ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧದ ಪಂದ್ಯದಲ್ಲಿ ಬೌಂಡರಿ ತಡೆಯಲು ಹೋಗಿ ಫಿಲ್ ಸಾಲ್ಟ್ ಗಾಯಕ್ಕೆ ತುತ್ತಾಗಿದ್ದರು. ಅದಾದ ನಂತರ ಆರ್‌ಸಿಬಿ ಪರ ಕಣಕ್ಕಿಳಿಯದೇ ಇಂಗ್ಲೆಂಡ್‌ಗೆ ವಾಪಸ್ಸಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಜಾಕೋಬ್ ಬೆಥೆಲ್ ತಂಡಕ್ಕೆ ಸೇರಿಕೊಂಡಿದ್ದರು. ಇದೀಗ ಸಾಲ್ಟ್ ಗಾಯದಿಂದ ಚೇತರಿಸಿಕೊಂಡಿದ್ದು, ಭಾರತಕ್ಕೆ ವಾಪಾಸ್ ಆಗುವುದು ಖಚಿತವಾಗಿದೆ. ಆದರೆ, ಶುಕ್ರವಾರ ಹೈದರಾಬಾದ್ (SRH) ವಿರುದ್ಧ ನಡೆಯಲಿರುವ ಪಂದ್ಯದ ಪ್ಲೇಯಿಂಗ್-11 ನಲ್ಲಿ ಕಾಣಿಸಿಕೊಳ್ಳಲಿದ್ದಾರೋ? ಇಲ್ಲವೋ? ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಆದಾಯ – 230 ಕೋಟಿ ಪಡೆದ ಕೊಹ್ಲಿಗೆ ಅಗ್ರ ಸ್ಥಾನ

ಸಾಲ್ಟ್ ಗಾಯಕ್ಕೆ ತುತ್ತಾಗುವ ಮುನ್ನ 6 ಪಂದ್ಯವಾಡಿದ್ದರು. 168.33ರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 202 ರನ್ ಕಲೆಹಾಕಿದ್ದರು. ಇದರಲ್ಲಿ 2 ಅರ್ಧಶತಕ ಒಳಗೊಂಡಿವೆ. ಅದಲ್ಲದೆ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 36 ಎಸೆತಗಳಲ್ಲಿ 78 ರನ್‌ಗಳ ಸ್ಪೋಟಕ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.
ಪಾಯಿಂಟ್ಸ್ ಟೇಬಲ್‌ನಲ್ಲಿ 18 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿರುವ ಆರ್‌ಸಿಬಿ ತಂಡ ಹೈದರಾಬಾದ್ ವಿರುದ್ಧ ಗೆದ್ದರೆ ಕ್ವಾಲಿಫಯರ್-1ಕ್ಕೆ ಅರ್ಹತೆ ಪಡೆಯಲಿದೆ. ಜೊತೆಗೆ ಉತ್ತಮ ರನ್ ರೇಟ್ ಕೂಡ ಕಾಯ್ದುಕೊಳ್ಳಬೇಕಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಆರ್‌ಸಿಬಿ ತನ್ನ ಗೆಲುವಿನ ಲಯವನ್ನು ಮುಂದುವರೆಸಲು ಎದುರು ನೋಡುತ್ತಿದೆ. ಇತ್ತ ಹೈದರಾಬಾದ್ ಕೂಡ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಜಯ ದಾಖಲಿಸಿ ಗೆಲುವಿನ ವಿಶ್ವಾಸದಲ್ಲಿದೆ.ಇದನ್ನೂ ಓದಿ:ಕೈಗೆ ಗಾಯ – ಮುಂಬೈ ಇಂಡಿಯನ್ಸ್‌ನ ಇಬ್ಬರು ಆಟಗಾರರು ಐಪಿಎಲ್‌ಗೆ ಅಲಭ್ಯ

