– ಪಾಕಿಸ್ತಾನದಲ್ಲಿ ಅಲ್ಲ ನಮಗೆ ಭಾರತದಲ್ಲೇ ಹಿಂಸೆ
– ಮೋದಿಗೆ ಎಲ್ಲಿ ಹೇಗೆ ಮಾತನಾಡಬೇಕು ಅನ್ನೋದು ಗೊತ್ತಿಲ್ಲ
ಬೆಂಗಳೂರು: ಸಿಎಎ ಹಾಗೂ ಎನ್.ಆರ್.ಸಿ ಕಾಯ್ದೆ ವಿರೋಧಿಸಿ ಇವತ್ತು ಮೈಸೂರ್ ರಸ್ತೆಯ ಈದ್ಗಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಶಾಸಕ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾವಿರಾರು ಅಲ್ಪಸಂಖ್ಯಾತರು ಸೇರಿ, ಸಿಎಎ ಹಾಗೂ ಎನ್.ಆರ್.ಸಿ ವಿರುದ್ಧ ಗುಡುಗಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಜಮೀರ್ ಮಾತನಾಡಿ, ಪೌರತ್ವ ಕಾಯ್ದೆಯನ್ನು ಮೊದಲು ವಾಪಸ್ ಪಡೆಯಿರಿ. ನಾವು ಇರುವುದು ಹಿಂದೂಸ್ತಾನದಲ್ಲಿ. ನಾವು ನಮ್ಮ ಪೌರತ್ವವನ್ನ ರುಜುವಾತು ಪಡಿಸಬೇಕಿಲ್ಲ. ನಮ್ಮ ತಾತ, ಮುತ್ತಾತ ಎಲ್ಲರೂ ಇಲ್ಲಿಯೇ ಹುಟ್ಟಿದವರು. ಕಾಯ್ದೆಯ ಹೆಸರಿನಲ್ಲಿ ಧರ್ಮ ಎತ್ತಿಕಟ್ಟೋಕೆ ನಾವು ಬಿಡಲ್ಲ. ಇವತ್ತು ಇಡೀ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ. ವಿವಿಗಳಲ್ಲೂ ವಿದ್ಯಾರ್ಥಿಗಳು ಧರಣಿ ನಡೆಸ್ತಿದ್ದಾರೆ ಎಂದು ಹೇಳಿದರು.
Advertisement
Advertisement
ಈ ಕಾಯ್ದೆ ವಿರುದ್ಧ ಎಲ್ಲಾ ಕಡೆಯೂ ಹೋರಾಟ ನಡೆಯುತ್ತಿದೆ. ಬಿಜೆಪಿ ಆಡಳಿತವಿರುವ ಕಡೆಯೂ ವಿರೋಧ ವ್ಯಕ್ತವಾಗಿದೆ. ಕಾಯ್ದೆ ಜಾರಿಗೆ ಅವಕಾಶವಿಲ್ಲವೆಂದು ಹೇಳಿದ್ದಾರೆ. ನಿತೀಶ್ ಕುಮಾರ್ ಜಾರಿ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಒಡಿಶಾದಲ್ಲೂ ಕಾಂಗ್ರೆಸ್‍ಯೇತರ ಸರ್ಕಾರವಿದ್ದು ಅಲ್ಲಿಯೂ ಕಾಯ್ದೆಗೆ ವಿರೋಧವಿದೆ. ಸಿದ್ದಗಂಗಾ ಮಠಕ್ಕೆ ಪ್ರಧಾನಿ ಭೇಟಿ ನೀಡಿದ್ದರು, ಮಕ್ಕಳ ಮುಂದೆ ರಾಜಕೀಯ ಹೇಳಿಕೆ ಕೊಟ್ಟಿದ್ದಾರೆ. ಪಾಕಿಸ್ತಾನದ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಚಿಕ್ಕ ಮಕ್ಕಳ ಮೇಲೆ ಇದೆಂಥ ಪರಿಣಾಮ ಬೀರಬಹುದು? ಪ್ರಧಾನಿಯವರಿಗೆ ಎಲ್ಲಿ ಹೇಗೆ ಮಾತನಾಡಬೇಕೆಂದು ಗೊತ್ತಿಲ್ಲ ಎಂದು ಮೋದಿ ವಿರುದ್ಧ ಕಿಡಿಕಾರಿದರು.
Advertisement
ಅಂಬೇಡ್ಕರ್ ಬರೆದಿರುವ ಸಂವಿಧಾನ ನಮ್ಮದು, ಅದರಲ್ಲಿ ಸೆಕ್ಯೂಲರ್ ತತ್ವಕ್ಕೆ ಒತ್ತು ಕೊಟ್ಟಿದ್ದಾರೆ. ಸಂವಿಧಾನಕ್ಕಾದರೂ ಬೆಲೆ ಕೊಡಬೇಕಲ್ಲವೆ? ಅಂಬೇಡ್ಕರ್ ಸಂವಿಧಾನವನ್ನೇ ವಿರೋಧಿಸುವ ಮನಸ್ಸು ನಿಮ್ಮದು. ಬಿಹಾರ, ಒರಿಸ್ಸಾದಲ್ಲೇ ಕಾಯ್ದೆ ತರಲ್ಲ ಎಂದು ಹೇಳಿದ್ದಾರೆ. ಅದರೂ ಪ್ರಧಾನಿಯವರೇ ಕಾಯ್ದೆ ತರುತ್ತೇನೆ ಅನ್ನೋದು ಸರಿಯೇ. ಹುಟ್ಟಿದ ದಾಖಲೆ ಕೊಡಿ ಅಂದರೆ ಎಲ್ಲಿ ತರೋದು. ನನ್ನದೇ ಹುಟ್ಟಿದ ದಾಖಲೆ ಇರಲಿಲ್ಲ. ಮೊದಲು ಮೋದಿಯವರದ್ದು ದಾಖಲೆ ಇದೆಯೇ ಎಂದು ಕೇಳಬೇಕು, ಅವರ ಅಪ್ಪನದು ಆ ನಂತರ ನೋಡೋಣ ಎಂದು ಗುಡುಗಿದರು.
Advertisement
ನಾನ್ಯಾಕೆ ದಾಖಲೆ ಕೊಡಬೇಕು. ನಾನು ಇಲ್ಲೇ ಹುಟ್ಟಿರೋನು, ಇದೇ ನಮ್ಮ ದೇಶ. ಯಾರ ಹತ್ತಿರ ದಾಖಲೆ ಇದೆ ತೋರಿಸಿ. ವೇದಿಕೆ ಮೇಲೆ ಕೂರಲಿಲ್ಲವೇಕೆ ಎಂಬ ವಿಚಾರಕ್ಕೆ, ನನಗೆ ಯಾವ ಮೋದಿಯವರ ಹೆದರಿಕೆಯೂ ಇಲ್ಲ. ಐಟಿ ಇಲಾಖೆ ಬಗ್ಗೆಯೂ ನನಗೆ ಹೆದರಿಕೆಯಿಲ್ಲ. ಕೂರಲಿಲ್ಲ ಅಂದರೆ ಹೆದರಿಕೆ ಅಂತಾನಾ ನಾನು ಯಾರಿಗೂ ಹೆದರುವವನಲ್ಲ. ಪಾಕ್ ನಲ್ಲಿ ತೊಂದರೆಯಾದರೆ ನಮಗೇನು ಸಂಬಂಧ? ದೇಶದಲ್ಲಿ ಮುಸಲ್ಮಾನರಿಗೆ ಚಿತ್ರ ಹಿಂಸೆಯಾಗ್ತಿದೆ. ಯುಪಿಯಲ್ಲಿ 14 ಜನ ಮುಸ್ಲಿಮರು ಸತ್ತಿದ್ದಾರೆ. ಮಂಗಳೂರಿನಲ್ಲಿ ನಮ್ಮ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಪಾಕ್‍ನಲ್ಲಿ ಅಲ್ಲ ನಮಗೆ ಇಲ್ಲಿ ಚಿತ್ರ ಹಿಂಸೆ ಆಗುತ್ತಿದೆ ಎಂದು ಜಮೀರ್ ಆರೋಪ ಮಾಡಿದರು.