ಬಾಗಲಕೋಟೆ: ಬಿಜೆಪಿ ಹೈಕಮಾಂಡ್ ರಾಜಾಹುಲಿನ ಬೋನಿಂದ ಹೊರಗೆ ಬಿಡುತ್ತಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಥಿತಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಮಾರ್ಮಿಕವಾಗಿ ಮರುಕ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಯಡಿಯೂರಪ್ಪ ಗುಡುಗಿದ್ರೆ ವಿಧಾನಸೌಧ ನಡುಗುತ್ತೆ ಅನ್ನುತ್ತಿದ್ದರು. ಆದರೆ ಅವರು ಯಾಕೆ ಇಷ್ಟು ಅನುಮತಿಗೆ ಕಾಯ್ತಿದ್ದಾರೆ ಗೊತ್ತಾಗುತ್ತಿಲ್ಲ. ಬಿಎಸ್‍ವೈ ಬಗ್ಗೆ ನನಗೆ ಗೌರವ ಇದೆ. ಬಿಎಸ್‍ವೈ ಅವರು ಮಾಜಿ ಸಿಎಂ ನಿಜಲಿಂಗಪ್ಪ ಅವರ ನಂತರ ನಾಲ್ಕನೇ ಭಾರಿ ಸಿಎಂ ಆದವರು. ಆದರೆ ಹೈಕಮಾಂಡ್ ಅವರಿಗೆ ಕೆಲಸ ಮಾಡಲು ಬಿಡುತ್ತಿಲ್ಲ. ನಾನು ಬಿಎಸ್‍ವೈ ಸಲುವಾಗಿ ಮರುಕ ಪಡುತ್ತಿಲ್ಲ ಎನ್ನುತ್ತಾ ರಾಜ್ಯದ ಒಳತಿಗಾಗಿ ಮಂತ್ರಿ ಮಂಡಲ ಬೇಗ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
Advertisement
Advertisement
ಕೆಪೆಸಿಸಿ ಅಧ್ಯಕ್ಷ ಆಯ್ಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ. ದಿನೇಶ್ ಗುಂಡೂರಾವ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅಧ್ಯಕ್ಷರ ಆಯ್ಕೆ ಚೆಂಡು ಸದ್ಯ ಹೈಕಮಾಂಡ್ ಅಂಗಳದಲ್ಲಿದೆ. ಬಹಳಷ್ಟು ಆಕಾಂಕ್ಷಿಗಳಿದ್ದಾರೆ, ನಮ್ಮಲ್ಲಿ ಯಾವುದೇ ಬಣ ಎಂಬುದಿಲ್ಲ, ಕಾಂಗ್ರೆಸ್ ಒಂದೆ ಎಂದು ಸ್ಪಷ್ಟಪಡಿಸಿದರು.
Advertisement
ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಸೋನಿಯಾ ಗಾಂಧಿ ಭೇಟಿಯಾಗದ ವಿಚಾರಕ್ಕೆ ಪ್ರತಿಕ್ರಯಿಸಲು ನಿರಾಕರಿಸಿ ಎಸ್. ಆರ್ ಪಾಟೀಲ್, ಅವರು ಯಾಕೆ ದೆಹಲಿಗೆ ಹೋಗಿದ್ದರು ಗೊತ್ತಿಲ್ಲ. ಅವರಿಗೆ ಭೇಟಿ ಆದರೋ ಇಲ್ಲೋ ಎನ್ನೋದು ಗೊತ್ತಿಲ್ಲ. ಅದು ಅವರಿಗೆ ಗೊತ್ತು ಎಂದು ಸಮಂಜಸ ಉತ್ತರ ಕೊಡದೆ ಜಾರಿಕೊಂಡರು.
Advertisement
ಬಿಜೆಪಿ ಸರ್ಕಾರ ಮಂತ್ರಿಮಂಡಲ ವಿಸ್ತರಣೆ ವಿಚಾರವಾಗಿ ಮಾತನಾಡಿ, ತಿಂಗಳಾನುಗಟ್ಟಲೇ ಮಂತ್ರಿ ಮಂಡಲ ವಿಸ್ತರಣೆ ಮಾಡಲು ಆಗದ ಸರ್ಕಾರದ ಬಗ್ಗೆ ಜನ ಛೀ, ಥೂ ಎಂದು ಉಗುಳ್ತಿದ್ದಾರೆ. ಮಂತ್ರಿ ಮಂಡಲ ವಿಸ್ತರಣೆ ವಿಚಾರದ ಬಗ್ಗೆ ಹೈಕಮಾಂಡ್‍ನವರು ಸಿಎಂಗೆ ಸಲಹೆ ಕೊಡಬೇಕು. ಆದರೆ ಮಂತ್ರಿ ಮಂಡಲಕ್ಕಾಗಿ ಹಗ್ಗಜಗ್ಗಾಟ ನಡೆದಿದ್ದು, ನನ್ನ 45 ವರ್ಷದ ಸಾರ್ವಜನಿಕ ಬದುಕಿನಲ್ಲಿ ಈ ರೀತಿ ನೋಡಿದ್ದು ಇದೇ ಮೊದಲು. ಬಿಜೆಪಿ ಹೈಕಮಾಂಡ್‍ಗೆ ದೇವರು ಸದ್ಬುದ್ಧಿ ಕೊಡಲಿ. ಬೇಗ ಮಂತ್ರಿ ಮಂಡಲ ವಿಸ್ತರಣೆ ಮಾಡಲಿ. ಬಹಳಷ್ಟು ಜನ ನಾ ಮಂತ್ರಿ ಆಗ್ತೀನಿ, ನಾ ಮಂತ್ರಿ ಆಗ್ತೀನಿ ಎಂದು ಜಪ ಮಾಡಿಕೊಳ್ಳತ್ತ ಕುಳಿತಿದ್ದಾರೆಂದು ಲೇವಡಿ ಮಾಡಿದರು.