ಪಾಟ್ನಾ: ಬಿಹಾರದಲ್ಲಿ ಇಂದು ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಆಗಿ 2ನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿ ಸರ್ಕಾರಕ್ಕೆ ನಿನ್ನೆ ನಿತೀಶ್ ಕುಮಾರ್ ಅಂತ್ಯ ಹಾಡಿದ್ದರು. ಇದೀಗ ಆರ್‌ಜೆಡಿ-ಜೆಡಿಯು-ಕಾಂಗ್ರೆಸ್ ಸೇರಿದಂತೆ 7 ಪಕ್ಷಗಳ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.
ಈ ಮೈತ್ರಿಯ ಹಿಂದಿನ ಅಸಲಿಯತ್ತಿನ ಬಗ್ಗೆ ಬಾರಿ ಚರ್ಚೆಯಾಗುತ್ತಿದೆ. ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡ ನಿತೀಶ್ ನಿರ್ಧಾರಕ್ಕೆ 2024ರಲ್ಲಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮುವ ಲೆಕ್ಕಾಚಾರವೂ ಇದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಇದನ್ನೂ ಓದಿ: ಬಿಜೆಪಿ- ಜೆಡಿಯು ಮೈತ್ರಿಗೆ ಗುಡ್‌ಬೈ – ನಿತೀಶ್ ರಾಜೀನಾಮೆಗೆ ಕಾರಣ ಏನು?
ಮೂಲಗಳ ಪ್ರಕಾರ ಇಂದು ಮಧ್ಯಾಹ್ನ 2 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ 8ನೇ ಬಾರಿ ಬಿಹಾರದ ಸಿಎಂ ಆಗಿ ನಿತೀಶ್ ಗದ್ದುಗೆ ಏರಲಿದ್ದಾರೆ. ಮಹಾಘಟಬಂಧನ್ ಸರ್ಕಾರದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಹೊಂದಿರುವ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೊತೆಗೆ, ಗೃಹ ಮಂತ್ರಿ, ಸ್ಪೀಕರ್ ಹುದ್ದೆಗೆ ತೇಜಸ್ವಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿರುವ ನಿತೀಶ್-ತೇಜಸ್ವಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಇದನ್ನೂ ಓದಿ: ಆ. 15ರವರೆಗೆ ಟಿಕೆಟ್ ಬುಕ್ ಆಗಿದ್ದವರಿಗೆ ಮಾತ್ರ ತಿರುಪತಿ ದರ್ಶನ
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಹುಮತಕ್ಕೆ 122 ಸಂಖ್ಯೆ ಬೇಕು. ಸದ್ಯ ನಿತೀಶ್ ಕುಮಾರ್ ಬೆನ್ನಿಗೆ 7 ಪಕ್ಷಗಳ 164 ಶಾಸಕರು ನಿಂತಿದ್ದಾರೆ. 77 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಸದ್ಯ ಏಕಾಂಗಿಯಾಗಿದೆ.
ಕಳೆದ ಕೆಲ ದಿನಗಳಿಂದ ಬಿಜೆಪಿ ಜೊತೆ ಅಂತರ ಕಾಯ್ದುಕೊಂಡು, ಆರ್‌ಜೆಡಿ-ಕಾಂಗ್ರೆಸ್ ಸಂಪರ್ಕದಲ್ಲಿದ್ದ ನಿತೀಶ್ ಕುಮಾರ್ ನಿನ್ನೆ ಬೆಳಗ್ಗೆ ಶಾಸಕರ ಸಭೆ ನಡೆಸಿ ಬಿಜೆಪಿ ಮೈತ್ರಿಗೆ ಗುಡ್‌ಬೈ ಹೇಳುತ್ತಿರುವ ಬಗ್ಗೆ, ಆರ್‌ಜೆಡಿ-ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚನೆ ಮಾಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡರು. ನಿತೀಶ್ ಕುಮಾರ್ ನಿರ್ಧಾರಕ್ಕೆ ಇಡೀ ಸಭೆ ಸರ್ವಾನುಮತದಿಂದ ಬೆಂಬಲ ಸೂಚಿಸಿತ್ತು. ಸಂಜೆ ರಾಜ್ಯಪಾಲ ಫಾಗು ಚೌಹಾಣ್ ಭೇಟಿಯಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಸ್ವಲ್ಪ ಹೊತ್ತಿನ ನಂತ್ರ ಆರ್‌ಜೆಡಿ-ಕಾಂಗ್ರೆಸ್ ಸೇರಿ ಇತರೆ ಪಕ್ಷಗಳೊಂದಿಗೆ ಜೊತೆಗೂಡಿ ಮಹಾಘಟಬಂಧನ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ರು. 164 ಶಾಸಕರ ಬೆಂಬಲ ಪತ್ರ ಕೊಟ್ಟ ನಿತೀಶ್ ಕುಮಾರ್, ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಪಕ್ಷ ಒಡೆಯಲು ಬಿಜೆಪಿ ಮುಂದಾಗಿದ್ದರಿಂದ ಮೈತ್ರಿಕೂಟದಿಂದ ಹೊರಬರಬೇಕಾಯಿತು ಅಂತಾ ನಿತೀಶ್ ಹೇಳಿದ್ದಾರೆ.