ಪಾಟ್ನಾ: ಪರೀಕ್ಷೆಯಲ್ಲಿ ಕಾಪಿ ಹೊಡೆಯೋ ವಿಷಯವಾಗಿ, ನಕಲಿ ಟಾಪರ್‍ಗಳ ವಿಷಯವಾಗಿ ಬಿಹಾರ ಶಿಕ್ಷಣ ಮಂಡಳಿ ಈ ಹಿಂದೆ ಸುದ್ದಿಯಾಗ್ತಿತ್ತು. ಇದೀಗ ವಿದ್ಯಾರ್ಥಿನಿಯೊಬ್ಬಳು ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಾಳೆಂದು ತಪ್ಪು ಫಲಿತಾಂಶ ನೀಡಿ ಮತ್ತೊಮ್ಮೆ ಸುದ್ದಿಯಾಗಿದೆ.
ವಿದ್ಯಾರ್ಥಿನಿಗೆ 5 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡುವಂತೆ ಇಲ್ಲಿನ ಹೈ ಕೋರ್ಟ್ ಬಿಹಾರ ಶಾಲಾ ಶಿಕ್ಷಣ ಮಂಡಳಿಗೆ ಆದೇಶಿಸಿದೆ.
ಆಗಿದ್ದೇನು?: ಬಿಹಾರದ ಸಾಹರ್ಸಾ ಜಿಲ್ಲೆಯ ಪ್ರಿಯಾಂಕಾ ಸಿಂಗ್ ಶಿಕ್ಷಣ ಮಂಡಳಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿ. ಇದೇ ವರ್ಷದ ಆರಂಭದಲ್ಲಿ ಪ್ರಕಟವಾದ 10ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ ಪ್ರಿಯಾಂಕಾ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಾಳೆಂದು ಫಲಿತಾಂಶ ಬಂದಿತ್ತು. ವಿಜ್ಞಾನದಲ್ಲಿ 29 ಅಂಕ, ಸಂಸ್ಕೃತದಲ್ಲಿ 4 ಅಂಕ ಬಂದಿತ್ತು. ಇಲ್ಲಿನ ಸರ್ಕಾರ ನಡೆಸುತ್ತಿರೋ ಡಿಡಿ ಹೈಸ್ಕೂಲ್ ವಿದ್ಯಾರ್ಥಿನಿಯಾದ ಪ್ರಿಯಾಂಕಾಗೆ ಫಲಿತಾಂಶದಲ್ಲಿ ಏನೋ ಎಡವಟ್ಟಾಗಿದೆ ಎನಿಸಿದ್ದು, ಕೂಡಲೇ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಳು.
ಮರುಮೌಲ್ಯಮಾಪನದ ಫಲಿತಾಂಶ ಬಂದಾಗ ಪ್ರಿಯಾಂಕಾಗೆ ಮತ್ತಷ್ಟು ಶಾಕ್ ಆಗಿತ್ತು. ಸಂಸ್ಕೃತದಲ್ಲಿ ಸಿಕ್ಕಿದ್ದ 4 ಅಂಕ 9 ಅಂಕಕ್ಕೆ ಏರಿಕೆಯಾಗಿದ್ದರೆ, ವಿಜ್ಞಾನದಲ್ಲಿ ಬಂದಿದ್ದ 29 ಅಂಕ 7 ಅಂಕಗಳಿಗೆ ಇಳಿದಿತ್ತು. ಹೀಗಾಗಿ ಆಕೆ ಪಾಟ್ನಾ ಹೈಕೋರ್ಟ್ ಮೊರೆ ಹೋಗಿದ್ದಳು.
ಆದ್ರೆ ಕೋರ್ಟ್ ವಿದ್ಯಾರ್ಥಿನಿಗೆ ಮೊದಲು 40 ಸಾವಿರ ರೂ. ಡೆಪಾಸಿಟ್ ಮಾಡಲು ಹೇಳಿತ್ತು. ಒಂದು ವೇಳೆ ಇದು ಗಂಭೀರ ಪ್ರಕರಣವಲ್ಲದಿದ್ದರೆ ಡೆಪಾಸಿಟ್ ಮಾಡಿದ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿತ್ತು.
ವಿದ್ಯಾರ್ಥಿನಿ ಹಣ ಡೆಪಾಸಿಟ್ ಮಾಡಿದ ನಂತರ ಆಕೆಯ ಉತ್ತರಪತ್ರಿಕೆಗಳನ್ನ ಒದಗಿಸುವಂತೆ ಕೋರ್ಟ್ ಶಾಲಾ ಮಂಡಳಿಗೆ ಆದೇಶಿಸಿತ್ತು. ಆದ್ರೆ ಅಧಿಕಾರಿಗಳು ಬೇರೆ ಯಾರದ್ದೋ ಉತ್ತರಪತ್ರಿಕೆಗಳನ್ನ ಪ್ರಿಯಾಂಕಾಳದ್ದು ಎಂದು ನೀಡಿದ್ದು, ಕೋರ್ಟ್ ನಲ್ಲಿ ಸಿಕ್ಕಿಬಿದ್ದಿದ್ದರು. ವಿದ್ಯಾರ್ಥಿನಿಯ ಬರವಣಿಗೆಗೂ ಉತ್ತರಪತ್ರಿಕೆಯಲ್ಲಿನ ಬರವಣಿಗೆಗೂ ವ್ಯತ್ಯಾಸವಿದ್ದ ಕಾರಣ ಆಕೆಯ ನಿಜವಾದ ಉತ್ತರಪತ್ರಿಕೆ ನೀಡುವಂತೆ ಕೋರ್ಟ್ ಹೇಳಿತ್ತು.
ಕೊನೆಗೆ ವಿದ್ಯಾರ್ಥಿನಿಗೆ ವಿಜ್ಞಾನದಲ್ಲಿ 80 ಅಂಕ ಹಾಗೂ ಸಂಸ್ಕೃತದಲ್ಲಿ 61 ಅಂಕಗಳನ್ನ ನೀಡಲಾಗಿದೆ. ಅಲ್ಲದೆ ಆಕೆಗೆ 5 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡಲು ಕೋರ್ಟ್ ಹೇಳಿದ್ದು, ಇಡೀ ಪ್ರಕರಣದ ಬಗ್ಗೆ ತನಿಖೆ ಮಾಡುವಂತೆ ಆದೇಶಿಸಿದೆ.
ಪ್ರಿಯಾಂಕಾ ಪ್ರಕರಣದಲ್ಲಿ ಉತ್ತರಪತ್ರಿಕೆಗಳ ಬಾರ್ ಕೋಡ್ ದೋಷದಿಂದ ಆಕೆಯ ಅಂಕಗಳು ಬದಲಾವಣೆಯಾಗಿದೆ ಎಂದು ಶಾಲಾ ಮಂಡಳಿಯ ಅಧಿಕಾರಿಗಳು ವಿವರಿಸಿದ್ದಾರೆ.
2015ರಲ್ಲಿ ಬಿಹಾರದ ಬೋರ್ಡ್ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ನೇಹಿತರು ಪರೀಕ್ಷಾ ಕೇಂದ್ರದ ಗೋಡೆಗಳನ್ನೇರಿ ಕಾಪಿ ಚೀಟಿಗಳನ್ನ ವಿದ್ಯಾರ್ಥಿಗಳಿಗೆ ನೀಡಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.