳಿದ್ದೇವೆ. ಜನಪರ ಆಡಳಿತ ನಡೆಸುತ್ತೇವೆ. ಅವರ ಪಕ್ಷದಲ್ಲೇ ಇನ್ನೂ ವಿರೋಧ ಪಕ್ಷದ ನಾಯಕ ಯಾರು ಅನ್ನೋ ಬಗ್ಗೆ ಕಿತ್ತಟ ಶುರುವಾಗಿದೆ. ಅದನ್ನು ಮುಚ್ಚಿಡಲು ನಾವು ವಿರೋಧ ಪಕ್ಷದಲ್ಲಿ ಇದೇವೆ ಎಂದು ಬಿಂಬಿಸಿಕೊಳ್ಳಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು. ಹೆಚ್‌ಡಿ ಕುಮಾರಸ್ವಾಮಿ ಸಿಎಂ ಆಗಿದ್ದವರು. ಅವರಿಗೆ ಸ್ವಲ್ಪ ತಾಳ್ಮೆ ಎನ್ನುವುದು ಇರಬೇಕು. ಆತುರದಲ್ಲಿ ಬುಲೆಟ್ ಹಾರಿಸುವುದು ಬೇಡ. ಅದರ ಬದಲು ಅವರು ಸರ್ಕಾರಕ್ಕೆ ಸಲಹೆ ಕೊಡಲಿ. ಈಗಾಗಲೇ ಅವರು ಜನರಿಂದ ತಿರಸ್ಕೃತರಾಗಿದ್ದಾರೆ. ಹೀಗೆ ಆಡಿದ್ರೆ ಇನ್ನಷ್ಟು ತಿರಸ್ಕೃತರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಅಕ್ಕಪಕ್ಕ ಕೂರಿಸಿಕೊಂಡು ಡಿಕೆಶಿ-ಅಶ್ವಥ್‍ಗೆ ನಿರ್ಮಲಾನಂದ ಶ್ರೀಗಳು ಕಿವಿಮಾತು
ಗ್ಯಾರಂಟಿಗಳನ್ನು ಜಾರಿ ಮಾಡದಿದ್ದರೆ ಧರಣಿಗೆ ಕೂರುತ್ತೇವೆ ಎಂಬ ಯಡಿಯೂರಪ್ಪರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ, ಯಡಿಯೂರಪ್ಪ 3-4 ಬಾರಿ ಸಿಎಂ ಆಗಿದ್ದವರು. ಸಮಯ ಹಿಡಿಯೋದು ಅವರಿಗೆ ಗೊತ್ತಿಲ್ವಾ? ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ 7 ಕೆಜಿ ಕೊಡ್ತಿತ್ತು. ಅದನ್ನು ಬಿಜೆಪಿ 5 ಕೆಜಿಗೆ ಇಳಿಸಿದ್ದು ಯಾಕೆ? ಇದನ್ನು ಯಡಿಯೂರಪ್ಪ ಹಾಗೂ ರಾಜ್ಯದ ಬಿಜೆಪಿ ಸಂಸದರು ಯಾಕೆ ಪ್ರಶ್ನೆ ಮಾಡುವುದಿಲ್ಲ? ಅಕ್ಕಿಯನ್ನು ಮೋದಿ ಏನು ಅವರ ಮನೆಯಿಂದ ತಂದು ಕೊಡುತ್ತಾರಾ? ಆಹಾರ ಭದ್ರತಾ ಕಾಯ್ದೆಯಲ್ಲಿ ಕೆಲವು ನಿಯಮಗಳಿವೆ. ಆ ಪ್ರಕಾರವೇ ನಾವು ಆಹಾರ ವಿತರಿಸುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ತಿಳಿಸಿದರು. ಇದನ್ನೂ ಓದಿ: ಗ್ಯಾರಂಟಿ ಎಫೆಕ್ಟ್; ಮಕ್ಕಳ ಶೂ, ಸಾಕ್ಸ್ ಖರೀದಿ ಹಣಕ್ಕೂ ಕಾಂಗ್ರೆಸ್ ಸರ್ಕಾರ ಕತ್ತರಿ