ಬಾಗಲಕೋಟೆ: ಸಿಂಧಗಿ, ಹಾನಗಲ್ ಎರಡು ಉಪಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದ್ದು, ಬಿಜೆಪಿ ಧೂಳಿಪಟವಾಗಲಿದೆ ಎಂದು ಪರಿಷತ್ ವಿಪಕ್ಷ ನಾಯಕ ಎಸ್‍ಆರ್ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತೆ, ಬಿಜೆಪಿ ಸೋಲುವುದು ನಿಶ್ಚಿತ ಎಂದು ಭವಿಷ್ಯ ನುಡಿದರು. ಹಾನಗಲ್ ಕ್ಷೇತ್ರದಲ್ಲಿ ಟಿಕೆಟ್ ವಿಚಾರವಾಗಿ ಭಿನ್ನಾಭಿಪ್ರಾಯ ಶುರುವಾಗಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಾನಗಲ್ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ನಮ್ಮ ಪಕ್ಷದಲ್ಲಿ ಒಮ್ಮತದಿಂದ ಒಬ್ಬರಿಗೆ ಟಿಕೆಟ್ ಕೊಡ್ತಾರೆ. ಕೊನೆಯಲ್ಲಿ ಪಕ್ಷದ ಅಭ್ಯರ್ಥಿ ಘೋಷಣೆಯಾಗಿ ಟಿಕೆಟ್ ಪೈಪೋಟಿ ಹೋಗುತ್ತೆ. ಟಿಕೆಟ್ ಸಿಗದಿದ್ದವರು ಕೂಡ ಒಟ್ಟಾಗಿ ಒಂದೇ ಕುಟುಂಬದ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಇದರಲ್ಲಿ ಅನುಮಾನವಿಲ್ಲ ಎಂದರು. ಇದನ್ನೂ ಓದಿ: ಪಾದಯಾತ್ರೆ ಶಾಪದಿಂದ ಬಿಎಸ್‍ವೈ ಅಧಿಕಾರ ಕಳೆದುಕೊಂಡರು: ಕಾಶಪ್ಪನವರ್
ಟಿಕೆಟ್ ಹಂಚಿಕೆ ವಿಚಾರದಲ್ಲಿ ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಭಿನ್ನಾಭಿಪ್ರಾಯ ವಿಚಾರವಾಗಿ ಪ್ರತಿಕ್ರಿಸಿದ ಅವರು, ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಜನ ಸುಮ್ಮನೆ ಹೇಳ್ತಾರೆ. ಇಬ್ಬರೂ ಒಂದು ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡುತ್ತಾರೆ. ಇಬ್ಬರ ಮಧ್ಯದಲ್ಲಿ ಒಮ್ಮತ ಇದೆ, ಐಕ್ಯತೆ ಇದೆ. ಸೌಹಾರ್ದಯುತವಾದ ವಾತಾವರಣವಿದೆ. ಇಬ್ಬರೂ ಪಕ್ಷದ ಸಂಘಟನೆಗೆ ಶತಗತ ಪ್ರಯತ್ನ ಮಾಡುತ್ತಾರೆ. ಇನ್ನುಳಿದ ನಮ್ಮಂತ ಹಿರಿಯ ನಾಯಕರು ಅವರೊಂದಿಗೆ ಕೈ ಜೋಡಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ನಿಖಿಲ್-ಪ್ರಜ್ವಲ್ – ಪಕ್ಷ ಕಟ್ಟಲು ಪಣತೊಟ್ಟ ಸಹೋದರರು
ಆರ್‌ಎಸ್‌ಎಸ್ ಇಲ್ಲದಿದ್ದರೆ ಸಿದ್ದರಾಮಯ್ಯ ಪಂಚೆ ಉದುರುತ್ತಿತ್ತು ಎಂಬ ಸಿಟಿ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಟಿ ರವಿಯವರ ಇಂತಹ ಹೇಳಿಕೆಗಳು ಅವರ ವ್ಯಕ್ತಿತ್ವಕ್ಕೆ ಶೋಭೆ ತರಲ್ಲ. ಸಿಟಿ ರವಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು. ನಮ್ಮ ನಾಲಿಗೆ ನಮ್ಮ ಸಂಸ್ಕೃತಿ ಹೇಳುತ್ತದೆ. ನಮ್ಮ ನಾಲಿಗೆಯಿಂದ ಒಳ್ಳೆಯ ಶಬ್ಧ ಬರಲಿಲ್ಲ ಅಂದರೆ ನಮಗೆ ಸಂಸ್ಕೃತಿ ಇಲ್ಲ ಅಂತಾ ಅನ್ನಬೇಕಾಗುತ್ತೆ. ಇಂತಹ ಕೆಳಮಟ್ಟದ ಮಾತುಗಳನ್ನು ಆಡಬಾರದು ಎಂದರು. ಪಕ್ಷದ ಸಿದ್ಧಾಂತದ ಮೇಲೆ ಮಾತನಾಡಬೇಕು. ವ್ಯಕ್ತಿಗತವಾಗಿ, ವೇಷಭೂಷಣದ ಬಗ್ಗೆ, ಮಾತಿನ ಬಗ್ಗೆ ಮಾತನಾಡೋದು ಸರಿಯಲ್ಲ. ಸಿಟಿ ರವಿ ಈ ರೀತಿ ಮಾತನಾಡಬಾರದು, ಇನ್ನು ಮುಂದೆ ಸರಿ ಮಾಡಿಕೊಳ್ಳುತ್ತಾರೆ ಅಂತಾ ಭಾವಿಸುತ್ತೇನೆ ಎಂದರು.
ಆರ್‌ಎಸ್‌ಎಸ್ ತಾಲಿಬಾನಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಬಿಜೆಪಿಗರು ವಾಗ್ದಾಳಿ ನಡೆಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ಧರಾಮಯ್ಯ ಯಾವ ಕಾರಣಕ್ಕೆ ಆ ರೀತಿ ಆರ್‌ಎಸ್‌ಎಸ್ ಬಗ್ಗೆ ಹೇಳಿದ್ದಾರೋ ಗೊತ್ತಿಲ್ಲ. ನೀವೇ ಅವರನ್ನು ಕೇಳಿ ಆ ಬಗ್ಗೆ ಅವರೇ ಹೇಳ್ತಾರೆ ಎಂದು ಹೇಳಿದರು.